ಭದ್ರಾವತಿ ಕಸಾಪ ವಿನೂತನ ಪ್ರಯತ್ನ ಯಶಸ್ಸು
ಭದ್ರಾವತಿ, ಆ. ೧೨: ಒಂದೆಡೆ ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಮತ್ತೊಂಡೆ ಎಲ್ಲರೂ ಒಂದೆಡೆ ಸೇರುವಂತಿಲ್ಲ. ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಚಿತ್ರಮಂದಿರಗಳಲ್ಲಿ ಕುಳಿತು ಸಂಭ್ರಮಿಸುವಂತಿಲ್ಲ. ಮನೆಯೊಳಗೆ ಇರಬೇಕಾದ ಪರಿಸ್ಥಿತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಂತರ್ಜಾಲದ ಮೂಲಕ ಮನೆಯಲ್ಲಿರುವವರನ್ನು ಸಹ ಕ್ರಿಯಾಶೀಲರನ್ನಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವೆಂಬಂತೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಮನೆಗಳಲ್ಲಿಯೇ ತರಕಾರಿ ಬಳಸಿ ಆಭರಣ ತಯಾರಿಸಿ ಧರಿಸುವ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆ ಇದೀಗ ವ್ಯಾಪಕವಾಗಿ ಗಮನ ಸೆಳೆಯುತ್ತಿದೆ.
ಪ್ರತಿ ದಿನ ಅಡುಗೆ ತಯಾರಿಕೆಗೆ ಬಳಸುವ ತರಕಾರಿ ಬಳಸಿ ಆಭರಣ ತಯಾರಿಸುವ ವಿನೂತನ ಪ್ರಯತ್ನಕ್ಕೆ ನಗರದ ಬಹಳಷ್ಟು ಮಹಿಳೆಯರು ಮುಂದಾಗಿ ಯಶಸ್ವಿಯಾಗಿದ್ದಾರೆ. ಕ್ಯಾರೇಟ್, ಬೆಂಡೆಕಾಯಿ, ಹೀರೆಕಾಯಿ, ಸೋತೆಕಾಯಿ, ಮೂಲಂಗಿ, ಬೀನ್ಸ್, ಕಡಲೆಕಾಳು, ಬಟಾಣಿ, ಆಗಲಕಾಯಿ, ಹಸಿಮೆಣಸಿನಕಾಯಿ, ಕರಿಬೇವು ಇತ್ಯಾದಿ ಬಳಸಿ ಬಗೆ ಬಗೆಯ ಆಭರಣಗಳನ್ನು ತಯಾರಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ರೇಷ್ಮಾ ಭಾನು ಜಾವಿದ್ ಪಾಷ ಪ್ರಥಮ ಸ್ಥಾನ, ಅನ್ನಪೂರ್ಣಮ್ಮ ಶಂಕರಮೂರ್ತಿ ಹಾಗೂ ಲೋಹಿತಾ ನಂಜಪ್ಪ ದ್ವಿತೀಯ ಸ್ಥಾನ ಮತ್ತು ತ್ರಿವೇಣಿ ಪುಟ್ಟು ಮತ್ತು ನಂದಿನಿ ಬಾಬು ತೃತೀಯ ಸ್ಥಾನವನ್ನು ಪಡೆದಿದ್ದು, ಉಳಿದಂತೆ ಸುಜಾತಾ ಗೋಪಿನಾಥ್, ಕವಿತಾ ಸುರೇಶ್, ಧನಲಕ್ಷ್ಮಿ .ಕೆ ಮತ್ತು ಮಲ್ಲಿಕಾಂಬ ಅವರಿಗೆ ಸಮಾಧಾನಕರ ಬಹುಮಾನ ಲಭಿಸಿದೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದು, ಆ.೧೫ರಂದು ಸಂಜೆ ೪ ಗಂಟೆಗೆ ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಿದೆ.