Thursday, May 6, 2021

ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಅಸ್ತಿತ್ವ ಕಳೆದುಕೊಳ್ಳುವ ಭೀತಿ : ಏಕರೂಪ ಕಾರ್ಯಕ್ರಮಕ್ಕೆ ವ್ಯಾಪಕ ಖಂಡನೆ

      * ಅನಂತಕುಮಾರ್
     ಭದ್ರಾವತಿ, ಮೇ. ೬:  ಸುಮಾರು ೨ ದಶಕಗಳ ಹಿಂದಿನ ವರೆಗೂ ಭದ್ರಾವತಿ ಆಕಾಶವಾಣಿ ಕೇಂದ್ರ ಎಲ್ಲರ ಮನೆ ಮಾತಾಗಿತ್ತು. ಪ್ರಸ್ತುತ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಸರ್ಕಾರ ಕೈಗೊಳ್ಳುತ್ತಿರುವ ತೀರ್ಮಾನಗಳು ಸಹ ಮಾರಕವಾಗಿ ಪರಿಣಮಿಸಿವೆ.
    ೧೯೬೫ರಲ್ಲಿ ಆರಂಭಗೊಂಡ ಆಕಾಶವಾಣಿ ಕೇಂದ್ರ ಸುಣ್ಣದಹಳ್ಳಿಯಲ್ಲಿ ೬೭೫ ಕಿಲೋ ಹರ್ಟ್ಜ್ ಸಾಮರ್ಥ್ಯದ ಒಂದು ಟ್ರಾನ್ಸ್‌ಮಿಟರ್ ಒಳಗೊಂಡಿದೆ. ಜೆಪಿಎಸ್ ಕಾಲೋನಿಯಲ್ಲಿ ಒಂದು ಸ್ಟುಡಿಯೋ ಮತ್ತು ಆಡಳಿತ ಕಛೇರಿಯನ್ನು ಹೊಂದಿದೆ. ಅಲ್ಲದೆ ಸುಮಾರು ೧.೫ ಕೋ.ರು. ವೆಚ್ಚದ ಒಂದು ಟವರ್ ಕೂಡ ಹೊಂದಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಹಾಸನ, ನಾರ್ತ್ ಕೆನರಾ, ಉಡುಪಿ ಮತ್ತು ತುಮಕೂರು ನಗರಗಳಲ್ಲಿ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ. ಒಂದು ಕಾಲದಲ್ಲಿ ಸುಮಾರು ೩೦ ರಿಂದ ೪೦ ಲಕ್ಷ ಶ್ರೋತೃಗಳನ್ನು ಹೊಂದಿದ್ದ ಆಕಾಶವಾಣಿ ಕೇಂದ್ರದಲ್ಲಿ ಪ್ರಸ್ತುತ ಶ್ರೋತೃಗಳ ಸಂಖ್ಯೆ ತೀರ ಇಳಿಮುಖವಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಶ್ರೋತೃಗಳೇ ಇಲ್ಲವಾಗಬಹುದು.
            ಜನಪ್ರಿಯತೆ ಕಳೆದುಕೊಂಡ ಆಕಾಶವಾಣಿ :
    ಮುಂದುವರೆದ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಎದುರಾಗಿದೆ. ಈ ದಾರಿಯಲ್ಲಿ ಆಕಾಶವಾಣಿ ಕೇಂದ್ರಗಳು ಸಹ ಸಾಗುತ್ತಿವೆ. ಬದಲಾದ ತಾಂತ್ರಿಕತೆ ಹೊಂದಿಕೊಳ್ಳದಿರುವುದು ಹಿನ್ನಡೆಗೆ ಕಾರಣವಾಗಿದೆ. ಅಲ್ಲದೆ ಸರ್ಕಾರ ಸಹ ಹೆಚ್ಚಿನ ಪ್ರೋತ್ಸಾಹ ನೀಡದಿರುವುದು ಜನಪ್ರಿಯತೆ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಅದರಲ್ಲೂ ಖಾಸಗಿ ಎಫ್.ಎಂ ಚಾನಲ್‌ಗಳ ಆರಂಭದಿಂದಾಗಿ ಮತ್ತಷ್ಟು ಜನಪ್ರಿಯತೆ ಕಳೆದುಕೊಳ್ಳುವಂತಾಗಿದೆ.
         ಸ್ಥಗಿತಗೊಂಡ ಜನಪ್ರಿಯ ಕಾರ್ಯಕ್ರಮಗಳು:
   ಚಿಂತಕರು, ಸಾಹಿತಿಗಳು, ಮಕ್ಕಳು, ವಿದ್ಯಾರ್ಥಿಗಳು, ಕೃಷಿಕರು, ಕಾರ್ಮಿಕರು, ಕಲಾವಿದರು, ಕ್ರೀಡಾಪಟುಗಳು, ಗೃಹಿಣಿಯರು, ಯುವಕ-ಯುವತಿಯರು, ವಯಸ್ಕರು ಸೇರಿದಂತೆ ಎಲ್ಲರಿಗೂ ಮೆಚ್ಚುಗೆಯಾಗುವ ಹಾಗು ಅತಿಉಪಯುಕ್ತ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿದ್ದವು. ಮನರಂಜನೆ ಜೊತೆಗೆ ದಿನದ ಸುದ್ದಿಗಳು ಹಾಗು ವಿಭಿನ್ನ ಆಯಾಮದ ಕಾರ್ಯಕ್ರಮಗಳಿಂದಾಗಿ ಆಕಾಶವಾಣಿ ತನ್ನದೆ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿತ್ತು. ಒಂದು ಕಾಲದಲ್ಲಿ ಆಕಾಶವಾಣಿ ಕಾರ್ಯಕ್ರಮಗಳಿಗಾಗಿ ಶ್ರೋತೃಗಳು ಸಮಯ ಮೀಸಲಿಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ದಿನ ಕಳೆದಂತೆ ಒಂದೊಂದೆ ಕಾರ್ಯಕ್ರಮಗಳು ಕಣ್ಮರೆಯಾಗ ತೊಡಗಿದವು. ಇದೀಗ ಆಕಾಶವಾಣಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಕಾಡುತ್ತಿದೆ. ಜನಪ್ರಿಯ ಕಾರ್ಯಕ್ರಮಗಳು ಇದೀಗ ನೆನಪು ಅಷ್ಟೆ.


ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಯಾವುದೇ ಸ್ವತಂತ್ರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದಾಗಿ ಸ್ಥಳೀಯ ಪ್ರತಿಭಾವಂತರು, ಕಲಾವಿದರು ವಂಚಿತರಾಗಿದ್ದಾರೆ. ಅಲ್ಲದೆ ಉದ್ಘೋಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಏಕರೂಪದ ಕಾರ್ಯಕ್ರಮ ಜಾರಿಗೆ ತರಬಾರದು.
    - ಸುಬ್ರಮಣ್ಯ ಶರ್ಮ, ರಾಜ್ಯಾಧ್ಯಕ್ಷರು, 
ಕರ್ನಾಟಕ ರಾಜ್ಯ ಸಾಂದರ್ಭಿಕ ಉದ್ಘೋಷಕರ ಸಂಘ.

     ಆರಂಭಗೊಳ್ಳದ ಎಫ್.ಎಂ ಚಾನಲ್:
   ಕೇಂದ್ರ ಸರ್ಕಾರ ಭದ್ರಾವತಿ ಆಕಾಶವಾಣಿ ಕೇಂದಕ್ಕೆ ಎಫ್.ಎಂ ಚಾನಲ್ ಮಂಜೂರಾತಿ ಮಾಡುವ ಮೂಲಕ ಅಗತ್ಯವಿರುವ ಅನುದಾನ ಸಹ ಬಿಡುಗಡೆಗೊಳಿಸಿತ್ತು. ಸುಮಾರು ೧.೫ ಕೋ.ರು ವೆಚ್ಚದ ಟವರ್ ನಿರ್ಮಾಣಗೊಂಡಿತು ಹೊರತು ಮುಂದಿನ ಕೆಲಸಗಳು ಆರಂಭಗೊಳ್ಳಲಿಲ್ಲ. ಇದುವರೆಗೂ ಎಫ್.ಎಂ ಚಾನಲ್ ಕನಸಾಗಿಯೇ ಉಳಿದಿದೆ.
      ಕಲಾವಿದರು, ಪ್ರತಿಭಾವಂತರು ಗುರುತಿಸಿಕೊಳ್ಳಲು ಸಹಕಾರಿ:
  ಎಲೆಮರೆ ಕಾಯಿಯಂತಿದ್ದ ಸ್ಥಳೀಯ ಕಲಾವಿದರು, ಪ್ರತಿಭಾವಂತರು ಒಂದು ಕಾಲದಲ್ಲಿ ಆಕಾಶವಾಣಿ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಬಹಳಷ್ಟು ಉದ್ಘೋಷಕರು ಆಕಾಶವಾಣಿ ನಂಬಿಕೊಂಡಿದ್ದರು. ಆದರೆ ಇದೀಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಸಹ ನಡೆಯುತ್ತಿಲ್ಲ. ಜೊತೆಗೆ ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ಸಂಖ್ಯೆ ಸಹ ದಿನ ಕಳೆದಂತೆ ಕ್ಷೀಣುತ್ತಿದೆ.
      ಏಕರೂಪದ ಕಾರ್ಯಕ್ರಮ :
    ಇದೀಗ ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಗೂ  ಒಂದೇ ಕೇಂದ್ರದ ಮೂಲಕ ಏಕರೂಪದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಇದರಿಂದಾಗಿ ಸ್ಥಳೀಯ ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸ್ಥಳೀಯ ಪ್ರತಿಭಾವಂತರು, ಕಲಾವಿದರು ಹಾಗು ಉದ್ಘೋಷಕರು ಬೀದಿಪಾಲಾಗುವ ಆತಂಕ ಎದುರಾಗಿದೆ. ಇದೀಗ ಏಕರೂಪದ ಕಾರ್ಯಕ್ರಮ ಪ್ರಸಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳಿಗೆ ಆಕ್ಸಿಜನ್ ನೀಡಿ, ಮತ್ತೆ ಜೀವ ಕೊಡಿ

ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೂಗು


ಸಾಮಾಜಿಕ ಜಾಲತಾಣದಲ್ಲಿ ಭದ್ರಾವತಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೂಗು.
    ಭದ್ರಾವತಿ, ಮೇ. ೬ : ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಪುನಶ್ಚೇತನಕ್ಕೆ ಆಕ್ಸಿಜನ್ ನೀಡಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿತು.
     ಭಾರತರತ್ನ, ಅನ್ನದಾತ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ವಿಐಎಸ್‌ಎಲ್ ಕಾರ್ಖಾನೆ ಇಂದು ಸರ್ಕಾರದ ನೆನಪಿಗೆ ಬಂದಿದೆ. ಕಾರ್ಖಾನೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಇದೀಗ ಜನರ ಜೀವ ಉಳಿಸಲು ನೆರವಾಗಿದೆ. ಈ ಪ್ಲಾಂಟ್‌ನಿಂದ ಇಡೀ ರಾಜಕ್ಕೆ ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೂ ಸ್ವಲ್ಪ ಮಟ್ಟಿಗಾದರೂ ನೆರವಾಗುತ್ತಿರುವುದು ನೆಮ್ಮದಿ ತರುವ ವಿಚಾರವಾಗಿದೆ.
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಹಲವಾರು ಬಾರಿ ಹೋರಾಟಗಳನ್ನು ನಡೆಸಿ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಸಂತಾಪದ ನುಡಿಗಳು ಕೇಳಿ ಬಂದವು. ವಿಪರ್ಯಾಸವೆಂದರೆ ಇದೀಗ ಕೊರೋನಾ ಪರಿಣಾಮದಿಂದ ಇಡೀ ರಾಜ್ಯ ವಿಐಎಸ್‌ಎಲ್ ಕಡೆ ತಿರುಗಿ ನೋಡುವಂತಾಗಿರುವುದು. ಈಗಲಾದರೂ ಈ ಎರಡು ಕಾರ್ಖಾನೆಗಳಿಗೆ ಆಕ್ಸಿಜನ್ ನೀಡಿ ಮತ್ತೆ ಜೀವ ಕೊಡಿ ಎಂಬ ಕೂಗು ಎಲ್ಲರ ಗಮನ ಸೆಳೆಯುತ್ತಿದೆ.

ಕೊರೋನಾ ಸೋಂಕು ಹೆಚ್ಚಳ : ಜನರಲ್ಲಿ ಆತಂಕ

ಬೂಟಾಟಿಕೆ ಬಿಡಿ, ಲಾಕ್‌ಡೌನ್ ಮಾಡಿ : ಬಿ.ಕೆ ಸಂಗಮೇಶ್ವರ್

ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ೨ನೇ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗುತ್ತಿದೆ.
    ಒಂದೆಡೆ ಸೋಂಕಿನ ಭೀತಿ, ಮತ್ತೊಂದೆಡೆ ಲಾಕ್‌ಡೌನ್ ಭೀತಿಯಿಂದಾಗಿ ತತ್ತರಿಸುವಂತಾಗಿದೆ. ತಾಲೂಕಿನಲ್ಲಿ ಮಂಗಳವಾರ ೬೨, ಬುಧವಾರ ೨೬೩ ಹಾಗು ಗುರುವಾರ ೧೪೭ ಕೊರೋನಾ ಸೋಂಕು ದೃಢಪಟ್ಟಿವೆ. ಗುರುವಾರದಿಂದ ಸೋಂಕು ಕಾಣಿಸಿಕೊಂಡ ಪ್ರದೇಶಗಳನ್ನು ಕಂಟೈನ್‌ಮೆಂಟ್ ಜೋನ್‌ಗಳಾಗಿ ಗುರುತಿಸಿ ಸೀಲ್‌ಡೌನ್ ಮಾಡಲಾಗುತ್ತಿದೆ.
    ಕಾಗದನಗರದ ೪ನೇ ವಾರ್ಡ್‌ನ ಕುಟುಂಬವೊಂದರಲ್ಲಿ ೯ ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ಇಡೀ ರಸ್ತೆಯನ್ನು ೧೪ ದಿನ ಸೀಲ್‌ಡೌನ್ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೋಂಕು ಕಾಣಿಸಿಕೊಂಡ ಮನೆಗಳಿಗೆ ಸೋಂಕು ನಿವಾರಕ ಸಿಂಪಡಿಸಿ ಟೇಪಿಂಗ್ ಮಾಡಲಾಗುತ್ತಿದೆ.
             ನಗರಸಭೆ ಚುನಾವಣೆಯಿಂದಾಗಿ ಸೋಂಕು ಹೆಚ್ಚಳ:
     ಕೊರೋನಾ ಸೋಂಕಿನ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಮಾಹಿತಿ ಸರ್ಕಾರಕ್ಕೆ ತಿಳಿದಿದ್ದರೂ ಸಹ ನಗರಸಭೆ ಚುನಾವಣೆಯನ್ನು ನಡೆಸಲಾಯಿತು. ಚುನಾವಣೆ ಮುಂದೂಡುವಂತೆ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ-ಸಂಸ್ಥೆಗಳು,  ಮುಖಂಡರು ಮನವಿ ಮಾಡಿದರೂ ಸಹ ನಿರ್ಲಕ್ಷ್ಯ ವಹಿಸಲಾಯಿತು. ಇದೀಗ ಚುನಾವಣೆ ಫಲಿತಾಂಶದ ಜೊತೆಗೆ ಕೊರೋನಾ ಸೋಂಕಿನ ಫಲಿತಾಂಶ ಸಹ ಕಾಣುವಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
      ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿರುವ ಜಾಗೃತಿ ಸಂದೇಶ:
     ಕಳೆದ ೩ ದಿನಗಳಿಂದ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಾ ತಜ್ಞ  ಡಾ. ಡಿ.ಎಸ್ ಶಿವಪ್ರಕಾಶ್‌ರವರು ಸೋಂಕು ಕುರಿತು ಎಚ್ಚರಿಕೆ ವಹಿಸುವ ಸಂಬಂಧ ನಾಗರೀಕರಿಗೆ ಬರೆದಿರುವ ಜಾಗೃತಿ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ. ಬಹುತೇಕ ಮಂದಿ ಸಂದೇಶವನ್ನು ಪೂರ್ಣ ಓದಿ ಇತರರೊಂದಿಗೆ ಹಂಚಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
      ಬೂಟಾಟಿಕೆ ಬಿಟ್ಟು ಲಾಕ್‌ಡೌನ್ ಮಾಡಿ:
   ಕೊರೋನಾ ಸೋಂಕು ೨ನೇ ಅಲೆ ನಿಯಂತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಪಕ್ಷದ ನಾಯಕರು ಕೇವಲ ಬೂಟಾಟಿಕೆ ಮಾಡಿಕೊಂಡು ಜನರ ಜೀವದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ತಕ್ಷಣ ಲಾಕ್‌ಡೌಡೌನ್ ಜಾರಿಗೊಳಿಸುವ ಜೊತೆಗೆ ಬಡವರಿಗೆ ಉಚಿತ ಅಕ್ಕಿ, ಆಟೋ, ಟ್ಯಾಕ್ಸಿ ಚಾಲಕರು, ಬಡ ಕೂಲಿ ಕಾರ್ಮಿಕರಿಗೆ ೧೦ ಸಾವಿರ ರು. ಆರ್ಥಿಕ ನೆರವು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದ್ದಾರೆ.

ಎಂಎಸ್‌ಪಿಎಲ್‌ನಲ್ಲಿ ಪ್ರತಿ ದಿನ ೧೫೦ ಕೆಎಲ್‌ಡಿ ಆಕ್ಸಿಜನ್ ಉತ್ಪಾದನೆ

ಸಚಿವ ಜಗದೀಶ್ ಶೆಟ್ಟರ್ ಘಟಕ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಎಂಎಸ್‌ಪಿಎಲ್ ಗ್ಯಾಸ್ ಉತ್ಪಾದನಾ ಘಟಕಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ : ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಎಂಎಸ್‌ಪಿಎಲ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಪ್ರತಿ ದಿನ ೧೫೦ ಕೆಎಲ್‌ಡಿ ಆಕ್ಸಿಜನ್ ಉತ್ಪಾದನೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಮುಂದಿನ ೨-೩ ದಿನದಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
   ಅವರು ಗುರುವಾರ ಘಟಕಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಾಮಾಜಿಕ ಕಾಳಜಿಯೊಂದಿಗೆ ಘಟಕ ಆರಂಭಿಸುವಂತೆ ಕಂಪನಿಯವರಿಗೆ ಕೋರಲಾಗಿದೆ. ಇದಕ್ಕೆ ಕಂಪನಿಯವರು ಪೂರಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಉತ್ಪಾದನೆ ಆರಂಭಗೊಳ್ಳಲಿದೆ. ಘಟಕ ಆಕ್ಸಿಜನ್ ಉತ್ಪಾದಿಸಲಿದ್ದು, ಇದನ್ನು ಸಿಲಿಂಡರ್‌ಗಳಿಗೆ ತುಂಬಿಸಿ ಕೊಡುವ ಕೆಲಸ ವಿಐಎಸ್‌ಎಲ್ ಕಾರ್ಖಾನೆ ಮಾಡಲಿದೆ. ಘಟಕ ತಾತ್ಕಾಲಿಕವಾಗಿ ಆರಂಭಗೊಳ್ಳಲು ಬೇಕಾಗುವ ಎಲ್ಲಾ ರೀತಿಯ ನೆರವನ್ನು ಸಹ ಸರ್ಕಾರ ನೀಡಲಿದೆ ಎಂದರು.
   ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಸೋಂಕು ೨ನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ತುರ್ತು ಸಚಿವ ಸಂಪುಟ ಸಭೆ ನಡೆಸಿ ಆಕ್ಸಿಜನ್ ನಿರ್ವಹಣೆ ಜವಾಬ್ದಾರಿಯನ್ನು ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ವಹಿಸಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಎಂಎಸ್‌ಪಿಎಲ್ ಘಟಕ ಉತ್ಪಾದನೆ ಆರಂಭಿಸಲು ಸೂಚಿಸಬೇಕೆಂದು ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಸಚಿವರು ಇಂದು ಘಟಕಕ್ಕೆ ಭೇಟಿ ನೀಡಿದ್ದಾರೆ ಎಂದರು.
ಸದ್ಯಕ್ಕೆ ೧೫೦ ಕೆಎಲ್‌ಡಿ ಆಕ್ಸಿಜನ್ ಉತ್ಪಾದನೆ ಮಾಡಲು ಕಂಪನಿ ಸಿದ್ದವಿದ್ದು, ಇದನ್ನು ಹೆಚ್ಚಳ ಮಾಡುವಂತೆ ಕೋರಲಾಗಿದೆ. ಈ ನಿಟ್ಟಿನಲ್ಲಿ ಘಟಕ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡು ಜಿಲ್ಲೆಯಲ್ಲಿ ಅಗತ್ಯವಿರುವ ಆಕ್ಸಿಜನ್ ಕೊರತೆ ನೀಗಿಸುವ ವಿಶ್ವಾಸವಿದೆ ಎಂದರು.
   ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಭದ್ರಾ ಅಚ್ಚಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ಎಸ್. ದತ್ತಾತ್ರಿ, ಸೂಡಾ ಸದಸ್ಯ ರಾಮಲಿಂಗಯ್ಯ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಲ್ ವೈಶಾಲಿ, ಉಪವಿಭಾಗಾದಿಕಾರಿ ಟಿ.ವಿ ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ವಿಐಎಸ್‌ಎಲ್ ಕಾರ್ಖಾನೆ ಹಿರಿಯ ಅಧಿಕಾರಿ ಸುರಜಿತ್ ಮಿಶ್ರಾ, ಮುಖಂಡರಾದ ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಎಂಎಸ್‌ಪಿಎಲ್ ಗ್ಯಾಸ್ ಉತ್ಪಾದನಾ ಘಟಕಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.