ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ಅರಿತು ಮಂಗಳವಾರ ಕಾರ್ಖಾನೆ ಮುಂಭಾಗ ಕೆಲ ಕಾರ್ಮಿಕರು ತಮ್ಮ ಅಳಲು ವ್ಯಕ್ತಪಡಿಸಿದರು.
ಭದ್ರಾವತಿ, ಅ. ೧೨: ಎಂಪಿಎಂ ಕಾರ್ಖಾನೆಯಲ್ಲಿ ನಿಯೋಜನೆ ಮೇರೆಗೆ ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಹೊರತುಪಡಿಸಿ ಪ್ರಸ್ತುತ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಸುಮಾರು ೧೨೦ ಕಾರ್ಮಿಕರಿಗೆ ಸರ್ಕಾರ ತಕ್ಷಣ ಜೀವನಾಂಶ ನೀಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಕೆಲ ಕಾರ್ಮಿಕರು ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ಅರಿತು ಮಂಗಳವಾರ ಕಾರ್ಖಾನೆ ಮುಂಭಾಗ ತಮ್ಮ ಅಳಲು ವ್ಯಕ್ತಪಡಿಸಿದ ಕೆಲ ಕಾರ್ಮಿಕರು, ಭವಿಷ್ಯದಲ್ಲಿ ಅಭಿವೃದ್ಧಿಪಡಿಸಬಹುದಾದ ಕಾರ್ಖಾನೆಯನ್ನು ಇದೀಗ ಎಲ್ಲರೂ ಸಂಪೂರ್ಣವಾಗಿ ಮುಚ್ಚುವ ಬಗ್ಗೆಯೇ ಚಿಂತನೆ ನಡೆಸುತ್ತಿದ್ದಾರೆ ಹೊರತು ಉಳಿಸಿಕೊಳ್ಳುವ ಬಗ್ಗೆ ಯಾರು ಸಹ ಚಿಂತನೆ ನಡೆಸುತ್ತಿಲ್ಲ. ಇದೊಂದು ವಿಪರ್ಯಾಸದ ಸಂಗತಿಯಾಗಿದ್ದು, ರಾಜಕಾರಣಿಗಳ ಪಿತೂರಿಯೇ ಕಾರ್ಖಾನೆಯ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಂಡು ತಕ್ಷಣ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು. ಪ್ರಸ್ತುತ ಉಳಿದುಕೊಂಡಿರುವ ಸುಮಾರು ೧೨೦ ಕಾರ್ಮಿಕರಿಗೆ ತಕ್ಷಣ ಜೀವನಾಂಶ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದರು.
ಸಮಸ್ತ ನಾಗರೀಕರೊಂದಿಗೆ ಉಗ್ರ ಹೋರಾಟ :
ಪ್ರಸ್ತುತ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಕಾರ್ಖಾನೆಯ ಇಂದಿನ ಸ್ಥಿತಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗು ಸರ್ಕಾರದ ನಿರ್ಲಕ್ಷ್ಯತನಗಳು ಕಾರಣಗಳಾಗಿವೆ ಎಂದು ಕಾರ್ಮಿಕ ಮುಖಂಡ, ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದರು.
ಕ್ಷೇತ್ರದ ನಾಗರೀಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಎಂಪಿಎಂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಬೇಕು. ನಮ್ಮ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.
No comments:
Post a Comment