ಇಂದು ನಗರಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಭದ್ರಾವತಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ತಾಲೂಕು ಶಾಖೆ ವತಿಯಿಂದ ಜ.೨೮ರ ಬುಧವಾರ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಸಂವಿಧಾನ ಜಾಗೃತಿ ಸಮಾವೇಶ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ೫೦ ವರ್ಷ ತುಂಬಿದೆ. ಪ್ರೊ.ಬಿ.ಕೃಷ್ಣಪ್ಪ ಅವರು ೧೯೭೪-೭೫ರಲ್ಲಿ ನಗರದಲ್ಲಿ ಈ ಸಂಘಟನೆಯನ್ನು ಸ್ಥಾಪನೆ ಮಾಡಿದರು. ಆ ಮೂಲಕ ಶೋಷಿತರು, ದಲಿತರ ಪರವಾಗಿ ಸಂವಿಧಾನದ ಅಡಿಯಲ್ಲಿಯೇ ಸಂಘಟನೆ ಕೆಲಸ ಮಾಡುತ್ತಾ ಬಂದಿದೆ. ಬೆತ್ತಲೆ ಸೇವೆ, ಬಗರ್‌ಹುಕುಂ ಸಾಗುವಳಿ, ಅಟ್ರಾಸಿಟಿ ಕಾಯ್ದೆ, ಭೂಸುಧಾರಣೆ ಕಾಯ್ದೆ ಮುಂತಾದ ಹಲವು ವಿಷಯಗಳನ್ನಿಟ್ಟುಕೊಂಡು ತನ್ನದೇ ಆದ ಹೋರಾಟಗಳನ್ನು ಮಾಡುತ್ತಾ ಸಂಘಟನೆ ಅತ್ಯಂತ ಪ್ರಬುದ್ಧವಾಗಿ ಬೆಳೆದುಬಂದಿದೆ ಎಂದರು.
ಇಲ್ಲಿಂದಲೇ ದಲಿತ ಚಳವಳಿ ಆರಂಭವಾಗಿದ್ದು, ಈಗ ೫೦ ವರ್ಷಗಳ ನಂತರ ಜಾಗೃತಿ ಸಮಾವೇಶ ನಡೆಸುವ ಮೂಲಕ ಇಡೀ ರಾಜ್ಯದ ಗಮನವನ್ನು ಸೆಳೆಯುತ್ತಿದ್ದೇವೆ. ಸಮಾರಂಭವು ಬೆಳಗ್ಗೆ ೧೧.೩೦ಕ್ಕೆ ಆರಂಭವಾಗುತ್ತದೆ. ಅದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ವೀರಶೈವ ಸಭಾಭವನ ದವರೆಗೆ ಮೆರವಣಿಗೆ ನಡೆಯಲಿದೆ. ಈ ಸಮಾವೇಶದ ಸಾನ್ನಿಧ್ಯವನ್ನು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಹಿಸುವರು.
ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಅಂಬೇಡ್ಕರ್ ಮತ್ತು ಕೃಷ್ಣಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಉಪ ಅರಣ್ಯ ಸಂರಕ್ಷಾಧಿಕಾರಿ ಆಶಿಶ್ ರೆಡ್ಡಿ ಸೇರಿದಂತೆ ಸಂಘಟನೆಯ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಭದ್ರಾವತಿ ನಗರದ ಪದಾಧಿಕಾರಿಗಳು ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಪ್ರಮುಖರಾದ ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.