Monday, April 12, 2021

ಕಬಡ್ಡಿ ಪಂದ್ಯಾವಳಿ ಗಲಾಟೆ ಪ್ರಕರಣ : ಶಾಸಕರ ಪುತ್ರನಿಗೆ ಜಾಮೀನು ಮಂಜೂರು

ಭದ್ರಾವತಿ, ಏ. ೧೨: ನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಶಾಸಕರ ಪುತ್ರನಿಗೆ ರಾಜ್ಯ ಉಚ್ಛ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
 ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್‌ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾ.೬ರಂದು ಬಂಧಿಸಿದ್ದರು. ಈ ಸಂಬಂಧ ನಗರದ ಜೆಎಂಎಫ್‌ಸಿ ಹಾಗು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಈ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಘಟನೆ ವಿವರ : ಫೆ.೨೭ ಮತ್ತು ೨೮ರಂದು ಎರಡು ದಿನಗಳ ಕಾಲ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಬಹುಮಾನ ವಿತರಣೆ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಹಲವರ ವಿರುದ್ಧ ದೂರು, ಪ್ರತಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಸವೇಶ್ ವಿರುದ್ಧ ಸೆಕ್ಷನ್ ೩೦೭ರ ಅಡಿಯಲ್ಲಿ ಹಲ್ಲೆ ಹಾಗು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ತಲೆ ಮರೆಸಿಕೊಂಡಿದ್ದ ಬಸವೇಶ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಪುತ್ರ ಬಸವೇಶ್ ಹಾಗು  ಕುಟುಂಬ ಸದಸ್ಯರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದನ್ನು ವಿರೋಧಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಶಿವಮೊಗ್ಗದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ  ಸರ್ಕಾರದ ವಿರುದ್ಧ ಸಿಡಿದೆದಿದ್ದರು.

ಚಿತ್ರ: ಡಿ೧೨-ಬಿಡಿವಿಟಿ೪
ಬಿ.ಎಸ್ ಬಸವೇಶ್

ನಗರಸಭೆ ಚುನಾವಣೆ : ಬಿ ಫಾರಂ ಇಲ್ಲದೆ ಸಂಗಮೇಶ್ವರ್ ಸಂಬಂಧಿ ಎಚ್. ವಿದ್ಯಾ ನಾಮಪತ್ರ ಸಲ್ಲಿಕೆ

ಭದ್ರಾವತಿ ನಗರಸಭೆ ಚುನಾವಣೆ ೪ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಫಾರಂ ಇಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂಬಂಧಿ ಎಚ್. ವಿದ್ಯಾ ಸೋಮವಾರ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೨: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಂದ ನಾಮಪತ್ರಗಳ ಭರಾಟೆ ಹೆಚ್ಚಾಗಿದ್ದು, ಪ್ರತಿಷ್ಠಿತ ವಾರ್ಡ್‌ಗಳಲ್ಲಿ ಒಂದಾಗಿರುವ ೪ನೇ ವಾರ್ಡ್‌ನಲ್ಲಿ ಪ್ರಮುಖ ರಾಜಕೀಯಗಳು ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿವೆ. ಶುಕ್ರವಾರ ಬಿಜೆಪಿ ಘೋಷಿತ ಅಭ್ಯರ್ಥಿಯಾಗಿರುವ ಅನುಪಮ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್. ವಿದ್ಯಾ ನಾಮಪತ್ರ ಸಲ್ಲಿಸಿದರು.
   ಅಭ್ಯರ್ಥಿಗಳಿಬ್ಬರು ಒಂದೇ ಸಮುದಾಯಕ್ಕೆ  ಸೇರಿದವರಾಗಿದ್ದು, ಅನುಪಮ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್‌ರವರ ಪತ್ನಿಯಾಗಿದ್ದಾರೆ. ವಿದ್ಯಾ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
    ವಿದ್ಯಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾವ ಆನಂದಪ್ಪ, ಪತಿ ಹಾಲೇಶ್, ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಜಗನ್ನಾಥ್ ಕುಟುಂಬ ವರ್ಗದವರು, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್, ರವೀಶ್, ಬಸವರಾಜ್, ರಮಾಕಾಂತ, ಕಾಂಗ್ರೆಸ್ ಪಕ್ಷದ ಮುಖಂಡರು, ಸ್ಥಳೀಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಚುನಾವಣಾ ನಿರ್ವಹಣಾ ಸಮಿತಿ ರಚನೆ

ಭದ್ರಾವತಿ, ಏ. ೧೨: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಕ್ಷೇತ್ರ ಪ್ರಮುಖ್‌ರಾಗಿ ಬಿ.ಕೆ ಶ್ರೀನಾಥ್‌ರನ್ನು ನೇಮಕಗೊಳಿಸಲಾಗಿದೆ.
ಚುನಾವಣಾ ಕಾರ್ಯಾಲಯ ಜವಾಬ್ದಾರಿ ಸಿ. ರಾಘವೇಂದ್ರ, ವಿಲಾಸ್‌ರಾವ್, ಅನುಮತಿಗಳು ವಿಜಯ್‌ರಾಜ್, ಮಾಧ್ಯಮ ಬಿ.ಎಸ್ ಶ್ರೀನಾಥ್, ಪ್ರವಾಸ ಅನುಚರಣೆ ಎಂ.ಎಸ್ ಸುರೇಶಪ್ಪ, ಹೈಟೆಕ್ ಪ್ರಚಾರ ರುದ್ರೇಶ್ ಕೂಡ್ಲಿಗೆರೆ, ವಾಹನ ವ್ಯವಸ್ಥೆ ಬಿ.ಎಸ್ ಕಾಂತರಾಜ್, ಪ್ರಚಾರ ಸಾಮಾಗ್ರಿ ಜೆ. ಮೂರ್ತಿ, ನಾಗರಾಜ್ ರಾವ್ ಅಂಬೋರೆ, ಚುನಾವಣಾ ಕಾರ್ಯ ಲೆಕ್ಕಪತ್ರ ಸಂಪತ್ ರಾಜ್ ಭಾಂಟಿಯಾ, ಅಭಿಯಾನ ಚಂದ್ರು ನರಸೀಪುರ, ಮಹಿಳಾ ಕಾರ್ಯ ಆರ್.ಎಸ್ ಶೋಭಾ, ಸುಲೋಚನಾ ಪ್ರಕಾಶ್, ಅನ್ನಪೂರ್ಣ ಸಾವಂತ್, ಬೂತ್ ಕಾರ್ಯ ಹನುಮಂತ್ ನಾಯ್ಕ್, ಸರಸ್ವತಿ, ಆರ್.ಪಿ ವೆಂಕಟೇಶ್, ಕಾನೂನು ಹಾಗು ಆಯೋಗ ಪ್ರಮುಖ್ ನಾಗರಾಜ್, ಉದಯ್‌ಕುಮಾರ್, ಚನ್ನೇಶ್, ವಿಶೇಷ ಸಂಪರ್ಕ ಎಂ. ಮಂಜುನಾಥ್, ಬಿ.ಜಿ ರಾಮಲಿಂಗಯ್ಯ, ವಿಶ್ವನಾಥರಾವ್, ಟಿ. ವೆಂಕಟೇಶ್, ಕರಿಗೌಡ್ರು ಹಾಗು ಮತದಾರರ ಪಟ್ಟಿ ಎಂ.ಎಸ್ ಸುರೇಶಪ್ಪ ನೇಮಕಗೊಳಿಸಲಾಗಿದೆ.

ನಗರಸಭೆ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ೨ನೇ ಪಟ್ಟಿ ಬಿಡುಗಡೆ

ಭದ್ರಾವತಿ, ಏ. ೧೨: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಕೆಲವು ದಿನಗಳ ಹಿಂದೆ ೨೧ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು. ಇದೀಗ ಉಳಿದ ೧೩ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ.
    ೧೪ ವಾರ್ಡ್‌ಗಳ ಪೈಕಿ ೧ನೇ ವಾರ್ಡ್ ಹೊರತುಪಡಿಸಿ ಉಳಿದ ೧೩ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಹಾಗು ಈ ಹಿಂದಿನ ೨೧ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದ ೨ ವಾರ್ಡ್‌ಗಳ ಅಭ್ಯರ್ಥಿಗಳನ್ನು ಬದಲಿಸಲಾಗಿದೆ.
    ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ಕ್ಕೆ ಶಶಿಕಲಾ ನಾರಾಯಣ, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ಕ್ಕೆ ಆಟೋ ಮೂರ್ತಿ, ಅನ್ವರ್‌ಕಾಲೋನಿ, ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ಕ್ಕೆ ಅಮೀರ್ ಪಾಷಾ, ಭದ್ರಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೯ಕ್ಕೆ ಗಿರೀಶ್, ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ. ೧೩ಕ್ಕೆ ಸುನಿತಾ ಮೋಹನ್, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ಕ್ಕೆ ವಿ. ಕದಿರೇಶ್, ನೆಹರೂ ನಗರ ಒಳಗೊಂಡಿರುವ ವಾರ್ಡ್ ನಂ.೧೭ಕ್ಕೆ ಡಿ.ಎನ್  ರವಿಕುಮಾರ್, ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ. ೨೧ಕ್ಕೆ ಅನೂಷ, ಉಜ್ಜನಿಪುರ ಒಳಗೊಂಡಿರುವ ವಾರ್ಡ್ ನಂ.೨೨ಕ್ಕೆ ಭರತ್, ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ. ೨೩ಕ್ಕೆ ಸುಮಾ ರಮೇಶ್. ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್‌ಶೆಡ್ ಒಳಗೊಂಡಿರವ ವಾರ್ಡ್ ನಂ.೨೭ಕ್ಕೆ ಶೈಲಾ ರವಿಕುಮಾರ್, ಕಿತ್ತೂರು ರಾಣಿ ಚೆನ್ನಮ್ಮ-ಎನ್‌ಟಿಬಿ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ಕ್ಕೆ ರೂಪಾ ನಾಗರಾಜ್, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ಕ್ಕೆ ಶ್ರೀಧರ ಗೌಡ, ಅಪ್ಪರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ಕ್ಕೆ ಶ್ಯಾಮಲ ಸತ್ಯಣ್ಣ ಹಾಗು ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ಕ್ಕೆ ಲಕ್ಷ್ಮಮ್ಮ ನರಸಿಂಹ ಗೌಡರನ್ನು ಆಯ್ಕೆ ಮಾಡಲಾಗಿದೆ.

ನಗರಸಭೆ ಚುನಾವಣೆ ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಭಾರತೀಯ ಜನತಾ ಪಕ್ಷದ ಭದ್ರಾವತಿ ನಗರಸಭೆ ಚುನಾವಣೆ ಕಾರ್ಯಾಲಯದ ಉದ್ಘಾಟನೆಯನ್ನು ಸೋಮವಾರ ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ನೆರವೇರಿಸಿದರು.  
  ಭದ್ರಾವತಿ, ಏ. ೧೨: ಭಾರತೀಯ ಜನತಾ ಪಕ್ಷದ ನಗರಸಭೆ ಚುನಾವಣೆ ಕಾರ್ಯಾಲಯದ ಉದ್ಘಾಟನೆಯನ್ನು ಸೋಮವಾರ ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ನೆರವೇರಿಸಿದರು.  
     ಬಸವೇಶ್ವರ ವೃತ್ತದಲ್ಲಿರುವ ಪಕ್ಷದ ಕಛೇರಿಯಲ್ಲಿ ಅಧಿಕೃತವಾಗಿ ಕಾರ್ಯಾಲಯಕ್ಕೆ ಚಾಲನೆ ನೀಡುವ ಮೂಲಕ ಈ ಬಾರಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸವನ್ನು ಜಿಲ್ಲಾಧ್ಯಕ್ಷರು ವ್ಯಕ್ತಪಡಿಸಿದರು.
      ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ದರಾಮಣ್ಣ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಿ.ಎಸ್ ಅರುಣ್, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಸೂಡಾ ಸದಸ್ಯ ರಾಮಲಿಂಗಯ್ಯ,  ಪ್ರಮುಖರಾದ ಗಿರೀಶ್‌ಪಟೇಲ್, ಎಸ್. ದತ್ತಾತ್ರಿ, ಸಿ. ಮಂಜುಳ, ಮಂಗೋಟೆ ರುದ್ರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.