ಭದ್ರಾವತಿ ಉಜ್ಜನಿಪುರದ ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ, ಮಾ. ೨೨: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದ ಶೃತಿ ಹೇಳಿದರು.
ಅವರು ಮಂಗಳವಾರ ಉಜ್ಜನಿಪುರದ ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಸಮಾಜದ ಮುಖ್ಯ ವಾಹಿನಿನಲ್ಲಿ ಗುರುತಿಸಿಕೊಳ್ಳಬೇಕು. ಡಾನ್ ಬಾಸ್ಕೋ ಸಂಸ್ಥೆಯು ಮಹಿಳೆಯರಿಗೆ ವಿಶೇಷವಾಗಿ ಕೌಶಲ್ಯ ತರಬೇತಿ ಪ್ರಾರಂಭಿಸಿರುವುದು ಹೆಚ್ಚಿನ ಅನುಕೂಲವಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಪಾದರ್ ಆರೋಗ್ಯ ರಾಜ್ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆ ತನ್ನನ್ನು ತಾನು ಅರಿಯುವ ದಿನವಾಗಿದೆ. ಸಮಾಜದಲ್ಲಿ ಮಹಿಳೆಯರು ಸಹ ಘನತೆ, ಗೌರವದ ಬದುಕು ಕಟ್ಟಿಕೊಳ್ಳುವಂತಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು. ಜೊತೆಗೆ ಕುಟುಂಬದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಅವರನ್ನು ಭವಿಷ್ಯದ ಪ್ರಜೆಗಳಾಗಿ ರೂಪಿಸಬೇಕು. ಈ ನಿಟ್ಟಿನಲ್ಲೂ ಸಹ ಹೆಚ್ಚಿನ ಗಮನ ಹರಿಸಬೇಕು. ಪುರುಷರನ್ನು ತಪ್ಪಾಗಿ ಅರ್ಥೈಸಿಕೊಳ್ಳದೆ ಇಬ್ಬರು ಸಹ ಸರಿಸಮಾನವಾಗಿ ಮುನ್ನಡೆಯಬೇಕು. ಇಬ್ಬರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು.
ಆಶಾ ಕಾರ್ಯಕರ್ತೆ ರಾಜೇಶ್ವರಿ ಮಾತನಾಡಿ, ಡಾನ್ ಬಾಸ್ಕೋ ಸಂಸ್ಥೆಯು ಬಡ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದು, ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ. ಕೋವಿಡ್-೧೯ರ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರು ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಆಶಾ ಕಾರ್ಯಕರ್ತೆಯರ ನೆರವಿಗೂ ಧಾವಿಸಿದೆ. ಈ ಹಿನ್ನಲೆಯಲ್ಲಿ ಸಂಸ್ಥೆಯ ಸೇವಾ ಕಾರ್ಯಕ್ಕೆ ಚಿರಋಣಿ ಎಂದರು.
ಪ್ರಾಂಶುಪಾಲ ಪಾದರ್ ಜೋಮಿ, ಆಡಳಿತಾಧಿಕಾರಿ ಸೋನಿಜೆನ್ ಹಾಗು ತರಬೇತಿದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೬ ಮಂದಿ ಆಶಾ ಕಾರ್ಯಕರ್ತೆಯರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಉಚಿತವಾಗಿ ಸಕ್ಕರೆ ಖಾಯಿಲೆ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಅಗತ್ಯವಿರುವ ಪರಿಕರ ವಿತರಿಸಲಾಯಿತು. ಡಾನ್ ಬಾಸ್ಕೋ ಸಂಸ್ಥೆ ಮೊದಲ ಬಾರಿಗೆ ಕಳೆದ ೩ ದಿನಗಳ ಹಿಂದೆ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಆರಂಭಿಸಿದ್ದು, ತರಬೇತಿ ಪಡೆದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
Congratulations Don Bosco Bhadravati✌👌👍👏
ReplyDelete