Thursday, March 11, 2021

ನಿವೃತ್ತ ಶಿಕ್ಷಕ ಮರಿಯಪ್ಪ ನಿಧನ

ಮರಿಯಪ್ಪ
   ಭದ್ರಾವತಿ, ಮಾ. ೧೧: ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆಯ ಸಂಸ್ಥಾಪಕ, ನಿವೃತ್ತ ಶಿಕ್ಷಕ ಮರಿಯಪ್ಪ ಗುರುವಾರ ನಿಧನ ಹೊಂದಿದರು.
   ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗು ಸೊಸೆ, ಮೊಮ್ಮಕ್ಕಳನ್ನು ಹೊಂದಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ಮರಿಯಪ್ಪ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ನಂತರ ಹಿರಿಯೂರು ಮತ್ತು ಉಜ್ಜನಿಪುರದಲ್ಲಿ ಎರಡು ವಿದ್ಯಾಸಂಸ್ಥೆಗಳನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದರು.
   ಇವರ ನಿಧನಕ್ಕೆ ನಗರದ ಗಣ್ಯರು, ಹಿರಿಯೂರು ಗ್ರಾಮಸ್ಥರು, ವಿದ್ಯಾಸಂಸ್ಥೆ ಆಡಳಿತ ಮಂಡಳಿಯವರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.


ಅದ್ದೂರಿಯಾಗಿ ತೆರೆಕಂಡ ರಾಬರ್ಟ್ ಚಿತ್ರ: ೪ ಪ್ರದರ್ಶನಗಳು ಭರ್ತಿ

ಪೋಸ್ಟರ್, ಕಟೌಟ್, ಬ್ಯಾನರ್‌ಗಳಿಂದ ರಾರಾಜಿಸುತ್ತಿರುವ ವೀರಭದ್ರೇಶ್ವರ ಚಿತ್ರಮಂದಿರ

ಭದ್ರಾವತಿ ಬಸವೇಶ್ವರ ವೃತ್ತದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರ ಸಂಪೂರ್ಣವಾಗಿ ರಾಬರ್ಟ್ ಚಿತ್ರದ ಪೋಸ್ಟರ್, ಕಟೌಟ್ ಮತ್ತು ಬ್ಯಾನರ್‌ಗಳಿಂದ ರಾರಾಜಿಸುತ್ತಿರುವುದು.
   ಭದ್ರಾವತಿ, ಮಾ. ೧೧: ಉಕ್ಕಿನ ನಗರದ ಪ್ರತಿಭೆ, ವಿಶ್ವ ರೂಪದರ್ಶಿ ಆಶಾಭಟ್ ಹಾಗು ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಶುಕ್ರವಾರ ತೆರೆಕಂಡಿದ್ದು, ನಗರದ ಸಿ.ಎನ್ ರಸ್ತೆಯಲ್ಲಿರವ ವೆಂಕಟೇಶ್ವರ ಮತ್ತು ಬಸವೇಶ್ವರ ವೃತ್ತದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
    ಬೆಳಿಗ್ಗೆ ಚಿತ್ರದ ಮೊದಲ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಅದ್ದೂರಿ ಚಾಲನೆ ದೊರೆಯಿತು. ಎರಡು ಚಿತ್ರಮಂದಿರಗಳ ಬಳಿ ಚಿತ್ರದ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ವೀರಭದ್ರೇಶ್ವರ ಚಿತ್ರಮಂದಿರ ಸಂಪೂರ್ಣವಾಗಿ ರಾಬರ್ಟ್ ಚಿತ್ರದ ಪೋಸ್ಟರ್, ಕಟೌಟ್ ಮತ್ತು ಬ್ಯಾನರ್‌ಗಳಿಂದ ರಾರಾಜಿಸುತ್ತಿದೆ.
    ಎರಡು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಒಟ್ಟು ೪ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ಎರಡು ಚಿತ್ರಮಂದಿರಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಕೆಲವರು ಟಿಕೆಟ್ ಸಿಗದೆ ನಿರಾಸೆಯಿಂದ ಹಿಂದಿರುಗಿದರು. ಚಿತ್ರಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸೂಚಿಸಿದ್ದರೂ ಸಹ ಬಹುತೇಕ ಪ್ರೇರಕ್ಷರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿತು.
ಉತ್ತಮ ಪ್ರತಿಕ್ರಿಯೆ :
    ಅದ್ದೂರಿಯಾಗಿ ತೆರೆಕಂಡಿರುವ ರಾಬರ್ಟ್ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಯುವ ಸಮುದಾಯದವರು ಹೆಚ್ಚಿನ ಪ್ರೇರಕ್ಷಕರಾಗಿದ್ದು, ದರ್ಶನ್, ಆಶಾಭಟ್ ಹಾಗು ಇನ್ನಿತರ ಕಲಾವಿದರ ಅಭಿನಯಕ್ಕೆ ಹಾಗು ಅದ್ದೂರಿ ಚಿತ್ರೀಕರಣಕ್ಕೆ ಮತ್ತು ಚಿತ್ರದ ತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  
    ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ದುಷ್ಯಂತ್‌ರಾಜ್ ಪತ್ರಿಕೆಗೆ ಪ್ರತಿಕ್ರಿಯಿಸಿ ರಾಬರ್ಟ್ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದ್ದು, ೪ ಪ್ರದರ್ಶನಗಳು ಸಹ ಸಂಪೂರ್ಣವಾಗಿ ಭರ್ತಿಯಾಗಿವೆ. ಅದರಲ್ಲೂ ಚಿತ್ರದ ನಾಯಕಿ ನಮ್ಮ ಊರಿನವರೇ ಆಗಿರುವ ಕಾರಣ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕೊರೋನಾ ಸಂಕಷ್ಟದ ನಡುವೆಯೂ ಸಂಭ್ರಮದ ಶಿವರಾತ್ರಿ

ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್, ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ  ಶಿವ ಸಾಯಿ ಕೃಪ ಧಾಮದಲ್ಲಿ  ಗುರುವಾರ ಸಂಜೆ ಮೊದಲ ಯಾಮದ ಪೂಜೆ ನೆರವೇರಿತು.
ಭದ್ರಾವತಿ, ಮಾ. ೧೧: ಕೊರೋನಾ ಸಂಕಷ್ಟದ ನಡುವೆಯೂ ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಗುರುವಾರ ಮಹಾಶಿವರಾತ್ರಿ ಆಚರಣೆ ಅದ್ದೂರಿಯಾಗಿ ಜರುಗಿತು.
     ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ :
    ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್, ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ  ಶಿವ ಸಾಯಿ ಕೃಪ ಧಾಮದಲ್ಲಿ  ಗುರುವಾರ ಸಂಜೆ ಮೊದಲ ಯಾಮದ ಪೂಜೆ ನೆರವೇರಿತು.
     ಋತ್ವಿಜ ಎಸ್ ಎನ್ ಕಾರ್ತಿಕ್ ನೇತೃತ್ವದಲ್ಲಿ  ಫಲಗಳಿಂದ ರುದ್ರಾಭಿಷೇಕ  ಸೇರಿದಂತೆ ಇನ್ನಿತರ    ಧಾರ್ಮಿಕ ಆಚರಣೆಗಳು ಜರುಗಿದವು. ಬೆಳಗ್ಗೆ ೪ ಗಂಟೆ ವರೆಗೆ ಒಟ್ಟು ೪ ಯಾಮದ ಪೂಜೆ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ ೬ ಗಂಟೆಗೆ  ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಳ್ಳಲಿವೆ. ಶಾಲಾ ಮಕ್ಕಳು, ಭಕ್ತರು ಕಲಾ ಸಂಘ, ವಿವಿಧ ಭಜನಾ ಮಂಡಳಿಗಳಿಂದ ಶಿವ ಸಹಸ್ರ ನಾಮಾರ್ಚನೆ ಜರುಗಿದವು.


ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಆಚರಣೆ ಅದ್ದೂರಿಯಾಗಿ ಜರುಗಿತು

       ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನ:
   ಅಪ್ಪರ್ ಹುತ್ತಾದಲ್ಲಿರುವ ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಆಚರಣೆ ಅದ್ದೂರಿಯಾಗಿ ಜರುಗಿತು. ಜಿಲ್ಲೆಯಲ್ಲಿಯೇ ೩೨ ಅಡಿ ಅತಿ ಎತ್ತರ ಧ್ಯಾನಾಸಕ್ತ ಶಿವನ ಪ್ರತಿಮೆ ದರ್ಶನದೊಂದಿಗೆ ಭಕ್ತಾಧಿಗಳು ಸ್ವಾಮಿಯ ಕೃಪೆಗೆ ಪಾತ್ರರಾದರು. ಮಹಿಳಾ ಭಜನಾ ಮಂಡಳಿಯಿಂದ ಭಜನೆ ನೆರವೇರಿತು.
ದೇವಸ್ಥಾನದಲ್ಲಿರುವ ಶ್ರೀ ನಂದಿ ಈಶ್ವರ ಹಾಗು ಸಂಕಷ್ಟಹರ ಗಣಪತಿ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನೆರವೇರಿತು.


ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಅದ್ದೂರಿಯಾಗಿ ಜರುಗಿತು
    ಸಂಗಮೇಶ್ವರ ದೇವಸ್ಥಾನ:
ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಅದ್ದೂರಿಯಾಗಿ ಜರುಗಿತು. ಭಕ್ತಾಧಿಗಳು ಬೆಳಿಗ್ಗೆಯಿಂದ ರಾತ್ರಿವರೆಗೂ ಸಾಲುಗಟ್ಟಿನಿಂತು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ವಿಶೇಷ ಅಲಂಕಾರ, ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
     ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ:
   ಉಳಿದಂತೆ ಹಳೇನಗರ ಭಾಗದ ಕೋಟೆ ಬಸವಣ್ಣ, ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶೃಂಗೇರಿ ಶಂಕರಮಠ, ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಹಳೇಸೀಗೆಬಾಗಿ ಶ್ರೀ ಈಶ್ವರ ದೇವಸ್ಥಾನ, ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ದೇವಸ್ಥಾನ, ಜಿಂಕ್‌ಲೈನ್ ಶ್ರೀ ಮಲೆಮಹಾದೇಶ್ವರ ದೇವಸ್ಥಾನ, ಜನ್ನಾಪುರ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾಗದನಗರದ ಈಶ್ವರ ದೇವಸ್ಥಾನ, ಉಜ್ಜನಿಪುರ ಚಾನಲ್‌ರಸ್ತೆಯಲ್ಲಿರುವ ಶ್ರೀ ಕಾಳಿಂಗೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಆಚರಣೆ ನಡೆಯಿತು.

ಎಂಪಿಎಂಇಎಸ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಭದ್ರಾವತಿ ಕಾಗದನಗರದ ಎಂಪಿಎಂಇಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿಆಯೋಜಿಸಲಾಗಿದ್ದ 'ವಿದ್ಯುತ್ಕಾಂತೀಯತೆ ಮತ್ತು ಅದರ ಅಳವಡಿಕೆ' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶಿವಮೊಗ್ಗ ಪಿಇಎಸ್‌ಐಟಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಚೈತನ್ಯಕುಮಾರ್ ಉದ್ಘಾಟಿಸಿದರು.
   ಭದ್ರಾವತಿ, ಮಾ. ೧೧: ಕಾಗದನಗರದ ಎಂಪಿಎಂಇಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 'ವಿದ್ಯುತ್ಕಾಂತೀಯತೆ ಮತ್ತು ಅದರ ಅಳವಡಿಕೆ' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಶಿವಮೊಗ್ಗ ಪಿಇಎಸ್‌ಐಟಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಚೈತನ್ಯಕುಮಾರ್ ಉಪನ್ಯಾಸ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಎಂಪಿಎಂಇಎಸ್ ಶಿಕ್ಷಣ ಸಂಸ್ಥೆಗಳ ಖಜಾಂಚಿ ಎಂ.ಡಿ ರವಿಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
    ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕಾಗದನಗರ ಆಂಗ್ಲ ಶಾಲೆಯ ವಿದ್ಯಾರ್ಥಿಗಳಾದ ಭೂಮಿಕಾ ಮತ್ತು ತೇಜಸ್ವಿ ಹಾಗು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕಿ ಮಮತರನ್ನು ಅಭಿನಂದಿಸಲಾಯಿತು. ಶಾಲೆಯ ಪ್ರಾಂಶುಪಾಲ ಆರ್. ಸತೀಶ್, ಉಪನ್ಯಾಸಕ ಹಾಗು ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು. ವಾಣಿಶ್ರೀ ಪ್ರಾರ್ಥಿಸಿದರು. ಸಾರಾಮುತ್ತುಜಾ ನಿರೂಪಿಸಿದರು.  

ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಮಾದರಿ ಕಲಾಕೃತಿ

ಮಹಾ ಶಿವರಾತ್ರಿ ಪ್ರಯುಕ್ತ ಭದ್ರಾವತಿ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಸಚಿನ್ ಎಂ. ವರ್ಣೇಕರ್ ಈ ಬಾರಿ ಮಹಾಶಿವರಾತ್ರಿಗೆ ವಿಶೇಷವಾಗಿ ಉತ್ತರಾಖಂಡದ ಪ್ರವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಮಾದರಿ ಕಲಾಕೃತಿಯನ್ನು ರೂಪಿಸಿದ್ದಾರೆ.
   ಭದ್ರಾವತಿ, ಮಾ. ೧೧: ಈ ಬಾರಿ ಮಹಾ ಶಿವರಾತ್ರಿ ಪ್ರಯುಕ್ತ ನಗರದ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಸಚಿನ್ ಎಂ. ವರ್ಣೇಕರ್ ಈ ಬಾರಿ ಮಹಾಶಿವರಾತ್ರಿಗೆ ವಿಶೇಷವಾಗಿ ಉತ್ತರಾಖಂಡದ ಪ್ರವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಮಾದರಿ ಕಲಾಕೃತಿಯನ್ನು ರೂಪಿಸಿದ್ದಾರೆ.
   ಎಂ ಸೀಲ್ ಬಳಸಿ ಸುಮಾರು ೧.೫ ಇಂಚು ಎತ್ತರದ, ೦.೮ ಇಂಚು ಅಗಲದ ಮತ್ತು ೧.೫ ಇಂಚು ಉದ್ದದ ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಮಾದರಿ ನಿರ್ಮಿಸಿದ್ದು, ಆಕರ್ಷಕವಾಗಿ ಕಂಡು ಬರುತ್ತಿದೆ. ದೇಶದ ೧೨ ಜ್ಯೋತಿರ್ಲಿಂಗ ದೇವಸ್ಥಾನಗಳ ಪೈಕಿ ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಸಹ ಒಂದಾಗಿದ್ದು, ತನ್ನದೇ ಆದ ಪರಂಪರೆಯನ್ನು ಹೊಂದಿದೆ.
   ವರ್ಣೇಕರ್ ಪ್ರತಿಯೊಂದು ಹಬ್ಬಹರಿದಿನಗಳಲ್ಲಿ ವಿಶೇಷವಾಗಿ ಕಲಾಕೃತಿಗಳನ್ನು ರೂಪಿಸುತ್ತಿದ್ದು, ಈಗಾಗಲೇ ಅಯೋಧ್ಯೆ ರಾಮಮಂದಿರ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಇವರ ಹಲವು ಮಾದರಿ ಕಲಾಕೃತಿಗಳು ಗಮನ ಸೆಳೆದಿವೆ. ಅಲ್ಲದೆ ಪ್ರಶಸ್ತಿಗಳಿಗೆ ಭಾಜನವಾಗಿವೆ.