Friday, October 28, 2022

ಪವಿತ್ರ ಮೃತ್ತಿಕೆ, ಪವಿತ್ರ ಜಲ ಸಂಗ್ರಹ ಅಭಿಯಾನ ರಥದ ಮಾಹಿತಿ ನೀಡದೆ ಅವಮಾನ

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯ : ಎ.ಟಿ ರವಿ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಮಾತನಾಡಿದರು.
    ಭದ್ರಾವತಿ, ಅ. ೨೮: ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಅ.೨೯ ರಂದು ನಗರಕ್ಕೆ ಆಗಮಿಸುತ್ತಿರುವ ಪವಿತ್ರ ಮೃತ್ತಿಕೆ(ಮಣ್ಣು) ಮತ್ತು ಪವಿತ್ರ ಜಲ ಸಂಗ್ರಹ ಅಭಿಯಾನ ರಥದ ಮಾಹಿತಿ ನೀಡದೆ ಅವಮಾನ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹೇಳಿದರು.
      ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ಆರ್. ಪ್ರದೀಪ್ ಹಾಗು ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅವರು ಯಾವುದೇ ಮಾಹಿತಿ ನೀಡದೆ ತಾಲೂಕು ಒಕ್ಕಲಿಗರ ಸಂಘಕ್ಕೆ ಅವಮಾನವೆಸಗಿದ್ದಾರೆ. ಈ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸುವ ಸಂಬಂಧ ಸಂಘ ತುರ್ತು ಸಭೆ ನಡೆಸಿ ನಿರ್ಣಯ ಕೈಗೊಂಡಿದೆ ಎಂದರು.
      ಮೃತ್ತಿಕೆ ಹಾಗೂ ಜಲ ಸಂಗ್ರಹದ ಅಭಿಯಾನದ ರಥ ರಾಜ್ಯಾದ್ಯಂತ ಆಗಮಿಸುವ ಸಂದರ್ಭದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ತಾಲೂಕು ಆಡಳಿತ ಹಾಗೂ ನಗರಸಭೆ ಆಡಳಿತ ಮತ್ತು ವಿವಿಧ ಸಂಘ-ಸಂಸ್ಥೆಗಳ, ಸಮಾಜದ ಪದಾಧಿಕಾರಿಗಳ, ಮುಖಂಡರುಗಳ ಪೂರ್ವಭಾವಿ ಸಭೆ ಕರೆದು ಎಲ್ಲರ ಸಹಯೋಗದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡಬೇಕು ಎಂದು ಸ್ಪಷ್ಟವಾಗಿ ಸರ್ಕಾರದ ಜ್ಞಾಪನಾ ಪತ್ರದಲ್ಲಿ ಉಲ್ಲೇಖವಿದೆ. ಸರ್ಕಾರದ ಆದೇಶವಿದ್ದರೂ ಯಾವುದೇ ಸಂಘ-ಸಂಸ್ಥೆಗಳಿಗೆ, ಸಮಾಜಕ್ಕೆ  ತಿಳಿಸದೆ  ತಾರತಮ್ಯವೆಸಗಿದ್ದು, ಆ ಮೂಲಕ ಒಕ್ಕಲಿಗ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದವರಿಗೂ ಹಾಗು ನಾಡಪ್ರಭು ಕೆಂಪೇಗೌಡ ಅವರಿಗೂ ಅಪಮಾನವೆಸಗಿದ್ದಾರೆಂದು ಆರೋಪಿಸಿದರು.
      ಈ ಹಿಂದೆ ತಾಲೂಕಿನಲ್ಲಿ ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮ ಆಚರಿಸುವ ಸಂದರ್ಭದಲ್ಲೂ ತಾಲೂಕು ಒಕ್ಕಲಿಗ ಸಮುದಾಯದ ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ಇದು ಸರ್ಕಾರದ ಕಾರ್ಯಕ್ರಮ ಎಂದು ನಮ್ಮನ್ನು ಕಡೆಗಣಿಸಿದ್ದರು. ಆದರೆ ಜಿಲ್ಲಾ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷರಿಗೆ ವಿಶೇಷ ಸ್ಥಾನ ನೀಡಿದ್ದರು. ಸರ್ಕಾರದ ಕಾನೂನು ಜಿಲ್ಲೆಗೆ ಹಾಗೂ ತಾಲೂಕಿಗೆ ಬೇರೆ ಬೇರೆಯಾಗಿರುತ್ತದೆಯೇ ಎಂದು ಪ್ರೆಶ್ನಿಸಿದರು.
      ತಾಲೂಕಿನಲ್ಲಿ ಸುಮಾರು ೪೦ ಸಾವಿರ ಒಕ್ಕಲಿಗರಿದ್ದು, ಇದೆ ರೀತಿ ನಮ್ಮನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಸಮಾಜದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
      ಸಂಘದ ಉಪಾಧ್ಯಕ್ಷ ಆರ್.ಕೃಷ್ಣಮೂರ್ತಿ, ಖಜಾಂಚಿ ಎ.ಎನ್,ಕಾರ್ತಿಕ್, ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್, ಕಾರ್ಯದರ್ಶಿ ಉಮೇಶ್, ಎನ್.ಜಿ ನಾಗರಾಜ್, ನಂಜುಂಡೇಗೌಡ, ರಾಧಮ್ಮ, ನಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷೇತ್ರದಾದ್ಯಂತ ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ಹುಟ್ಟುಹಬ್ಬ ಆಚರಣೆ

ವಿವಿಧ ಸಂಘಟನೆಗಳಿಂದ ಹಲವು ಸೇವಾ ಕಾರ್ಯಗಳು

ಭದ್ರಾವತಿ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪೌರಕಾರ್ಮಿಕರಿಗೆ ಸನ್ಮಾನ, ಮಹಿಳಾ ಕಾರ್ಮಿಕರಿಗೆ ಸೀರೆ ವಿತರಣೆ ನಡೆಯಿತು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.
    ಭದ್ರಾವತಿ, ಅ. ೨೮: ಕ್ಷೇತ್ರದ ರಾಜಕಾರಣದಲ್ಲಿ ೩ ದಶಕಗಳಿಂದ ತಮ್ಮದೇ ವರ್ಚಸ್ಸನ್ನು ಕಾಯ್ದುಕೊಂಡು ಬರುವ ಮೂಲಕ ೩ ಬಾರಿ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ ಶುಕ್ರವಾರ ೬೦ ವಸಂತಗಳನ್ನು ಪೂರೈಸುವ ಮೂಲಕ ಅದ್ದೂರಿಯಾಗಿ ತಮ್ಮ ಜನ್ಮದಿನ ಆಚರಿಸಿಕೊಂಡರು.
      ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗು ಶಾಸಕರ ಕುಟುಂಬ ಸಂಬಂಧಿಗಳು ವಿಭಿನ್ನವಾಗಿ ಶಾಸಕರ ಹುಟ್ಟುಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
      ೫-೬ ದಿನಗಳ ಹಿಂದೆಯೇ ಕ್ಷೇತ್ರದ ಎಲ್ಲೆಡೆ ಶಾಸಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.


      ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಬೆಳಿಗ್ಗೆಯೇ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
      ಸಾಮಾಜಿಕ ಸೇವಾಕಾರ್ಯಗಳು :
      ಶಾಸಕರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳಿಂದ ಆರೋಗ್ಯ ಶಿಬಿರ, ಪೌರಕಾರ್ಮಿಕರು ಹಾಗು ಹಿರಿಯ ನಾಗರೀಕರಿಗೆ ಸನ್ಮಾನ, ಮಹಿಳಾ ಕಾರ್ಮಿಕರಿಗೆ ಸೀರೆ ವಿತರಣೆ, ಕಟ್ಟಡ ಕಾರ್ಮಿಕರಿಗೆ ಟಿಫನ್ ಬಾಕ್ಸ್ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು.

ಎಪಿಎಂಸಿ ಮ್ಯಾಮ್ಕೋಸ್ ಕಟ್ಟಡದ ಬಳಿ ಕೊಲೆ ಪ್ರಕರಣ : ಇಬ್ಬರ ಸೆರೆ

ಭದ್ರಾವತಿ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಮ್ಯಾಮ್ಕೋಸ್ ಕಟ್ಟಡದ ಸಮೀಪ ಅ.೨೪ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
    ಭದ್ರಾವತಿ, ಅ. ೨೮ : ನಗರದ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಮ್ಯಾಮ್ಕೋಸ್ ಕಟ್ಟಡದ ಸಮೀಪ ಅ.೨೪ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
      ಕಾಚಗೂಂಡನಹಳ್ಳಿ ನಿವಾಸಿ ಕುಶಾಲ್(೩೫) ಹಾಗೂ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ನಿವಾಸಿ ಸೋಮಶೇಖರ್ ಅಲಿಯಾಸ್ ಪುಟ್ಟ ಅಲಿಯಾಸ್ ಕಪ್ಪೆ(೩೩) ಬಂಧಿತರಾಗಿದ್ದಾರೆ.
      ಮ್ಯಾಮ್ಕೋಸ್ ಕಟ್ಟಡದ ಸಮೀಪ ಖಾಲಿ ಜಾಗದಲ್ಲಿ ರೂಪೇಶ್‌ಕುಮಾರ್(೪೫) ಎಂಬಾತನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹಳೇನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಕೃತ್ಯ ಬಯಲಾಗಿದ್ದು, ಬಂಧಿತ ಇಬ್ಬರು ರೂಪೇಶ್‌ಕುಮಾರ್ ಸ್ನೇಹಿತರು ಎನ್ನಲಾಗಿದೆ.
      ಶಿವಮೊಗ್ಗದಲ್ಲಿ ಆಟೋ ಚಾಲಕನಾಗಿದ್ದ ರೂಪೇಶ್‌ಕುಮಾರ್ ತಾಲೂಕಿನ ಹೊಳೆಹೂನ್ನೂರು ನಿವಾಸಿಯಾಗಿದ್ದು, ಈತನನ್ನು ಅಂದು ನಗರಕ್ಕೆ ಕರೆಸಿಕೊಂಡಿದ್ದ ಈ ಇಬ್ಬರು ಸ್ನೇಹಿತರು ಹಳೇದ್ವೇಷದ ಹಿನ್ನಲೆಯಲ್ಲಿ ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
      ಪೊಲೀಸ್ ನಗರವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಹಳೇನಗರ ಠಾಣಾಧಿಕಾರಿ ಹಾಗು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.