Saturday, March 20, 2021

ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಧರ್ಮ ವಿರೋಧಿ ಆರೋಪ

ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ

ಸಿ.ಎಂ ಖಾದರ್
    ಭದ್ರಾವತಿ, ಮಾ. ೨೦: ಸ್ವ ಧರ್ಮೀಯ ಕೆಲವರು ನನ್ನ ವಿರುದ್ಧ ವಿನಾಕಾರಣ ಧರ್ಮ ವಿರೋಧಿ ಆರೋಪದೊಂದಿಗೆ ತೇಜೋವಧೆ ಮಾಡುವ ಜೊತೆಗೆ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಳಿಸಿದ್ದು, ಕುತಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಸಿ.ಎಂ ಖಾದರ್ ಆಗ್ರಹಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷನಾಗಿದ್ದು, ಅಲ್ಲದೆ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದೇನೆ. ಎಲ್ಲಾ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಮನೋಭಾವ ನಮ್ಮದಾಗಿದೆ. ಸಂವಿಧಾನ ಸಹ ಈ ನಿಟ್ಟಿನಲ್ಲಿ ನಮಗೆ ಹಕ್ಕನ್ನು ನೀಡಿದೆ. ಅಲ್ಲದೆ ಪವಿತ್ರ ಕುರಾನ್ ಧರ್ಮಗ್ರಂಥದಲ್ಲೂ ಉಲ್ಲೇಖಿಸಲಾಗಿದೆ.  ಈಗಿರುವಾಗ ಇತ್ತೀಚಿಗೆ ಶಿವಮೊಗ್ಗದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜನಾಕ್ರೋಶ ಸಭೆಯ ಮೆರವಣಿಗೆಯಲ್ಲಿ ನಾನು ಘೋಷಣೆಗಳನ್ನು ಕೂಗುವಾಗ ಜೈ ಶ್ರೀರಾಮ್ ಘೋಷಣೆ ಸಹ ಕೂಗಿದ್ದೇನೆ.  ಜೆಬಿಟಿ ಬಾಬು ಎಂಬುವರು ನಾನು ಜೈ ಶ್ರೀರಾಮ್ ಘೋಷಣೆ ಕೂಗುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸಫ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಧರ್ಮ ವಿರೋಧಿ ಎಂದು ಅಪಪ್ರಚಾರ ನಡೆಸುವ ಮೂಲಕ ತೇಜೋವಧೆಗೆ ಮುಂದಾಗಿದ್ದಾರೆ. ಈ ವಿಚಾರ ಸಹ ಧರ್ಮಗುರುಗಳ ಗಮನಕ್ಕೆ ತರಲಾಗಿದೆ. ಧರ್ಮ ಗುರುಗಳು ಸಹ ಈ ವಿಚಾರವನ್ನು ದೊಡ್ಡದಾಗಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೂ ಸಹ ನನ್ನನ್ನು ತೇಜೋವಧೆ ಮಾಡಲು ಮುಂದಾಗುತ್ತಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದರು.
    ನನ್ನ ಏಳಿಗೆಯನ್ನು ಸಹಿಸದ ಸ್ವಯಂ ಘೋಷಿತ ಮುಖಂಡರಾದ ಜೆಬಿಟಿ ಬಾಬು, ನಗರಸಭಾ ಸದಸ್ಯರಾದ ಟಿಪ್ಪುಸುಲ್ತಾನ್, ಮುರ್ತುಜಾಖಾನ್, ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷರಾದ ಫೀರ್‌ಷರೀಫ್, ಬಾಬಾಜಾನ್, ಬೊಮ್ಮನಕಟ್ಟೆ ನಿವಾಸಿ ಮಸ್ತಾನ್, ಬ್ರೋಕರ್ ಖಾದರ್, ಭೂತನಗುಡಿ ನಿವಾಸಿ ಜಾವಿದ್ ಸೇರಿದಂತೆ ಇನ್ನಿತರರು ನನನ್ನು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನ ಕೆಳಗಿಳಿಸಲು ಹಲವಾರು ತಿಂಗಳುಗಳಿಂದ ಹುನ್ನಾರ ನಡೆಸುತ್ತಿದ್ದು, ಈ ಹಿಂದೆ ಸಹ ಇದೆ ರೀತಿ ಹುನ್ನಾರ ನಡೆಸಿದ್ದರು. ಇದೀಗ ಜೈಶ್ರೀರಾಮ್ ಘೊಷಣೆಯನ್ನು ನೆಪವಾಗಿಟ್ಟುಕೊಂಡು ಅಧಿಕಾರದಿಂದ ಕೆಳಗಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
    ಈಗಾಗಲೇ ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಈ ವಿಚಾರವನ್ನು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಗಳ ಗಮನಕ್ಕೂ ತರಲಾಗುವುದು. ನಾನು ಯಾವುದೇ ದ್ರೇಶದ್ರೋಹಿ ಅಥವಾ ಧರ್ಮ ವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಇದನ್ನು ಈಗಲೂ ಸಮರ್ಥಿಸಿಕೊಳ್ಳಲು ಸಿದ್ದನಿದ್ದೇನೆ. ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು ಎಂದರು.

No comments:

Post a Comment