Friday, February 7, 2025

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಜಾನಪದ ಕಲಾ ತಂಡದಿಂದ ಪ್ರದರ್ಶನ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ಪರಿಷತ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಜಾನಪದ ಕಲಾವಿದರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಜಾನಪದ ಕಲಾವಿದರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
    ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಮತ್ತು ಸಂಗಡಿಗರು  "ಗೀ ಗೀ ಪದ, ಸ್ವಚ್ಛ ಭಾರತ ಅಭಿಯಾನ ಗೀತೆ, ಗುರುವೇ ನಿನ್ನಾಟ ಬಲ್ಲವರ್ಯಾರು ಜಾನಪದ ಗೀತೆ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
    ತಂಡದಲ್ಲಿ ಕಲಾವಿದರಾದ ಚಂದ್ರಶೇಖರ ಚಕ್ರಸಾಲಿ, ನಿಸಾರ್‌ಖಾನ್, ದಯಾನಂದ್ ಸಾಗರ್, ಸೋಮಶೇಖರ್, ದೇವರಾಜ್ ಮತ್ತು ದೇವೇಂದ್ರ ಭಾಗವಹಿಸಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್‌ರಿಗೆ ಕಾಂಗ್ರೆಸ್ ಹಿಂದುಳಿದ ಘಟಕದಿಂದ ಅಭಿನಂದನೆ

ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾಜ್‌ರನ್ನು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ವತಿಯಿಂದ ಶುಕ್ರವಾರ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ : ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾಜ್‌ರನ್ನು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ವತಿಯಿಂದ ಶುಕ್ರವಾರ ಸನ್ಮಾನಿಸಿ ಅಭಿನಂದಿಸಲಾಯಿತು. 
    ಹಿಂದುಳಿದ ಘಟಕದ ಅಧ್ಯಕ್ಷ ಬಿ. ಗಂಗಾಧರ ನೇತೃತ್ವದಲ್ಲಿ ಸೈಯದ್ ರಿಯಾಜ್‌ರನ್ನು ಸನ್ಮಾನಿಸುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಧಿಕಾರ ಲಭಿಸುವಂತಾಗಲಿ ಎಂದು ಅಭಿನಂದಿಸಲಾಯಿತು. 
  ಉಪಾಧ್ಯಕ್ಷ ಜಿ. ಜಯಕಾಂತ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಸ್ಲೆ, ಮುಖಂಡರಾದ ಕಾಂಗ್ರೆಸ್ ಕಲ್ಪನಳ್ಳಿ ಪ್ರವೀಣ್ ನಾಯ್ಕ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ರೇಷ್ಮಾ ಬಾನು, ಜಯಶೀಲ, ಅನುಸೂಯಮ್ಮ ಮತ್ತು ನೇತ್ರಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಭದ್ರಾವತಿ ಆಕಾಶವಾಣಿ ಕೇಂದ್ರ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ : ಡಾ. ಶ್ರೀಕಂಠ ಕೂಡಿಗೆ

ಭದ್ರಾವತಿ ಜೆಪಿಎಸ್ ಕಾಲೋನಿಯ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಶುಕ್ರವಾರ ೬೦ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಕಳೆದ ೬೦ ವರ್ಷಗಳಲ್ಲಿ ನೂರಾರು ಉಪಯುಕ್ತ ಹಾಗು ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಭದ್ರಾವತಿ ಆಕಾಶವಾಣಿ ಕೇಂದ್ರ ಒಂದು ಕಾಲದಲ್ಲಿ ಶ್ರೋತೃಗಳ ಮನೆಮಾತಾಗಿತ್ತು. ತಾಂತ್ರಿಕವಾಗಿ ಸಾಕಷ್ಟು ಬೆಳವಣಿಗೆಗಳ ನಡುವೆಯೂ ತನ್ನ ತನವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಕುವೆಂಪು ವಿ.ವಿ ವಿಶ್ರಾಂತ ಕುಲಸಚಿವ ಡಾ. ಶ್ರೀಕಂಠ ಕೂಡಿಗೆ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಶುಕ್ರವಾರ ನಗರದ ಜೆಪಿಎಸ್ ಕಾಲೋನಿಯ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಉತ್ತಮ ಅಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ಅತ್ಯುತ್ತಮ ನೂರಾರು ಕಲಾವಿದರು ಕಾರ್ಯಕ್ರಮಗಳನ್ನು ನೀಡುವ ಮೂಲಕ ಇಂದಿಗೂ ಶ್ರೋತೃಗಳ ಮನದಾಳದಲ್ಲಿ ಉಳಿದುಕೊಂಡಿದ್ದಾರೆ. ಸಾವಿರಾರು ಕಲಾವಿದರು ಈ ಆಕಾಶವಾಣಿ ಕೇಂದ್ರದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರು. 
    ಬದಲಾದ ಕಾಲಘಟ್ಟದಲ್ಲಿ ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಸವಾಲುಗಳನ್ನು ಆಕಾಶವಾಣಿ ಕೇಂದ್ರ ಎದುರಿಸುವಂತಾಗಿದೆ. ಈ ನಡುವೆಯೂ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಮುನ್ನಡೆಯುತ್ತಿರುವುದು ಬಹಳ ಸಂತೋಷದ ಸಂಗತಿಯಾಗಿದೆ ಎಂದರು. 
    ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ  ಡಾ.ಕೆ.ಸಿ ಶಶಿಧರ್ ಮಾತನಾಡಿ, ದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತಬಂಧುಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿ ಸ್ವಾವಲಂಬನೆ ಬದುಕಿಗೆ ಬಹುದೊಡ್ಡ ಕೊಡುಗೆ ಈ ಆಕಾಶವಾಣಿ ಕೇಂದ್ರ ನೀಡಿದೆ ಎಂದರು. 
    ಕುವೆಂಪು ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಕೆ.ಆರ್.ಮಂಜುನಾಥ್ ಮಾತನಾಡಿ, ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಈ ಆಕಾಶವಾಣಿ ಕೇಂದ್ರ ವೇದಿಕೆಯನ್ನು ಕೊಟ್ಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದರಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.   
    ಇನ್ನು ಕೆಲವೇ ದಿನಗಳಲ್ಲಿ ಆಕಾಶವಾಣಿಯ ಪ್ರಸಾರಣ ಸಾಮರ್ಥ್ಯ, ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ ೧೦ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ಟ್ರಾನ್ಸ್‌ಮೀಟರ್‌ನಿಂದಾಗಿ ಹೆಚ್ಚು ವ್ಯಾಪ್ತಿಯನ್ನು ತಲುಪಲಿದೆ. ಈ ಕಾರ್ಯದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಶ್ರಮ ಹೆಚ್ಚಿನದ್ದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಭದ್ರಾವತಿ ಮತ್ತು ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್ ಭಟ್ ತಿಳಿಸಿದರು. 
    ಅಂಬೇಡ್ಕರ್ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೆಲ್ಲಿಕಟ್ಟೆ ಸಿದ್ದೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ. ಗೋಪಿನಾಥ್, ಪಿ.ಇ.ಎಸ್ ಶಿಕ್ಷಣ ಸಂಸ್ಥೆಗಳ ಸಮೂಹ ಆಡಳಿತ ಮಂಡಳಿ ಮುಖ್ಯ ಸಂಯೋಜಕ ಡಾ. ಆರ್. ನಾಗರಾಜ್, ಶಿವಮೊಗ್ಗ ಐಎಂಎ ಕಾರ್ಯದರ್ಶಿ ಹಾಗು ಸುಬ್ಬಯ್ಯ ಸಮೂಹ ಸಂಸ್ಥೆ ಸಿಇಒ ಡಾ. ವಿನಯ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ನಂತರ ಕಥಾ ಸ್ವರ್ಧೆಯಲ್ಲಿ ವಿಜೇತರಾದ ದೀಪ್ತಿ ಭದ್ರಾವತಿ, ಶ್ರೇಯ ಕೆ.ಎಂ ಹಾಗು ಸಂತೆಬೆನ್ನೂರು ಫೈಜ್ ನಟರಾಜ್ ಮತ್ತು ಪಾಕಸ್ಪರ್ಧೆಯಲ್ಲಿ ವಿಜೇತರಾದ ಗಿರಿಜಾ ಹೆಗಡೆ, ಎಂ.ಎನ್ ಸುಶೀಲ, ಡಾ. ಮೈತ್ರೇಯಿ ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. 
    ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಮತ್ತು  ಮುಖ್ಯಮಹಾಪ್ರಬಂಧಕ (ಸ್ಥಾವರ) ಕೆ.ಎಸ್ ಸುರೇಶ್,  ಮಹಾಪ್ರಭಂಧಕ (ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಾನವ ಸಂಪನ್ಮೂಲ) ಎಲ್.ಪ್ರವೀಣ್‌ಕುಮಾರ್,  ಮಹಾಪ್ರಬಂಧಕ(ಪರಿಸರ ವಿಭಾಗ) ಮುತ್ತಣ್ಣ ಸುಬ್ಬರಾವ್, ಹಾಗು  ಸಹಾಯಕ ಮಹಾಪ್ರಬಂಧಕ ವಿಕಾಸ್ ಬಷೀರ್ ಮತ್ತು ಇತರ ಸಿಬ್ಬಂದಿವರ್ಗದವರು, ಭದ್ರಾವತಿ ಆಕಾಶವಾಣಿ ಕೇಂದ್ರದ ೬೦ ವರ್ಷದ ಸವಿನೆನಪಿಗೆ ೬೦ ಸಸಿಗಳನ್ನು ವಿತರಿಸಿದರು. 
    ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಮತ್ತು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 
    ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಕೇಳುಗರು ತಮ್ಮ ಅಭಿಪ್ರಾಯಗಳನ್ನು ಹಚ್ಚಿಕೊಂಡರು. ಶೋಭ ಮತ್ತು ತಂಡದವರು ಪ್ರಾರ್ಥಿಸಿದರು.   ಕಾರ್ಯಕ್ರಮ ಅಧಿಕಾರಿ ಎಸ್.ಎಲ್ ರಮೇಶ್‌ಪ್ರಸಾದ್ ಸ್ವಾಗತಿಸಿದರು. ಡಾ.ಗಣೇಶ್ ಆರ್ ಕೆಂಚನಾಳ ಪ್ರಾಸ್ತವಿಕ ನುಡಿಗಳನ್ನಾಡಿದರು. ಶಕೀಲ್ ಅಹ್ಮದ್ ಮತ್ತು ಮೀನ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಕಾಶವಾಣಿಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.  
    ಶಿವಮೊಗ್ಗ ರೋಟರಿ ವಿಜಯ್ ಕುಮಾರ್, ಸಾಹಿತಿಗಳಾದ ಬಸವರಾಜ ನೆಲ್ಲಿಸರ, ಜೆ.ಎನ್ ಬಸವರಾಜಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


ಭದ್ರಾವತಿ ಜೆಪಿಎಸ್ ಕಾಲೋನಿಯ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೬೦ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ವಿ.ವಿ ವಿಶ್ರಾಂತ ಕುಲಸಚಿವ ಡಾ. ಶ್ರೀಕಂಠ ಕೂಡಿಗೆ ಮಾತನಾಡಿದರು.