Monday, June 16, 2025

ಸುದರ್ಶನ್ ಬಿ. ಓಂಕಾರ್‌ಗೆ `ಯೋಗಾಚಾರ್ಯ ಅಂತರಾಷ್ಟ್ರೀಯ ಯೋಗ ರತ್ನ-೨೦೨೫' ಪ್ರಶಸ್ತಿ

ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಹಾಗು ಯೋಗ ಶಿಕ್ಷಕರ ತರಬೇತಿದಾರ ಭದ್ರಾವತಿ ನಗರದ ಸುದರ್ಶನ್ ಬಿ. ಓಂಕಾರ್ ಅವರಿಗೆ ವಿಯೆಟ್ನಾಂ ವಿ-ಯೋಗ ವರ್ಲ್ಡ್ ಸಂಸ್ಥೆ `ಯೋಗಾಚಾರ್ಯ ಅಂತರಾಷ್ಟ್ರೀಯ ಯೋಗ ರತ್ನ-೨೦೨೫' ಪ್ರಶಸ್ತಿ ನೀಡಿ ಗೌರವಿಸಿದೆ. 
    ಭದ್ರಾವತಿ: ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಹಾಗು ಯೋಗ ಶಿಕ್ಷಕರ ತರಬೇತಿದಾರ ನಗರದ ಸುದರ್ಶನ್ ಬಿ. ಓಂಕಾರ್ ಅವರಿಗೆ ವಿಯೆಟ್ನಾಂ ವಿ-ಯೋಗ ವರ್ಲ್ಡ್ ಸಂಸ್ಥೆ `ಯೋಗಾಚಾರ್ಯ ಅಂತರಾಷ್ಟ್ರೀಯ ಯೋಗ ರತ್ನ-೨೦೨೫' ಪ್ರಶಸ್ತಿ ನೀಡಿ ಗೌರವಿಸಿದೆ. 
    ವಿಯೆಟ್ನಾಂ ವಿ-ಯೋಗ ವರ್ಲ್ಡ್ ಸಂಸ್ಥೆ ಅಧ್ಯಕ್ಷ ವಿಶ್ವನಾಥ್ ಕುಲಕರ್ಣಿ ಮತ್ತು ಭಾರತದ ಎವಿಐವೈಎ ಅಕಾಡೆಮಿ ಅಧ್ಯಕ್ಷ ತೀರ್ಥರಾಜ್ ಹೋಳೂರು ಅವರಿಂದ ಹುಚಿ ಮಿನ್ಹ್ ಸಿಟಿ ಸ್ಟಾರ್ ಫಸ್ಟ್ ಹೋಟೆಲ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜೂ.೭ರಂದು ನಡೆದ ೨ನೇ ಅಂತರಾಷ್ಟ್ರೀಯ ಯೋಗ ಉತ್ಸವ ಮತ್ತು ಸಾಂಸ್ಕೃತಿಕ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 
ಇವರು ನಗರದಲ್ಲಿ ಕಳೆದ ೩೦ ವರ್ಷಗಳಿಂದ ಯೋಗಾಭ್ಯಾಸ ನಡೆಸುವ ಜೊತೆಗೆ ಪ್ರಸ್ತುತ ಬೆಂಗಳೂರಿನಲ್ಲಿ ಸಹ ಯೋಗ ಶಿಕ್ಷಕರ ತರಬೇತಿದಾರರಾಗಿ, ಯೋಗ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೂ.೧೭ರಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ


    ಭದ್ರಾವತಿ : ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ವತಿಯಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜೂ. ೧೭ರ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ  ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿದೆ. 
    ಇತ್ತೀಚೆಗೆ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಸಲ್ಲಿಕೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಲೋಕಾಯುಕ್ತ ಕಚೇರಿಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. 
    ದೂರುಗಳಿದ್ದಲ್ಲಿ ಸಾರ್ವಜನಿಕರು ಅಹವಾಲು ಸ್ವೀಕಾರ ಸಭೆಗೆ ಖುದ್ದಾಗಿ ಆಗಮಿಸಿ ಸಲ್ಲಿಸುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ.  ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್‌ರವರು ಕೋರಿದ್ದಾರೆ.

ವೈಎಂಸಿಎ ಸಂಸ್ಥಾಪಕರ ದಿನಾಚರಣೆ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಭದ್ರಾವತಿ ನಗರದ ನ್ಯೂಟೌನ್ ವೈಎಂಸಿಎ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ  ಅಭಿನಂದಿಸಲಾಯಿತು.
    ಭದ್ರಾವತಿ : ನಗರದ ನ್ಯೂಟೌನ್ ವೈಎಂಸಿಎ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ  ಅಭಿನಂದಿಸಲಾಯಿತು.
    ನ್ಯೂಟೌನ್ ವೇನ್ಸ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಕ್ರೈಸ್ತ ಅಭಿವೃದ್ಧಿ ಮಂಡಳಿ ನಿರ್ದೇಶಕ, ಬಿಗ್ ಜೆಟಿವಿ ಮಾಲೀಕ ಪ್ರಶಾಂತ್ ಜತನ್ನ ಉದ್ಘಾಟಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಅಶ್ರಿತ ರೆಬೆಲ್ಲೊ, ರೈಯಾನ್ ಮಥಾಯ್ , ಎಸ್.ಜೆ ಶೈನಿ ಅಂಗೆಲ್, ಜೆ.ಎ ಎಸ್ತರ್ ಮತ್ತು ಎ. ಡಾಲ್ವಿನ್ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ದೀಕ್ಷಾ, ಜಾಸ್ವಾ ಥಾಮಸ್, ಸಾಮ್ಯುಯೆಲ್, ಸಂಧ್ಯಾ, ತೆರೇಸಾ ಡೆಲ್ಸಿ, ಜೆಮಿಮಾ ಜಾಸ್ಫರ್, ಕೃಪ ಶರೋನ್ ಮತ್ತು ಸಹನಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಮೋಸಸ್ ರೋಸಯ್ಯ ಅಧ್ಯಕ್ಷತೆ ವಹಿಸಿದ್ದರು. 
    ಕೆಪಿಸಿಸಿ ಕಾರ್ಯದರ್ಶಿ, ವೈದ್ಯರ ಘಟಕದ ರಾಜ್ಯಾಧ್ಯಕ್ಷ ಡಾ. ಪ್ರದೀಪ್ ಡಿ' ಮೆಲ್ಲೋ, ಜೋಸೆಫ್ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಲತಾ ರಾಬರ್ಟ್ ಡಿ'ಸೋಜಾ, ಯುವ ಮುಖಂಡ ಬಿ.ಎಸ್ ಗಣೇಶ್, ವೈಎಂಸಿಎ ಉಡುಪಿ ಯೋಜನಾ ವಿಭಾಗದ ಕಾರ್ಯದರ್ಶಿ ರೇವರೆಂಡ್ ಧನರಾಜ್, ವೆಸ್ಲಿ ಕಾರ್ಕಡ, ಯುಸಿಎ ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯ ಐ.ವಿ ಸಂತೋಷ್, ಮಾಜಿ ಸದಸ್ಯ ಫ್ರಾನ್ಸಿಸ್, ಟಿಸಿಡಬ್ಲ್ಯುಎ ಭಾಸ್ಕರ್ ಬಾಬು, ಮುಖಂಡರಾದ ದಾಸ್, ಎಂ.ಜಿ ರಾಮಚಂದ್ರನ್ ಮತ್ತು ಅಭಿ ಮತ್ತು ವೈಎಂಸಿಎ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಕಲಿ ನೋಟು ನೀಡಿ ವ್ಯವಹಾರ : ರಿಯಲ್ ಎಸ್ಟೇಟ್ ಉದ್ಯಮಿ ಬಂಧನ

ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನಗರಸಭೆ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿ ಆತನಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
    ಭದ್ರಾವತಿ: ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿ ಆತನಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
    ಭಂಡಾರಹಳ್ಳಿ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿಬ್ಲಾಕ್ ಶೆಡ್ ನಿವಾಸಿ ಅಜಯ್ ಎಂಬ ಯುವಕ ನೀಡಿದ ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಪೊಲೀಸರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು,  ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ನಡುವೆ ನಕಲಿ ನೋಟುಗಳು ಕಂಡು ಬಂದಿದ್ದಲ್ಲಿ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. 
    ಸದ್ಯಕ್ಕೆ ಪೊಲೀಸರು ರಂಗೇಗೌಡನಿಂದ ರು. ೫೦೦ ಮುಖ ಬೆಲೆಯ ೧೩ ನೋಟುಗಳು, ರು. ೨೦೦ ಮುಖ ಬೆಲೆಯ ೧ ನೋಟು, ರು. ೧೦೦ ಮುಖ ಬೆಲೆಯ ೧ ನೋಟು ಮತ್ತು ರು. ೫೦ ಮುಖ ಬೆಲೆಯ ೧ ನೋಟು ವಶಪಡಿಸಿಕೊಂಡಿದ್ದಾರೆ. 
    ಜೂ. ೧೨ರಂದು ಸಂಜೆ ವೇಳೆ ದ್ವಿಚಕ್ರ ವಾಹನ(ಡಿಸ್ಕವರ್ ಬೈಕ್)ದಲ್ಲಿ ಬಂದ ವ್ಯಕ್ತಿಯೋರ್ವ ರು. ೫೦೦ ಮುಖ ಬೆಲೆಯ ನಕಲಿ ನೋಟು ನೀಡಿ ವ್ಯಾಪಾರ ಮಾಡಿ ಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.


ನಕಲಿ ನೋಟು ನೀಡಿ ವ್ಯವಹರಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡ 

    ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ  ಜಿ.ಕೆ ಮಿಥುನ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ ಆರ್ ನಾಗರಾಜ, ಪ್ರಭಾರ ನಗರ ವೃತ್ತ ನಿರೀಕ್ಷಕ ಮಂಜುನಾಥ್‌ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇ ರವರ ನೇತೃತ್ವದ ಸಿಬ್ಬಂದಿಗಳಾದ ಠಾಣೆಯ ಸಹಾಯಕ ನಿರೀಕ್ಷಕ ಶಿವಸ್ವಾಮಿ , ಸಿಬ್ಬಂದಿಗಳಾದ ನವೀನ್, ಎಚ್. ವೈ ವಿಜಯ್, ಶ್ರೀಧರ್, ಮಾರುತಿ ಪಾಟೀಲ, ಪ್ರಸನ್ನ, ಬಿ.ಎಂ ರಘು, ಬಿ.ಎಚ್ ನಾಗರಾಜಪ್ಪರವರನ್ನೊಳಗೊಂಡ ತನಿಖಾ ತಂಡ ರಚಸಿಲಾಗಿತ್ತು.
ಬಂಧಿತ ರಂಗೇಗೌಡ ಬೇರೆ ಕಡೆ ವ್ಯವಹಾರ ಮಾಡಿರುವುದಾಗಿ ಮಾಹಿತಿ ನೀಡಿದ್ದು, ಈ ಹಿನ್ನಲೆಯಲ್ಲಿ ಓಎಫ್‌ಪಿ ೭೯೦೮೨೯ ಮತ್ತು ೯ಟಿವಿ ೯೭೮೨೦೨ ಈ ನಂಬರಿನ ೫೦೦ ರು. ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ನ್ಯೂಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ, ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್‌ಕುಮಾರ್‌ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.