ಭದ್ರಾವತಿ ತರುಣಭಾರತಿ ವಿದ್ಯಾಕೇಂದ್ರದಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಆ. ೧೨: ಮಕ್ಕಳು ವಿದ್ಯೆ ಜೊತೆಗೆ ತ್ಯಾಗಮಯಿ ಗುಣ ಬೆಳೆಸಿಕೊಳ್ಳಬೇಕೆಂದು ತರುಣ ಭಾರತಿ ವಿದ್ಯಾಕೇಂದ್ರದ ಹಿರಿಯ ಮಾರ್ಗದರ್ಶಕರಾದ ಮಧುಕರ್ ಕಾನಿಟ್ಕರ್ ಹೇಳಿದರು.
ಅವರು ಬುಧವಾರ ಕೇಶವಪುರ ಬಡಾವಣೆಯಲ್ಲಿರುವ ತರುಣಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದೆ ಪೋಷಕರು ಮಕ್ಕಳಿಗೆ ತಮ್ಮ ಇಡೀ ಬದುಕನ್ನು ತ್ಯಾಗ ಮಾಡಿ ವಿದ್ಯೆ, ಸಂಸ್ಕಾರ ಸೇರಿ ಎಲ್ಲವನ್ನು ನೀಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಸಮಾಜದಲ್ಲಿ ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ. ಮಕ್ಕಳು ಕೇವಲ ವಿದ್ಯೆ ಕಲಿಯುತ್ತಿದ್ದು, ಮಾನವೀಯ ಗುಣಗಳಿಂದ ದೂರ ಉಳಿಯುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯಕವಿದ್ದು, ಈ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಚಿಂತಿಸುವಂತಾಗಬೇಕೆಂದರು.
ವೇದಿಕೆಯಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್, ನ್ಯೂಟೌನ್ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್, ರಾಚಂದ್ರ, ಚಿರಾಗ್, ಮಾಲತಿ ಕಾನಿಟ್ಕರ್, ಮಾರುತಿಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂರ್ಣಿಮಾ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ರಾಧಿಕ ನಿರೂಪಿಸಿದರು. ವಿದ್ಯಾ ಕೇಂದ್ರದ ಸಹಕಾರ್ಯದರ್ಶಿ ರಮೇಶ್ ವಂದಿಸಿದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾಕೇಂದ್ರ ಶೇ.೯೩ರಷ್ಟು ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಪುಸ್ತಕ ನೀಡಿ ಅಭಿನಂದಿಸಲಾಯಿತು.
No comments:
Post a Comment