Wednesday, August 4, 2021

ಆಂಧ್ರ ಪ್ರದೇಶದಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ, ಕೊಲೆ : ಪ್ರತಿಭಟನೆ

ತಪ್ಪಿತಸ್ಥರನ್ನು ಬಂಧಿಸಿ ಗಲ್ಲಿಗೇರಿಸಿ : ಕೃಷ್ಣಾ ನಾಯ್ಕ

ಆಂಧ್ರ ಪ್ರದೇಶದಲ್ಲಿ ಬಣಜಾರ್ ಸಮುದಾಯದ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಆಂಧ್ರ ಪ್ರದೇಶದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಆ. ೪: ಆಂಧ್ರ ಪ್ರದೇಶದಲ್ಲಿ ಬಣಜಾರ್ ಸಮುದಾಯದ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಆಗ್ರಹಿಸಿದರು.
    ಬುಧವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಆಂಧ್ರ ಪ್ರದೇಶದ ಚಂದ್ರ ಬಾಂಡ್ಯ ತಾಂಡದಲ್ಲಿ ಹೈದ್ರಾಬಾದ್, ಮುಂಬೈಗೆ ವಲಸೆ ಬಂದಂತಹ ಬಣಜಾರ್ ಸಮುದಾಯದ ಹೆಣ್ಣು ಮಗಳನ್ನು ಅಲ್ಲಿನ ಸ್ಥಳೀಯ ಯುವಕರು ಬಲವಂತಾಗಿ ಅರಣ್ಯಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಸುಟ್ಟು ಹಾಕುವ ಮೂಲಕ ಕ್ರೌರ್ಯ ಮೆರೆದಿದ್ದಾರೆ. ಈ ಅತ್ಯಾಚಾರದಲ್ಲಿ ಭಾಗಿಯಾಗಿರುವ ಕಾಮುಕರನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸಬೇಕೆಂದರು.
    ಈ ಪ್ರಕರಣವನ್ನು ಆಂಧ್ರ ಪ್ರದೇಶದ ಗೃಹ ಸಚಿವರು ಗಂಭಿರವಾಗಿ ಪರಿಗಣಿಸಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸುವ ಜೊತೆಗೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಹೆಣ್ಣು ಮಗಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
      ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಆಂಧ್ರ ಪ್ರದೇಶದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಬಣಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್, ಪ್ರಮುಖರಾದ ಬಿಜೆಪಿ ಮಂಡಲ ಕಾರ್ಯದರ್ಶಿ ಹನುಮಂತನಾಯ್ಕ, ಚಂದು, ಪ್ರವೀಣಕುಮಾರ್, ಓಂಕಾರನಾಯ್ಕ, ನಾಗಾನಾಯ್ಕ, ಮಂಜುನಾಯ್ಕ, ಶಂಕರನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment