ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯಕ್ಕೆ ಭದ್ರಾವತಿ ತಾಲೂಕಿನ ಕೊಡುಗೆ ಕುರಿತ ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ, ಡಿ. ಮಂಜುನಾಥ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಆ. ೪: ಪ್ರಸ್ತುತ ದೇಶದಲ್ಲಿ ನಂಬಿಕೆ ಎಂಬುದು ದೂರವಾಗಿದ್ದು, ಮೋಸ, ವಂಚನೆ ಹೆಚ್ಚಾಗಿದೆ. ಇದರ ವಿರುದ್ಧ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಅವರು ಗುರುವಾರ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯಕ್ಕೆ ಭದ್ರಾವತಿ ತಾಲೂಕಿನ ಕೊಡುಗೆ ಕುರಿತ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದರು.
ಬ್ರಿಟಿಷರು ಈ ದೇಶದ ಜನರನ್ನು ದಾಸ್ಯಕ್ಕೆ ಒಳಪಡಿಸಿ ೨೦೦ ವರ್ಷಗಳ ಆಳ್ವಿಕೆ ನಡೆಸಿದ್ದು, ಇಂತಹ ಸಂದರ್ಭದಲ್ಲಿ ದಾಸ್ಯಕ್ಕೆ ಒಳಗಾದ ದೇಶದ ಜನರಲ್ಲಿ ಮಹಾತ್ಮಗಾಂಧಿ ಒಳಗೊಂಡಂತೆ ಅನೇಕ ರಾಷ್ಟ್ರ ನಾಯಕರು ದೇಶಭಕ್ತಿ ಅಭಿವ್ಯಕ್ತಿಗೊಳಿಸಿ ಜಾಗೃತಿ ಮೂಡಿಸುವ ಮೂಲಕ ಹೋರಾಟಕ್ಕೆ ಪ್ರೇರೇಪಿಸಿದರು. ಅಂದು ದೇಶದ ಜನರು ರಾಷ್ಟ್ರ ನಾಯಕರ ಮೇಲೆ ನಂಬಿಕೆ ಹೊಂದಿದ್ದರು. ಸಾವಿರಾರು ಯುವ ಸಮೂಹ ತಮ್ಮ ಶೈಕ್ಷಣಿಕ ಬದುಕನ್ನು ಸ್ವಾತಂತ್ರ್ಯಕ್ಕಾಗಿ ಬಲಿಕೊಟ್ಟು ಹೋರಾಟಕ್ಕೆ ಧುಮುಕಿದರು. ಇದರ ಫಲವಾಗಿ ನಾವೆಲ್ಲರೂ ಇಂದು ೭೫ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸುವಂತಾಗಿದೆ ಎಂದರು.
೭೫ರ ಸ್ವಾತಂತ್ರ್ಯ ಸಂಭ್ರಮ ಕೇವಲ ಧ್ವಜಗಳನ್ನು ಹಾರಿಸುವುದಲ್ಲ ಬದಲಾಗಿ ನಮ್ಮ ಮುಂದಿನ ಸವಾಲುಗಳ ಬಗ್ಗೆ ಅವಲೋಕಿಸುವುದು, ಹೋರಾಟಗಳನ್ನು ರೂಪಿಸುವುದಾಗಿದೆ. ಪ್ರಸ್ತುತ ದೇಶದಲ್ಲಿ ನಂಬಿಕೆ ಇಲ್ಲವಾಗಿದೆ. ಮೋಸ, ವಂಚನೆ ಅಧಿಕವಾಗಿದೆ. ನಾವೆಲ್ಲರೂ ಸಂವಿಧಾನವನ್ನು ಗೌರವಿಸುವ ಮೂಲಕ ಅದರ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುವ ಜೊತೆಗೆ ಭವಿಷ್ಯದ ಸರ್ಕಾರ ಆಯ್ಕೆ ಮಾಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಇಂದು ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಳವಾಗಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಕೌಶಲ್ಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕು. ಮುಂದೊಂದು ದಿನ ಯಾವುದೋ ಕಾರ್ಖಾನೆಯಲ್ಲಿ ನೌಕರನಾಗಿರುವ ಬದಲು ಒಂದಿಷ್ಟು ಜನರಿಗೆ ಉದ್ಯೋಗ ನೀಡುವಷ್ಟರ ಮಟ್ಟಿಗೆ ಬೆಳೆಯಬೇಕೆಂಬ ಗುರಿ ಹೊಂದಬೇಕು. ಆ ನಿಟ್ಟಿನಲ್ಲಿ ಮುನ್ನಡೆಯಬೇಕೆಂದು ಕರೆ ನೀಡಿದರು.
ಉದ್ಯಮಿ ಬಿ.ಕೆ ಜಗನ್ನಾಥ ಕಾರ್ಯಕ್ರಮ ಉದ್ಘಾಟಿಸಿದರು. ಪಾಂಶುಪಾಲ ಮಹಾಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ತಾಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ ಉಪನ್ಯಾಸ ನೀಡಿದರು.
ಹಿರಿಯ ಸಾಹಿತಿ ಜಿ.ವಿ ಸಂಗಮೇಶ್ವರ್, ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕಾರ್ಯದರ್ಶಿ ಎಂ.ಈ ಜಗದೀಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಎಚ್.ಆರ್ ಶ್ರೀಧರೇಶ್ ಭಾರದ್ವಾಜ್ ನಿರೂಪಿಸಿದರು. ಕೆ.ಟಿ ಪ್ರಸನ್ನ, ಬಿ. ಗುರು, ಉಮರ್ ಕೋಯ, ಉಪನ್ಯಾಸಕ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.