Tuesday, October 12, 2021

ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡ ಅಂಚೆ ಇಲಾಖೆ : ಪ್ರೊ. ಸಿ.ಎಂ ತ್ಯಾಗರಾಜ್

ಭದ್ರಾವತಿ ಪ್ರಧಾನ ಅಂಚೆ ಕಛೇರಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ರಾಷ್ಟ್ರೀಯ ಅಂಚೆ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಅ. ೧೨: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅಂಚೆ ಇಲಾಖೆ ಸಹ ಹೊಂದಿಕೊಳ್ಳುತ್ತಿದ್ದು, ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಆಡಳಿತಾಧಿಕಾರಿ ಪ್ರೊ. ಸಿ.ಎಂ ತ್ಯಾಗರಾಜ್ ಹೇಳಿದರು.
    ಅವರು ಮಂಗಳವಾರ ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅಂಚೆ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
    ಬ್ಯಾಂಕಿಂಗ್, ಜೀವಾವಿಮಾ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ಸಹ ಅಂಚೆ ಇಲಾಖೆ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಗೊಳ್ಳುವ ಜೊತೆಗೆ ಉತ್ತಮವಾಗಿ ನಿರ್ವಹಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.  ಅಂಚೆ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಣೆಯಲ್ಲಿ ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕ ವಲಯಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಹೊಸ ಹೊಸ ಅವಿಷ್ಕಾರಗಳು ನಡೆಯಬೇಕೆಂದರು.
    'ಡಿ' ಗ್ರೂಪ್ ನೌಕರರ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಯಲ್ಲಿ ದಾನಿಷ್ ಪಟೇಲ್,  ಅತ್ಯುತ್ತಮ ವಿಲೇವಾರಿಗಾಗಿ ಪೋಸ್ಟ್ ಮ್ಯಾನ್ ವಿಭಾಗದಲ್ಲಿ ಎಚ್.ವಿ ರಾಜ್‌ಕುಮಾರ್, ಇದೆ ವಿಭಾಗದಲ್ಲಿ ಎಚ್. ಗೀತಾ, ಪೋಸ್ಟ್‌ಮ್ಯಾನ್ ವಿಭಾಗದ ಅಂಚೆ ವಿಂಗಡಣೆಯಲ್ಲಿ ಡಿ. ಗೋವಿಂದರಾಜು, ಹೆಚ್ಚಿನ ಆರ್ಥಿಕ ನಿರ್ವಹಣೆಯಲ್ಲಿ ಉದಯಚಾರ್, ಎಚ್. ಮಂಜುನಾಥ್, ಉತ್ತಮ ಹಾಜರಾತಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ವಿಭಾಗದಲ್ಲಿ ವಿದ್ಯಾ ಕೃಷ್ಣ ಮತ್ತು ಬಿ.ಸಿ ರಾಘವೇಂದ್ರ, ಉತ್ತಮ ಎನ್‌ಎಸ್‌ಸಿ ಏಜೆಂಟ್ ಎಸ್.ಕೆ ಗಣೇಶ್ ಮತ್ತು ಆರ್.ಡಿ ಏಜೆಂಟ್ ಲಕ್ಷ್ಮಮ್ಮ ಬಹುಮಾನಗಳನ್ನು ಪಡೆದುಕೊಂಡರು.
    ಕಾರ್ಯಕ್ರಮದಲ್ಲಿ  ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ವಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಂಚೆ ಅಧೀಕ್ಷಕ ಜಿ. ಹರೀಶ್, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಅನಿಲ್‌ಕುಮಾರ್, ಅಂಚೆ ನಿರೀಕ್ಷಕ ಪ್ರಹ್ಲಾದನಾಯಕ್, ವಿಜಯಕುಮಾರ್, ನಾಗರಾಜ್, ಎಂ. ಪೂಜಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಖಾನೆಯಲ್ಲಿ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರಿಗೆ ಜೀವನಾಂಶ ನೀಡಿ

ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ಅರಿತು ಮಂಗಳವಾರ ಕಾರ್ಖಾನೆ ಮುಂಭಾಗ ಕೆಲ ಕಾರ್ಮಿಕರು ತಮ್ಮ ಅಳಲು ವ್ಯಕ್ತಪಡಿಸಿದರು.
    ಭದ್ರಾವತಿ, ಅ. ೧೨: ಎಂಪಿಎಂ ಕಾರ್ಖಾನೆಯಲ್ಲಿ ನಿಯೋಜನೆ ಮೇರೆಗೆ ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಹೊರತುಪಡಿಸಿ ಪ್ರಸ್ತುತ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಸುಮಾರು ೧೨೦ ಕಾರ್ಮಿಕರಿಗೆ ಸರ್ಕಾರ ತಕ್ಷಣ ಜೀವನಾಂಶ ನೀಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಕೆಲ ಕಾರ್ಮಿಕರು ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ಅರಿತು ಮಂಗಳವಾರ ಕಾರ್ಖಾನೆ ಮುಂಭಾಗ ತಮ್ಮ ಅಳಲು ವ್ಯಕ್ತಪಡಿಸಿದ ಕೆಲ ಕಾರ್ಮಿಕರು, ಭವಿಷ್ಯದಲ್ಲಿ ಅಭಿವೃದ್ಧಿಪಡಿಸಬಹುದಾದ ಕಾರ್ಖಾನೆಯನ್ನು ಇದೀಗ ಎಲ್ಲರೂ ಸಂಪೂರ್ಣವಾಗಿ ಮುಚ್ಚುವ ಬಗ್ಗೆಯೇ ಚಿಂತನೆ ನಡೆಸುತ್ತಿದ್ದಾರೆ ಹೊರತು ಉಳಿಸಿಕೊಳ್ಳುವ ಬಗ್ಗೆ ಯಾರು ಸಹ ಚಿಂತನೆ ನಡೆಸುತ್ತಿಲ್ಲ. ಇದೊಂದು ವಿಪರ್ಯಾಸದ ಸಂಗತಿಯಾಗಿದ್ದು, ರಾಜಕಾರಣಿಗಳ ಪಿತೂರಿಯೇ ಕಾರ್ಖಾನೆಯ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
    ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಂಡು ತಕ್ಷಣ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು. ಪ್ರಸ್ತುತ ಉಳಿದುಕೊಂಡಿರುವ ಸುಮಾರು ೧೨೦ ಕಾರ್ಮಿಕರಿಗೆ ತಕ್ಷಣ ಜೀವನಾಂಶ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದರು.
        ಸಮಸ್ತ ನಾಗರೀಕರೊಂದಿಗೆ ಉಗ್ರ ಹೋರಾಟ :
    ಪ್ರಸ್ತುತ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಕಾರ್ಖಾನೆಯ ಇಂದಿನ ಸ್ಥಿತಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗು ಸರ್ಕಾರದ ನಿರ್ಲಕ್ಷ್ಯತನಗಳು ಕಾರಣಗಳಾಗಿವೆ ಎಂದು ಕಾರ್ಮಿಕ ಮುಖಂಡ, ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದರು.
    ಕ್ಷೇತ್ರದ ನಾಗರೀಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಎಂಪಿಎಂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಬೇಕು. ನಮ್ಮ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.

ಮೊದಲು ಎಂಪಿಎಂ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಲಿ : ಎಸ್. ಚಂದ್ರಶೇಖರ್

ಪ್ರಸ್ತುತ ಹೊರಡಿಸಲಾಗಿರುವ ಆದೇಶವನ್ನು ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು

ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್
    ಭದ್ರಾವತಿ, ಅ. ೧೨: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ನೀಡಿರುವ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ತಿಳಿಸಿದರು.
    ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ ಅವರು ಹೊರಡಿಸಿರುವ ಆದೇಶ ಪ್ರತಿಯನ್ನು ಸಂಘ ಸ್ವೀಕರಿಸಿದೆ. ಈ ಹಿಂದೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ನೋಟಿಸ್ ಹೊರಡಿಸಿದ್ದು, ಇದರ ವಿರುದ್ಧ ಅಧಿಕೃತ ಕಾರ್ಮಿಕ ಸಂಘ ಉಚ್ಛ ನ್ಯಾಯಾಲಯದ ಮೋರೆ ಹೋದ ಹಿನ್ನಲೆಯಲ್ಲಿ ವಿಚಾರಣೆ ನಡೆದು ಮಧ್ಯಂತರ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಪ್ರಕಾರ ಮೊದಲು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಉದ್ಯೋಗದ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಆ ನಂತರ ಮುಂದಿನ ವಿಚಾರಣೆ ಕೈಗೆತ್ತಿಗೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಈ ರೀತಿ ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
    ಕಾರ್ಖಾನೆಯಲ್ಲಿರುವ ಕಾರ್ಮಿಕರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಗೆ ಸಹ ಸೂಚಿಸಿದೆ. ಆದರೆ ಸರ್ಕಾರ ನಿಗಮ ಮಂಡಳಿಳಿಗೆ ಕೇವಲ ಒಂದೇ ಒಂದು ಪತ್ರ ಬರೆದಿದೆ ಹೊರತು ಸುಮಾರು ೧ ರಿಂದ ೨ ವರ್ಷದವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ಕೆಲವು ಕಾರ್ಮಿಕರನ್ನು ನಿಯೋಜನೆ ಮೇರೆಗೆ ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆಗೆ ಕಳುಹಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಗೆ ನಮ್ಮ ತಕರಾರು ಇಲ್ಲ. ಕಾರ್ಮಿಕರಿಗೆ ಮೊದಲು ಉದ್ಯೋಗದ ಭದ್ರತೆ ಸಿಗಬೇಕು. ಆ ನಂತರ ಕಾರ್ಖಾನೆ ಮುಚ್ಚುವ ಆದೇಶ ಹೊರಡಿಸಲಿ. ಈ ಹಿನ್ನಲೆಯಲ್ಲಿ ಪ್ರಸ್ತುತ ಹೊರಡಿಸಲಾಗಿರುವ ಆದೇಶವನ್ನು ಪ್ರಶ್ನಿಸಲಾಗುವುದು ಎಂದರು.