ಭದ್ರಾವತಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ನೇತೃತ್ವದಲ್ಲಿ ಮಂಗಳವಾರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಹಕರ ಹಾಗೂ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಾಚಾರ್ಯ ಕಾಳಿದಾಸ್ ನಾಯ್ಕ ಚಾಲನೆ ನೀಡಿದರು.
ಭದ್ರಾವತಿ, ಮಾ. ೨೨: ಕಾನೂನುಗಳ ಅರಿವಿನಿಂದ ಉತ್ತಮ ಸಮಾಜ ನಿರ್ಮಾಣ ಮಾಡುವ ಜೊತೆಗೆ ನಮ್ಮ ಜವಾಬ್ದಾರಿ, ಹಕ್ಕುಗಳ ಅರಿವು ತಿಳಿಯುತ್ತದೆ ಎಂದು ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಕಾಳಿದಾಸ್ ನಾಯ್ಕ ಹೇಳಿದರು.
ಅವರು ತರಬೇತಿ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಹಕರ ಹಾಗೂ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಹಕರ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಲು ಇರುವ ಕಾನೂನು ಭಾಗದ ವಿಚಾರ ಹಾಗೂ ಜಲ ಸಂರಕ್ಷಣೆ ಮೂಲಕ ಭವಿಷ್ಯದಲ್ಲಿ ಅದನ್ನು ಹೇಗೆ ನಿಭಾಯಿಸಿಕೊಳ್ಳಲು ಸಾಧ್ಯ ಎಂಬ ವಿಚಾರಗಳ ಸಮಗ್ರ ಮಾಹಿತಿ ಭವಿಷ್ಯದ ಪೀಳಿಗೆಗೆ ಮನವರಿಕೆ ಮಾಡಿಕೊಡಲು ನೆರವಾಗಿದೆ ಎಂದರು.
ಗ್ರಾಹಕರ ಹಕ್ಕು ಮತ್ತು ಅವರಿಗೆ ಸಿರುವ ನೆರವಿನ ಕುರಿತಾಗಿ ಮಾತನಾಡಿದ ವಕೀಲ ಮಹಮ್ಮದ್ ಇಲಿಯಾಸ್, ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕನಾಗಿ ತನ್ನ ಜವಾಬ್ದಾರಿ ನಿರ್ವಹಣೆ ಮಾಡುವ ಸಂದರ್ಭ ಒದಗಿ ಬರಲಿದೆ, ಇದರ ಜ್ಞಾನವಿದ್ದಲ್ಲಿ ಅವರಿಗೆ ಸುಲಭವಾಗಿ ನೆರವು ಸಿಗುವ ಜೊತೆಗೆ ಅವರ ಹಕ್ಕುಗಳ ರಕ್ಷಣೆ ಆಗಲಿದೆ ಎಂದರು.
ಜಲ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ವಕೀಲ ಎಚ್.ವಿ ಆದರ್ಶ್, ಭೂಮಿಯ ಒಟ್ಟು ವಿಸ್ತೀರ್ಣದಲ್ಲಿ ಶೇ.೭೦ರಷ್ಟು ನೀರಿನಾಂಶವಿದ್ದು, ಉಳಿದ ಶೇ.೩೦ ಭೂಮಿ ಇದೆ, ಇಷ್ಟಾದರೂ ನೀರಿನ ಸಂರಕ್ಷಣೆ ಮಾಡಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವ ಪರಿಸ್ಥಿತಿ ಇದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಜಿ ತ್ಯಾಗರಾಜ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪದಾಧಿಕಾರಿಗಳಾದ ಡಿ.ಎಂ.ವಿಶ್ವನಾಥ್,ವಿ.ಉದಯಕುಮಾರ್, ಎಸ್. ಮಂಜಪ್ಪ, ವಿಮಲ, ಶಿಕ್ಷಕರಾದ ಪುಟ್ಟಲಿಂಗಮೂರ್ತಿ, ಉದಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.