ಬೂಟಾಟಿಕೆ ಬಿಡಿ, ಲಾಕ್‌ಡೌನ್ ಮಾಡಿ : ಬಿ.ಕೆ ಸಂಗಮೇಶ್ವರ್
ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ೨ನೇ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗುತ್ತಿದೆ.
ಒಂದೆಡೆ ಸೋಂಕಿನ ಭೀತಿ, ಮತ್ತೊಂದೆಡೆ ಲಾಕ್‌ಡೌನ್ ಭೀತಿಯಿಂದಾಗಿ ತತ್ತರಿಸುವಂತಾಗಿದೆ. ತಾಲೂಕಿನಲ್ಲಿ ಮಂಗಳವಾರ ೬೨, ಬುಧವಾರ ೨೬೩ ಹಾಗು ಗುರುವಾರ ೧೪೭ ಕೊರೋನಾ ಸೋಂಕು ದೃಢಪಟ್ಟಿವೆ. ಗುರುವಾರದಿಂದ ಸೋಂಕು ಕಾಣಿಸಿಕೊಂಡ ಪ್ರದೇಶಗಳನ್ನು ಕಂಟೈನ್‌ಮೆಂಟ್ ಜೋನ್‌ಗಳಾಗಿ ಗುರುತಿಸಿ ಸೀಲ್‌ಡೌನ್ ಮಾಡಲಾಗುತ್ತಿದೆ.
ಕಾಗದನಗರದ ೪ನೇ ವಾರ್ಡ್‌ನ ಕುಟುಂಬವೊಂದರಲ್ಲಿ ೯ ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ಇಡೀ ರಸ್ತೆಯನ್ನು ೧೪ ದಿನ ಸೀಲ್‌ಡೌನ್ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೋಂಕು ಕಾಣಿಸಿಕೊಂಡ ಮನೆಗಳಿಗೆ ಸೋಂಕು ನಿವಾರಕ ಸಿಂಪಡಿಸಿ ಟೇಪಿಂಗ್ ಮಾಡಲಾಗುತ್ತಿದೆ.
ನಗರಸಭೆ ಚುನಾವಣೆಯಿಂದಾಗಿ ಸೋಂಕು ಹೆಚ್ಚಳ:
ಕೊರೋನಾ ಸೋಂಕಿನ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಮಾಹಿತಿ ಸರ್ಕಾರಕ್ಕೆ ತಿಳಿದಿದ್ದರೂ ಸಹ ನಗರಸಭೆ ಚುನಾವಣೆಯನ್ನು ನಡೆಸಲಾಯಿತು. ಚುನಾವಣೆ ಮುಂದೂಡುವಂತೆ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಮನವಿ ಮಾಡಿದರೂ ಸಹ ನಿರ್ಲಕ್ಷ್ಯ ವಹಿಸಲಾಯಿತು. ಇದೀಗ ಚುನಾವಣೆ ಫಲಿತಾಂಶದ ಜೊತೆಗೆ ಕೊರೋನಾ ಸೋಂಕಿನ ಫಲಿತಾಂಶ ಸಹ ಕಾಣುವಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿರುವ ಜಾಗೃತಿ ಸಂದೇಶ:
ಕಳೆದ ೩ ದಿನಗಳಿಂದ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಡಿ.ಎಸ್ ಶಿವಪ್ರಕಾಶ್‌ರವರು ಸೋಂಕು ಕುರಿತು ಎಚ್ಚರಿಕೆ ವಹಿಸುವ ಸಂಬಂಧ ನಾಗರೀಕರಿಗೆ ಬರೆದಿರುವ ಜಾಗೃತಿ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ. ಬಹುತೇಕ ಮಂದಿ ಸಂದೇಶವನ್ನು ಪೂರ್ಣ ಓದಿ ಇತರರೊಂದಿಗೆ ಹಂಚಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಬೂಟಾಟಿಕೆ ಬಿಟ್ಟು ಲಾಕ್‌ಡೌನ್ ಮಾಡಿ:
ಕೊರೋನಾ ಸೋಂಕು ೨ನೇ ಅಲೆ ನಿಯಂತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಪಕ್ಷದ ನಾಯಕರು ಕೇವಲ ಬೂಟಾಟಿಕೆ ಮಾಡಿಕೊಂಡು ಜನರ ಜೀವದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ತಕ್ಷಣ ಲಾಕ್‌ಡೌಡೌನ್ ಜಾರಿಗೊಳಿಸುವ ಜೊತೆಗೆ ಬಡವರಿಗೆ ಉಚಿತ ಅಕ್ಕಿ, ಆಟೋ, ಟ್ಯಾಕ್ಸಿ ಚಾಲಕರು, ಬಡ ಕೂಲಿ ಕಾರ್ಮಿಕರಿಗೆ ೧೦ ಸಾವಿರ ರು. ಆರ್ಥಿಕ ನೆರವು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದ್ದಾರೆ.
No comments:
Post a Comment