Thursday, May 28, 2020

ಯುವಕನ ಮೇಲೆ ಹಲ್ಲೆ


ಭದ್ರಾವತಿ, ಮೇ. ೨೮: ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಖಬರ್‌ಸ್ಥಾನ ಬಳಿ ಮೂವರು ಯುವಕರ ನಡುವೆ ಜಗಳ ನಡೆದು ಓರ್ವನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಮೆಹಬೂಬ್ ಪಾಷ(೨೮) ಎಂಬಾತ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮುಬಾರಕ್(೨೨) ಮತ್ತು ಶಕಿಬ್ ಎಂಬುವರ ಜೊತೆ ಸೇರಿ ಮೆಹಬೂಬ್ ಪಾಷ ಮದ್ಯಪಾನ ಮಾಡುತ್ತಿದ್ದಾಗ ಯಾವುದೋ ಕಾರಣಕ್ಕೆ ಜಗಳ ಉಂಟಾಗಿದ್ದು, ಮೆಹಬೂಬ್ ಪಾಷ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಮ್ಮನಕಟ್ಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಓ.ಸಿ, ಇಸ್ಪೀಟ್ ಸೇರಿದಂತೆ ಇನ್ನಿತರ ಜೂಜಾಟ, ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಆಗಾಗ ಈ ರೀತಿಯ ಘಟನೆಗಳು ಮರುಗಳಿಸುತ್ತಿದ್ದು, ಪೊಲೀಸ್ ಇಲಾಖೆ ಈ ಭಾಗದಲ್ಲಿ ಹೆಚ್ಚಿನ ಕಾರ್ಯಾಚರಣೆ ಕೈಗೊಂಡು ಕಾನೂರು ಬಾಹಿರ ಚಟುವಟಿಕೆಗಳಿಗೆ ಕಡಿವಾಣಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿಯಲ್ಲಿ ಛಲವಾದಿ ಮಹಾಸಭಾ ವತಿಯಿಂದ ಗುರುವಾರ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು. 
ಭದ್ರಾವತಿ, ಮೇ. ೨೮: ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಛಲವಾದಿ ಮಹಾಸಭಾ ಮುಂದಾಗಿದ್ದು, ಗುರುವಾರ ನಗರದ ವಿವಿದೆಡೆ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.
ನಗರದ ವಿವಿದೆಡೆ ಛಲವಾದಿ ಸಮಾಜದ ಕಡು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಧ್ಯವಾದಷ್ಟು ನೆರವು ನೀಡಬೇಕೆಂಬ ಉದ್ದೇಶದೊಂದಿಗೆ ಹಂತ ಹಂತವಾಗಿ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ. ಕಳೆದ ೩ ದಿನಗಳ ಹಿಂದೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮತ್ತು ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
  ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಮುಖಂಡರಾದ ಜಯರಾಜ್, ಮಹೇಶ್, ಗೋಪಾಲ್, ಅರುಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬಲವಂತವಾಗಿ ಶಾಲಾ ಶುಲ್ಕ ವಸೂಲಾತಿ ಮಾಡುವಂತಿಲ್ಲ

ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಎಚ್ಚರಿಕೆ 

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಗುರುವಾರ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಯಿತು. 
ಭದ್ರಾವತಿ, ಮೇ. ೨೮: ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಬಲವಂತದಿಂದ ಶಾಲಾ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು ತಹಸೀಲ್ದಾರ್ ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. 
ಅವರು ಗುರುವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಪ್ರಸ್ತುತ ಕೊರೋನಾ ವೈರಸ್ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂದಿಗ್ದ ಪರಿಸ್ಥಿತಿಯಲ್ಲಿ ಬಲವಂತವಾಗಿ ಶಾಲಾ ಶುಲ್ಕ ವಸೂಲಾತಿ ಮಾಡಬಾರದು. ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದೆ. ಇದನ್ನು ಪಾಲಿಸುವಂತೆ ಮನವಿ ಮಾಡಿದರು. 
ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಮಾತನಾಡಿ, ಶಾಲಾ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ಹಾಗು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ತಹಸೀಲ್ದಾರ್‌ರವರು ಪೂರಕವಾಗಿ ಸ್ಪಂದಿಸಿ ಸಭೆ ಕರೆದಿದ್ದು, ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಈ ಬಾರಿ ಶಾಲಾ ಶುಲ್ಕ ವಸೂಲಾತಿ ಮಾಡಬಾರದು. ಅದರಲ್ಲೂ ಭದ್ರಾವತಿಯಂತಹ ನಗರದಲ್ಲಿ ಶ್ರೀಸಾಮಾನ್ಯರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಉದ್ಯೋಗವಿಲ್ಲದೆ ದಿನದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಖಾಸಗಿ ಶಾಲೆಗಳು ಸಹಕರಿಸಬೇಕು. ಅಲ್ಲದೆ ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದ್ದು, ಇದನ್ನು ಪಾಲಿಸುವ ಮೂಲಕ ಶ್ರೀಸಾಮಾನ್ಯರ ನೆರವಿಗೆ ಮುಂದಾಗುವಂತೆ ಕೋರಿದರು. 
ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ, ಬಲವಂತವಾಗಿ ಶುಲ್ಕ ವಸೂಲಾತಿ ಮಾಡಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು. 
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ರಾಜಶೇಖರ್, ಶಿಕ್ಷಣ ಸಂಯೋಜಕ ರವಿಕುಮಾರ್, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಇಬ್ರಾಹಿಂ ಖಾನ್, ಪೀಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ೫೨ ಖಾಸಗಿ ಶಾಲೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಗೊಂದಿ ನಾಲೆಗೆ ಹಾರಿ ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ

ಭದ್ರಾವತಿಯಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಮೃತದೇಹಗಳನ್ನು ಗುರುವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಿಂದಿರುಗಿಸಲಾಯಿತು. 
ಭದ್ರಾವತಿ, ಮೇ. ೨೮: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 
ನಗರಸಭೆ ವ್ಯಾಪ್ತಿಯ ನೆಹರು ನಗರ ನಿವಾಸಿ ಚಂದ್ರಕಲಾ(೩೩), ಹೆಣ್ಣು ಮಕ್ಕಳಾದ ಶ್ವೇತಾ(೮) ಮತ್ತು ರೋಹಿಣಿ(೪) ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಕೋಡಿಹಳ್ಳಿ ಗ್ರಾಮದ ಗೊಂದಿ ನಾಲೆಗೆ ಹಾರಿದ್ದು, ಇದನ್ನು ಸ್ಥಳೀಯರು ಗಮನಿಸಿ ಹುಡುಕಾಟ ನಡೆಸಿದ ಹಿನ್ನಲೆಯಲ್ಲಿ ೩ ಮೃತ ದೇಹಗಳು ಪತ್ತೆಯಾಗಿವೆ. 
ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಮೃತದೇಹಗಳ ಶವ ಪರೀಕ್ಷೆ ನಡೆದು ವಾರಸುದಾರರಿಗೆ ಹಿಂದಿರುಗಿಸಲಾಯಿತು. 
ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪತಿ ವೆಂಕಟೇಶ್ ವಿರುದ್ಧ ದೂರು ದಾಖಲಾಗಿದೆ ಎಂದು ವಾರ್ಡ್ ನಗರಸಭೆ ಹಿರಿಯ ಸದಸ್ಯ ಆರ್. ಕರುಣಾಮೂರ್ತಿ ತಿಳಿಸಿದ್ದಾರೆ.