![](https://blogger.googleusercontent.com/img/b/R29vZ2xl/AVvXsEhNYIgBGhwTO83yRQH_VOC_RrmPKQ5Qto4Xp5T06PDeKS-v0gLwX-nwuS8Ta7UpO66GgXECAB71S5e6UsQpBziPVkr0Uc1us58042IVAj2gr9fMGnCURKFkGyhVCSRZ1Lz9_ERe0MXnacQE/w400-h190-rw/D23-BDVT1-744338.jpg)
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ ಮಾತನಾಡಿದರು.
ಭದ್ರಾವತಿ, ಸೆ. ೨೩: ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ ತಿಳಿಸಿದರು.
ಅವರು ಬುಧವಾರ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ಬಹುತೇಕ ಪೌರಕಾರ್ಮಿಕರು ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಗಮನಿಸಿದಾಗ ಪೌರಕಾರ್ಮಿಕರು ತಮ್ಮ ಕರ್ತವ್ಯದ ಅವಧಿ ಮುಕ್ತಾಯಗೊಳ್ಳುವ ಮೊದಲೇ ಮರಣ ಹೊಂದುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸುವ ಜೊತೆಗೆ ಪೌರಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಹಿನ್ನಲೆಯಲ್ಲಿ ಮೊದಲು ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಭದ್ರಾವತಿ ನಗರಸಭೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲೂ ಕೊರೋನಾ ಸಂದರ್ಭದಲ್ಲೂ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವೇತನ, ಪಡಿತರ ವಿತರಣೆ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಕಾಲದಲ್ಲಿ ತಲುಪಬೇಕು. ಈ ನಿಟ್ಟಿನಲ್ಲಿ ಆಡಳಿತ ನಡೆಸುವ ಸರ್ಕಾರ, ಅಧಿಕಾರಿಗಳ ವರ್ಗ ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮಾತನಾಡಿ, ಪ್ರಸ್ತುತ ನಗರಸಭೆಯಲ್ಲಿ ಪೌರಕಾರ್ಮಿಕರು ಮತ್ತು ಅಧಿಕಾರಿ ವರ್ಗದವರು ಸರಿಸಮಾನವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳು ಎಲ್ಲರನ್ನು ಗೌರವಪೂರ್ವಕವಾಗಿ ಕಾಣುತ್ತಿದ್ದಾರೆ. ಪೌರಕಾರ್ಮಿಕರಿಂದ ಹೆಚ್ಚಿನ ಸೇವೆ ಬಯಸುವ ನಾವು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಹ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದರು.
ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಸಹ ಸರಿ ಸಮಾನವಾಗಿ ಕಾಣಲಾಗುತ್ತಿದೆ. ಎಲ್ಲರಿಗೂ ಸಹ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮಪರ್ಕವಾಗಿ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮೊದಲು ಪೌರಕಾರ್ಮಿಕರ ಜೀವನ ಮಟ್ಟ ಸುಧಾರಣೆಯಾಗಬೇಕು. ಆಗ ಮಾತ್ರ ಇತರರು ನೆಮ್ಮದಿಯಾಗಿರಲು ಸಾಧ್ಯ ಎಂದರು.
ಕಂದಾಯಾಧಿಕಾರಿ ರಾಜ್‌ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಇಂಜಿನಿಯರ್ ರಂಗನಾಥಪುರೆ, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಶಾಲಾ ದಾಖಲಾತಿ ಶುಲ್ಕ ವಿತರಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರಿಗೆ ವಿಶೇಷ ಭತ್ಯೆ ವಿತರಿಸಲಾಯಿತು. ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.