ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿವತಿಯಿಂದ ಬಿ.ಎಚ್ ರಸ್ತೆ, ರೈಲ್ವೆ ನಿಲ್ದಾಣ ಸಮೀಪದ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನಾಡೋಜ ಡಾ. ಎಸ್.ಆರ್ ನಾಯಕ್ ಅವರಿಗೆ ಶ್ರದ್ಧಾಂಜಲಿ ಮತ್ತು ಮಾನವ ಹಕ್ಕುಗಳ, ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಪ್ರತಿಯೊಬ್ಬರು ಸಂವಿಧಾನ ಅರಿತುಕೊಂಡಾಗ ಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ ಎಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
ಅವರು ಸೋಮವಾರ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆ, ರೈಲ್ವೆ ನಿಲ್ದಾಣ ಸಮೀಪದ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನಾಡೋಜ ಡಾ. ಎಸ್.ಆರ್ ನಾಯಕ್ ಅವರಿಗೆ ಶ್ರದ್ಧಾಂಜಲಿ ಮತ್ತು ಮಾನವ ಹಕ್ಕುಗಳ, ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ನೇತೃತ್ವದವಹಿಸಿ ಮಾತನಾಡಿದರು.
ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಸಂವಿಧಾನದಂತೆ ಕಾರ್ಯ ನಿರ್ವಹಿಸಬೇಕು. ಎಲ್ಲವೂ ಈ ದೇಶದ ಜನರ ಕಲ್ಯಾಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಈ ಹಿನ್ನಲೆಯಲ್ಲಿ ಇವುಗಳ ಕಾರ್ಯ ಚಟುವಟಿಕೆಗಳು ಹಾಗು ಸಂವಿಧಾನ ನೀಡಿರುವ ಹಕ್ಕುಗಳು, ಕಾನೂನುಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಬಡ ಕುಟುಂಬದ ಡಾ.ಎಸ್ ಆರ್. ನಾಯಕ್‌ರವರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ನಂತರ ಉನ್ನತ ಪದವಿಯೊಂದಿಗೆ ಜಿಲ್ಲಾ ನ್ಯಾಯಧೀಶರಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಾಮಾಣಿಕವಾಗಿ ಕರ್ತವ್ಯ ಸಲ್ಲಿಸಿ ಬಡ ಜನರ ಸೇವೆ ಮತ್ತು ಭಾರತ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಂಡ ಅಪರೂಪದ ವ್ಯಕ್ತಿ ಎಂದರು.
೨೦೦೭ರಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ನಂ. ೧ ಸ್ಥಾನ ಪಡೆಯಲು ಮುಖ್ಯ ಕಾರಣ ಡಾ.ಎಸ್.ಆರ್ ನಾಯಕ್. ಅವರು ಬಡವರ ಬಗ್ಗೆ ಹೆಚ್ಚು ಕಾಳಜಿ ಇಟ್ಟು ಅನೇಕ ಪ್ರಕರಣಗಳಲ್ಲಿ ಕೇವಲ ಟಿ.ವಿ ನ್ಯೂಸ್ ಮೂಲಕ ದೂರು ದಾಖಲಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿದ್ದು ಮರಿಯುವಂತಿಲ್ಲ. ಮಾನವ ಹಕ್ಕುಗಳು ಎಂಬ ಶಬ್ದವೇ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರಖ್ಯಾತಿ ಪಡೆಯಲು ಡಾ. ಎಸ್ ಆರ್ ನಾಯಕ್ ರವರು ರಾಜ್ಯದ ಉದ್ದಗಲಕ್ಕೂ ಪದೇ ಪದೇ ಪ್ರವಾಸ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮತ್ತು ಅರಿವು ಮೂಡಿಸಿದ್ದು ಕಾರಣವಾಗಿದೆ. ೨೦೧೦ರಲ್ಲಿ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲಸಮ ಮಾಡಿ ಇಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿದ್ದಾರೆ. ೨೦೧೦ರಲ್ಲಿ ಇದೆ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಸಮಾವೇಶದಲ್ಲಿ ಭಾಗವಹಿಸಿ ಮಾನವ ಹಕ್ಕುಗಳ ಬಗ್ಗೆ ಹಾಗೂ ವಿಶ್ವಮಾನವ ಅಂಬೇಡ್ಕರ್ ಮತ್ತು ಬಸವಣ್ಣನವರ ಬಗ್ಗೆ ಸುದೀರ್ಘವಾಗಿ ವಿಚಾರವನ್ನು ಮಂಡಿಸಿದ್ದು, ಮರೆಯಲು ಸಾಧ್ಯವಿಲ್ಲ. ಇವರ ನಿಧನದಿಂದ ರಾಜ್ಯದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಸಾಮಾಜಿಕ ಹೋರಾಟಗಾರ ಉಕ್ಕುಂದ ಶಿವಕುಮಾರ್ ಹಾಗು ಸಮಿತಿ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.