Sunday, June 20, 2021

ಬಂಗಾರದ ಸರ ಅಪಹರಣ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇ ಗಂಟೆಯಲ್ಲಿ ೩ ಯುವಕರ ಸೆರೆ

ಭದ್ರಾವತಿ ಪೇಪರ್‌ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದ ೩ ಯುವಕರನ್ನು ಬಂಧಿಸಿವುದು.
   ಭದ್ರಾವತಿ, ಜೂ. ೨೦:  ಕಾಗದನಗರ ಅಂಚೆ ಕಛೇರಿ ರಸ್ತೆಯಲ್ಲಿ ಎಂಪಿಎಂ ಜೆಂಟ್ಸ್ ಕ್ಲಬ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯೊಬ್ಬರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ೩ ಯುವಕರನ್ನು ಪಿ.ಐ ಪೇಪರ್ ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ೧ ಗಂಟೆ ಅವಧಿಯಲ್ಲಿ ಬಂಧಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ಸುಮಾರು ೧೧.೪೫ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ೩ ಯುವಕರು ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸ್ಥಳೀಯರು ವಾಹನ ಹಿಂಬಾಲಿಸಿ ಕೊಂಡು ಹೋಗಿ ತಕ್ಷಣ ತುರ್ತು ಸಂಖ್ಯೆ ೧೧೨ಕ್ಕೆ ಕರೆ ಮಾಡಿ ದ್ವಿಚಕ್ರ ವಾಹನ ಸಂಖ್ಯೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್‌ಗಳಿಗೆ ಮಾಹಿತಿ ರವಾನಿಸಿದ್ದು, ಮಧ್ಯಾಹ್ನ ೧೨.೪೫ರ ಸಮಯದಲ್ಲಿ ಕಾರೇಹಳ್ಳಿ ಚೆಕ್ ಪೋಸ್‌ನಲ್ಲಿ ಯುವಕರು ಸಿಕ್ಕಿ ಬಿದಿದ್ದಾರೆ.
   ಎರೇಹಳ್ಳಿ ಗ್ರಾಮದ ನಿವಾಸಿ ಪವನ್(೧೯), ಉಂಬ್ಳೆಬೈಲ್ ರಸ್ತೆ ಸಂಜಯ್ ಕಾಲೋನಿ ನಿವಾಸಿ ವಿ. ವಿಷ್ಣು ಅಲಿಯಾಸ್ ಪೊಲ್ಲಾರ್ಡ್(೧೯) ಮತ್ತು ಹೆಬ್ಬಂಡಿ ಗ್ರಾಮದ ನಿವಾಸಿ ಎಂ ಮಹೇಶ್(೧೯) ಬಂಧಿತ ಯುವಕರಾಗಿದ್ದು, ಒಂದು ಬಂಗಾರದ ಸರ ಮತ್ತು ೨ ಬಂಗಾರದ ಲಕ್ಷ್ಮೀ ಕಾಸ್ ಸೇರಿದಂತೆ ಒಟ್ಟು ೧೦೩ ಗ್ರಾಂ ತೂಕದ ಒಟ್ಟು ೪,೬೩,೫೦೦ ರು. ಮೌಲ್ಯದ ಬಂಗಾರದ ಆಭರಣಗಳನ್ನು ಹಾಗು ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಬಂಧಿತ ೩ ಯುವಕರು ೨೦೧೯ರಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣ ಹಾಗು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
    ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಅಧೀಕ್ಷಕ ಹಾಗು ಸಹಾಯಕ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಈ.ಓ. ಮಂಜುನಾಥ್, ಪೇಪರ್‌ಟೌನ್ ಠಾಣಾಧಿಕಾರಿಗಳಾದ ಶಿಲ್ಪಾ ನಾಯನೇಗಲಿ, ಸಹಾಯಕ ಠಾಣಾಧಿಕಾರಿ ರತ್ನಾಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚನ್ನಕೇಶವ, ಅರುಣ, ಗಂಗಾಧರ, ಹನಮಂತ ಆವಟ್ಟಿ, ಚಿನ್ನನಾಯ್ಕ, ಧರ್ಮನಾಯ್ಕ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.

ನಗರಸಭೆ ಸದಸ್ಯ ಬಿ.ಕೆ ಮೋಹನ್ ೬೦ನೇ ಹುಟ್ಟುಹಬ್ಬ ಆಚರಿಸಿದ ಗ್ರಾಮಾಂತರ ಯುವ ಕಾಂಗ್ರೆಸ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಸದಸ್ಯ ಬಿ.ಕೆ ಮೋಹನ್‌ರವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ  ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೨೦: ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಸದಸ್ಯ ಬಿ.ಕೆ ಮೋಹನ್‌ರವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ  ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಹುಟ್ಟುಹಬ್ಬಕ್ಕೆ ಶುಭಕೋರಿದ ಯುವ ಕಾಂಗ್ರೆಸ್ ಮುಖಂಡರು ಗ್ರಾಮಾಂತರ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
    ಅಧ್ಯಕ್ಷ ಅಫ್ತಾಬ್ ಅಹಮದ್, ಉಪಾಧ್ಯಕ್ಷರಾದ ಪ್ರವೀಣ್ ಕಲ್ಪನಹಳ್ಳಿ, ತಬ್ರೆಜ್ ಖಾನ್, ನಗರಸಭೆ ಸದಸ್ಯರಾದ ಬಿ.ಎಂ ಮಂಜುನಾಥ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಕೆ.ಎನ್ ನಾಗೇಶ್, ಸಜ್ಜಾದ್, ಫೈಸಲ್, ಅಭಿ, ಸಮೀರ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಮ್ಮೆಲ್ಲರೂ ದಾರಿದೀಪ : ಬಸವರಾಜ ಬಿ ಆನೇಕೊಪ್ಪ

ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ೬೮ನೇ ಜನ್ಮದಿನದ ಅಂಗವಾಗಿ ಕಾಗದನಗರ ವಾರ್ಡ್ ನಂ.೧ರ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮ ಜೆಡಿಎಸ್  ಮುಖಂಡರಾದ ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೦: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಭದ್ರಾವತಿ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗೆ ಪಾತ್ರರಾಗಿದ್ದರು. ಅವರಲ್ಲಿ ಸಾಮಾಜಿಕ ಬದ್ಧತೆ, ಜನಪರ ಕಾಳಜಿ ನಮ್ಮೆಲ್ಲರೂ ದಾರಿದೀಪವಾಗಿದೆ ಎಂದು ವಾರ್ಡ್ ನಂ.೧೯ರ ನಗರಸಭಾ ಸದಸ್ಯ ಬಸವರಾಜ ಬಿ.  ಆನೇಕೊಪ್ಪ ಹೇಳಿದರು.
    ಅವರು ಭಾನುವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ೬೮ನೇ ಜನ್ಮದಿನದ ಅಂಗವಾಗಿ ಕಾಗದನಗರ ವಾರ್ಡ್ ನಂ.೧ರ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ಅಪ್ಪಾಜಿಯವರು ಯಾವುದೇ ಜಾತಿ, ಧರ್ಮ, ಜನಾಂಗಕ್ಕೆ ಮೀಸಲಾಗಿರದೆ ಎಲ್ಲರ ಅಭಿವೃದ್ಧಿಗೆ ಮುಂದಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆಂದರು.
    ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ಡ್ ೧೯ರ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಹಾಗು ಬಡವರ್ಗದವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
    ನಗರಸಭಾ ಸದಸ್ಯೆ ಜಯಶೀಲ, ಕಾಗದನಗರ ಆಂಗ್ಲ ಶಾಲೆ ಪ್ರಾಂಶುಪಾಲ ಸತೀಶ್, ಮುಖಂಡರಾದ ಡಿ.ಟಿ ಶ್ರೀಧರ್, ಲೋಕೇಶ್ವರ್‌ರಾವ್, ತಿಮ್ಮಪ್ಪ, ಎಸ್. ಚಂದ್ರಶೇಖರ್, ಕೇಬಲ್ ಸುರೇಶ್, ರಮೇಶ್, ಡಾ. ಮಂಜುನಾಥ್,  ಕಮಲಕರ್, ವಿಲಿಯಂ, ಗಿರ್ಗೇಶ್, ವೆಂಕಟೇಶ್ ಉಜ್ಜನಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಮಟೆ ಜಗದೀಶ್ ತಂಡದಿಂದ ಜಾನಪದ ಗಾಯನ ನಡೆಯಿತು.