Monday, July 17, 2023

ಮದ್ಯ ಸೇವಿಸಿ ವಾಹನ ಚಾಲನೆ : ೫ ಮಂದಿಗೆ ದಂಡ

    ಭದ್ರಾವತಿ, ಜು. ೧೭ : ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಮೂಲಕ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ೫ ಮಂದಿಗೆ ನ್ಯಾಯಾಲಯ ದಂಡ ವಿಧಿಸಿರುವ ಘಟನೆ ನಡೆದಿದೆ.
    ನಗರದಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿ ವಾರಾಂತ್ಯ ದಿನಗಳಲ್ಲಿ ಸಂಚಾರಿ ಪೊಲೀಸ್‌ ಠಾಣೆವತಿಯಿಂದ ವಿಶೇಷ ಕಾರ್ಯಾಚರಣೆ ನಡೆಸಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.
    ಒಟ್ಟು ೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ೧ನೇ ಎಸಿಜೆ ನ್ಯಾಯಾಲಯದ ನ್ಯಾಯಾಧೀಶರು ತಲಾ ಒಬ್ಬರಿಗೆ ೧೦,೦೦೦ ರು. ದಂಡ ವಿಧಿಸಿದ್ದು, ಒಟ್ಟು ೫೦,೦೦೦ ರು. ದಂಡ ವಿಧಿಸಲಾಗಿದೆ. 

ಕರ್ನಾಟಕ ರೈತ ಸುರಕ್ಷಾ ಫಸಲ್ ಭಿಮಾ ಯೋಜನೆ : ಸದ್ಬಳಕೆಗೆ ರೈತರಿಗೆ ಮನವಿ

    ಭದ್ರಾವತಿ, ಜು. ೧೭ : ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅಗ್ರಿಕಲ್ಟರ್‌ ಇನ್‌ಶೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಫಸಲ್ ಭಿಮಾ ಯೋಜನೆ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಲು  ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.
    ಹೋಬಳಿ ಮಟ್ಟದಲ್ಲಿ ರಾಗಿ (ಮಳೆ ಆಶ್ರಿತ ), ಗ್ರಾಮ ಪಂಚಾಯತಿ ಮಟ್ಟದಲ್ಲಿ ಭತ್ತ (ನೀರಾವರಿ) ಮತ್ತು ಮುಸುಕಿನ ಜೋಳ (ಮಳೆ ಆಶ್ರಿತ) ಈ ಯೋಜನೆ ವ್ಯಾಪ್ತಿಯಲ್ಲಿ ಬರಲಿವೆ.  ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ, ರೈತರು ಪಾವತಿಸಬೇಕಾದ ವಿಮಾ ಮೊತ್ತ ಮತ್ತು ಬೆಳೆ ವಿಮೆಗೆ ನೋಂದಾಯಿಸಲು ಅಂತಿಮ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ.

ಬೊಮ್ಮನಕಟ್ಟೆಯಲ್ಲಿ ಕೆರೆ ತೆರವು ಕಾರ್ಯಾಚರಣೆ

ಭದ್ರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ   ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಪೌರಾಯುಕ್ತರ ನೇತೃತ್ವದ ತಂಡ ಸೋಮವಾರ ಬೊಮ್ಮನಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿತು.
    ಭದ್ರಾವತಿ, ಜು. ೧೭: ಕಳೆದ ಕೆಲವು ದಿನಗಳಿಂದ ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಪೌರಾಯುಕ್ತರ ನೇತೃತ್ವದ ತಂಡ ಸೋಮವಾರ ಬೊಮ್ಮನಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿತು.
    ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್‌ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೊಮ್ಮನಕಟ್ಟೆ ಸರ್ವೆ ನಂ. ೩೩ರ ಕೆರೆ ಒತ್ತುವರಿ ನಡೆಸಿತು.
    ಕಳೆದ ವಾರ ಸಿದ್ದಾಪುರ ಕಸಬಾ ಹೋಬಳಿ ಸಂಕ್ಲಿಪುರ  ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ  ಹಾಗು ಬೊಮ್ಮನಕಟ್ಟೆ ಸರ್ವೆ ನಂ.೧ರ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
    ನಗರಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು, ಹಂತ ಹಂತವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ಕೆ.ಪಿ ಪ್ರಾರ್ಥನಾಗೆ ಸೀಸನ್‌-೧ ಜ್ಯೂನಿಯರ್‌ ಕಪ್‌

ಶಿವಮೊಗ್ಗ ಪೋದರ್‌ ಶಾಲೆಯ ವಿದ್ಯಾರ್ಥಿನಿ ಕೆ.ಪಿ ಪ್ರಾರ್ಥನಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ .
    ಭದ್ರಾವತಿ, ಜು. ೧೭ : ಶಿವಮೊಗ್ಗ ಪೋದರ್‌ ಶಾಲೆಯ ವಿದ್ಯಾರ್ಥಿನಿ ಕೆ.ಪಿ ಪ್ರಾರ್ಥನಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಸ್ಮಶ್‌ ಐಟಿ ಸಹಕಾರದೊಂದಿಗೆ ಶಿವಮೊಗ್ಗ ಗೋಪಾಲದಲ್ಲಿ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ಸೀಸನ್‌-೧ ಜ್ಯೂನಿಯರ್‌ ಕಪ್‌ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
  ಕೆ.ಪಿ ಪಾರ್ಥನಾ ನಗರಸಭೆ ಕಿರಿಯ ಅಭಿಯಂತರ ಪ್ರಸಾದ್‌ ಅವರ ಪುತ್ರಿಯಾಗಿದ್ದು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಅಭಿನಂದಿಸಿದ್ದಾರೆ.