ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೂಗು
ಸಾಮಾಜಿಕ ಜಾಲತಾಣದಲ್ಲಿ ಭದ್ರಾವತಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೂಗು.
ಭದ್ರಾವತಿ, ಮೇ. ೬ : ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಪುನಶ್ಚೇತನಕ್ಕೆ ಆಕ್ಸಿಜನ್ ನೀಡಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿತು.
ಭಾರತರತ್ನ, ಅನ್ನದಾತ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ವಿಐಎಸ್‌ಎಲ್ ಕಾರ್ಖಾನೆ ಇಂದು ಸರ್ಕಾರದ ನೆನಪಿಗೆ ಬಂದಿದೆ. ಕಾರ್ಖಾನೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಇದೀಗ ಜನರ ಜೀವ ಉಳಿಸಲು ನೆರವಾಗಿದೆ. ಈ ಪ್ಲಾಂಟ್‌ನಿಂದ ಇಡೀ ರಾಜಕ್ಕೆ ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೂ ಸ್ವಲ್ಪ ಮಟ್ಟಿಗಾದರೂ ನೆರವಾಗುತ್ತಿರುವುದು ನೆಮ್ಮದಿ ತರುವ ವಿಚಾರವಾಗಿದೆ.
ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಹಲವಾರು ಬಾರಿ ಹೋರಾಟಗಳನ್ನು ನಡೆಸಿ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಸಂತಾಪದ ನುಡಿಗಳು ಕೇಳಿ ಬಂದವು. ವಿಪರ್ಯಾಸವೆಂದರೆ ಇದೀಗ ಕೊರೋನಾ ಪರಿಣಾಮದಿಂದ ಇಡೀ ರಾಜ್ಯ ವಿಐಎಸ್‌ಎಲ್ ಕಡೆ ತಿರುಗಿ ನೋಡುವಂತಾಗಿರುವುದು. ಈಗಲಾದರೂ ಈ ಎರಡು ಕಾರ್ಖಾನೆಗಳಿಗೆ ಆಕ್ಸಿಜನ್ ನೀಡಿ ಮತ್ತೆ ಜೀವ ಕೊಡಿ ಎಂಬ ಕೂಗು ಎಲ್ಲರ ಗಮನ ಸೆಳೆಯುತ್ತಿದೆ.
No comments:
Post a Comment