Wednesday, August 4, 2021

ವಿದ್ಯುತ್ ಪ್ರಸರಣ ಖಾಸಗೀಕರಣ : ರೈತರಿಗೆ ಸಂಚಕಾರ

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಡಿ.ವಿ ವೀರೇಶ್ ಆತಂಕ


ಭದ್ರಾವತಿಯಲ್ಲಿ ಬುದವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುಖಂಡರು ಮಾತನಾಡಿದರು.
    ಭದ್ರಾವತಿ, ಆ. ೪: ಕೇಂದ್ರ ಸರ್ಕಾರ ವಿದ್ಯುತ್ ಪ್ರಸರಣ ಸಹ ಖಾಸಗೀಕರಣಗೊಳಿಸಲು ಮುಂದಾಗುತ್ತಿರುವುದು ಮುಂದಿನ ದಿನಗಳಲ್ಲಿ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ಆತಂಕ ವ್ಯಕ್ತಪಡಿಸಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ sಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿವೆ. ಕೇಂದ್ರ ಸರ್ಕಾರ ಪ್ರಮುಖವಾದ ೩ ರೈತ ವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೊಳಿಸಲು ಮುಂದಾಗುತ್ತಿದ್ದು, ಇದರ ವಿರುದ್ಧ ದೆಹಲಿಯಲ್ಲಿ ಕಳೆದ ೮ ತಿಂಗಳಿನಿಂದ ನಿರಂತರವಾಗಿ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
    ಕೇಂದ್ರ ಸರ್ಕಾರ ಈ ಹಿಂದೆ ವಿದ್ಯುಚ್ಛಕ್ತಿ ಉತ್ಪಾದನೆ ಖಾಸಗೀಕರಣಗೊಳಿಸಿತ್ತು.  ಇದೀಗ ವಿದ್ಯುತ್ ಪ್ರಸರಣ ಸಹ ಖಾಸಗೀಕರಣಗೊಳಿಸಲು ಮುಂದಾಗುತ್ತಿದೆ. ಪಂಪ್‌ಸೆಟ್‌ಗಳ ಮೂಲಕ ಬೆಳೆ ಬೆಳೆಯುತ್ತಿರುವ ರೈತರಿಗೆ ಮುಂದಿನ ದಿನಗಳಲ್ಲಿ ಸಂಚಕಾರ ಎದುರಾಗಿದೆ. ಈ ಹಿನ್ನಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
      ಆ.೬ರಂದು ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ :
    ತಾಲೂಕಿನ ಜೀವ ನದಿ ಭದ್ರಾ ನದಿ ಜಲಾಶಯ ಈ ಬಾರಿ ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠರಾದ ಕೆ.ಟಿ ಗಂಗಾಧರ್‌ರವರ ನೇತೃತ್ವದಲ್ಲಿ ಆ.೬ರಂದು ಮಧ್ಯಾಹ್ನ ೧೨ ಗಂಟೆಗೆ ರೈತರು ಭದ್ರಾ ಜಲಾಶಯದಲ್ಲಿ ಗಂಗಾ ಪೂಜೆಯೊಂದಿಗೆ ಬಾಗಿನ ಸಮರ್ಪಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
  ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಜಿಲ್ಲಾ ಕಾರ್ಯದರ್ಶಿ ಕೆ.ಸಿ ಗಂಗಾಧರಪ್ಪ, ಮಂಜುನಾಥೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಆಂಧ್ರ ಪ್ರದೇಶದಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ, ಕೊಲೆ : ಪ್ರತಿಭಟನೆ

ತಪ್ಪಿತಸ್ಥರನ್ನು ಬಂಧಿಸಿ ಗಲ್ಲಿಗೇರಿಸಿ : ಕೃಷ್ಣಾ ನಾಯ್ಕ

ಆಂಧ್ರ ಪ್ರದೇಶದಲ್ಲಿ ಬಣಜಾರ್ ಸಮುದಾಯದ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಆಂಧ್ರ ಪ್ರದೇಶದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಆ. ೪: ಆಂಧ್ರ ಪ್ರದೇಶದಲ್ಲಿ ಬಣಜಾರ್ ಸಮುದಾಯದ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಆಗ್ರಹಿಸಿದರು.
    ಬುಧವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಆಂಧ್ರ ಪ್ರದೇಶದ ಚಂದ್ರ ಬಾಂಡ್ಯ ತಾಂಡದಲ್ಲಿ ಹೈದ್ರಾಬಾದ್, ಮುಂಬೈಗೆ ವಲಸೆ ಬಂದಂತಹ ಬಣಜಾರ್ ಸಮುದಾಯದ ಹೆಣ್ಣು ಮಗಳನ್ನು ಅಲ್ಲಿನ ಸ್ಥಳೀಯ ಯುವಕರು ಬಲವಂತಾಗಿ ಅರಣ್ಯಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಸುಟ್ಟು ಹಾಕುವ ಮೂಲಕ ಕ್ರೌರ್ಯ ಮೆರೆದಿದ್ದಾರೆ. ಈ ಅತ್ಯಾಚಾರದಲ್ಲಿ ಭಾಗಿಯಾಗಿರುವ ಕಾಮುಕರನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸಬೇಕೆಂದರು.
    ಈ ಪ್ರಕರಣವನ್ನು ಆಂಧ್ರ ಪ್ರದೇಶದ ಗೃಹ ಸಚಿವರು ಗಂಭಿರವಾಗಿ ಪರಿಗಣಿಸಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸುವ ಜೊತೆಗೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಹೆಣ್ಣು ಮಗಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
      ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಆಂಧ್ರ ಪ್ರದೇಶದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಬಣಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್, ಪ್ರಮುಖರಾದ ಬಿಜೆಪಿ ಮಂಡಲ ಕಾರ್ಯದರ್ಶಿ ಹನುಮಂತನಾಯ್ಕ, ಚಂದು, ಪ್ರವೀಣಕುಮಾರ್, ಓಂಕಾರನಾಯ್ಕ, ನಾಗಾನಾಯ್ಕ, ಮಂಜುನಾಯ್ಕ, ಶಂಕರನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.