Saturday, August 20, 2022

ಭದ್ರಾವತಿ ಸಿ.ಎನ್ ರಸ್ತೆ ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ

ಭದ್ರಾವತಿ: ನಗರದ ಸಿ.ಎನ್ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. 


    ಮಾಧವಾಚಾರ್ ವೃತ್ತದ ಸಮೀಪದಲ್ಲಿರುವ ಕೆಎಂಎಸ್ ಸಿಲ್ಕ್ಸ್ ಅಂಡ್ ಸ್ಯಾರಿಸ್ ಬಟ್ಟೆ ಅಂಗಡಿಯಲ್ಲಿ ರಾತ್ರಿ ವೇಳೆ  ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬಟ್ಟೆ ಅಂಗಡಿಯಲ್ಲಿನ ವಸ್ತುಗಳು ಬಹುತೇಕ ಸುಟ್ಟು ಕರಕಲಾಗಿವೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.   ಕೆಎಂಎಸ್ ಸಿಲ್ಕ್ಸ್ ಬಟ್ಟೆ ಅಂಗಡಿಯಲ್ಲಿ ರಾತ್ರಿ ವೇಳೆ  ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬಟ್ಟೆ ಅಂಗಡಿಯಲ್ಲಿನ ವಸ್ತುಗಳು ಬಹುತೇಕ ಸುಟ್ಟು ಕರಕಲಾಗಿವೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. 



     ಬೆಂಕಿ ದುರ್ಘಟನೆಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ  ಮೋಹನ್ ಸೇರಿದಂತೆ ಸ್ಥಳೀಯ ಮುಖಂಡರು ಬೇಟೆ ನೀಡಿ ಪರಿಶೀಲನೆ ನಡೆಸಿದರು.
     ಹಳೆಯ ಕಟ್ಟಡ ನವೀಕರಣ:
   ಈ ಬಟ್ಟೆ ಅಂಗಡಿ ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ್ದಾಗಿದ್ದು, ಇದು ತುಂಬಾ ಹಳೆಯ ಕಟ್ಟಡವಾಗಿದೆ. ಯಾವುದೇ ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ. 
   ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಂಕಿ ಅವಘಡ :
 ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕೆಲವು ತಿಂಗಳು ಹಿಂದೆ ಹೊಸ ಸೇತುವೆ ರೆಸ್ತೆಯಲ್ಲಿರುವ ಸಾಮಿಲ್‌ನಲ್ಲಿ ಬೃಹತ್ ಬೆಂಕಿ ಅವಘಡ ಸಂಭವಿಸಿತ್ತು.  ಇದಲ್ಲದೆ ಬ್ಯಾಂಕ್ ಕಟ್ಟಡ, ಚಪ್ಪಲಿ ಅಂಗಡಿಯಲ್ಲೂ ಬೆಂಕಿ ಅವಘಡಗಳು ಸಂಭವಿಸಿದ್ದವು.

ದೇವರಾಜ ಅರಸು ನುಡಿದಂತೆ ನಡೆದ ಆದರ್ಶ ಆಡಳಿತಗಾರ : ಆರ್. ಪ್ರದೀಪ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಿಂದು ವರ್ಗಗಳ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅವರು ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
    ಭದ್ರಾವತಿ, ಆ. ೨೦ : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ನುಡಿದಂತೆ ನಡೆದ ಆದರ್ಶ ಆಡಳಿತಗಾರನಾಗಿದ್ದು, ಎಂದಿಗೂ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದ್ದಾರೆಂದು ತಹಸೀಲ್ದಾರ್ ಆರ್. ಪ್ರದೀಪ್ ಬಣ್ಣಿಸಿದರು.
    ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಿಂದು ವರ್ಗಗಳ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅವರು ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಮ್ಮ ಆಡಳಿತ ಇನ್ನೊಬ್ಬರಿಗೆ ಮಾದರಿಯಾಗಬೇಕು. ಹಿಂದುಳಿದ ವರ್ಗಗಳ ಧ್ವನಿಯಾಗಿ ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿದವರು ಡಿ. ದೇವರಾಜ ಅರಸು. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಮಹತ್ವದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅದರಂತೆ ತಾವು ಸಹ ನಡೆದುಕೊಂಡರು. ಇಂತಹ ಆದರ್ಶ ವ್ಯಕ್ತಿ ಇಂದು ಆಡಳಿತ ನಡೆಸುವವರಿಗೆ ಮಾದರಿಯಾಗಿದ್ದಾರೆ ಎಂದರು.



    ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ದೇವರಾಜ ಅರಸು ಅವರ ಕುರಿತು ಹೆಚ್ಚಿಗೆ ತಿಳಿಸಿಕೊಡುವ ಅಗತ್ಯವಿಲ್ಲ. ಅವರ ವಿಚಾರ ಎಲ್ಲರಿಗೂ ತಿಳಿದಿದೆ. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಮಾಡಿದಂತಹ ಸಾಮಾಜಿಕ ಕ್ರಾಂತಿಯನ್ನು ದೇವರಾಜ ಅರಸು ಅವರು ೪ ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಮಾಡಿ ತೋರಿಸಿದ್ದಾರೆ. ಇಂತಹ ವ್ಯಕ್ತಿಯ ಆದರ್ಶತನಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದರು.
    ಹಿಂದುಳಿದ ವರ್ಗಗಳ ಸಮಾಜದ ಮುಖಂಡ ಟಿ. ವೆಂಕಟೇಶ್ ಮಾತನಾಡಿ, ದೇವರಾಜ ಅರಸು ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ  ಪ್ರೇರಣೆಗೊಂಡು ಅವುಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾದರು ಎಂದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ರಾಜೇಶ್ವರಿ, ಉಪ ತಹಸೀಲ್ದಾರ್ ಮಂಜಾನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಹಿಂದುಳಿದ ವರ್ಗಗಳ ಇಲಾಖೆಯ ರಮೇಶ್ ಸ್ವಾಗತಿಸಿದರು.


ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ : ನಗರಸಭೆವತಿಯಿಂದ ಕಾರ್ಯಾಚರಣೆ

೯ ಬಿಡಾಡಿ ದನಗಳು ವಶಕ್ಕೆ ಪಡೆದು ಮಾಲೀಕರಿಗೆ ದಂಡ

ಬಿಡಾಡಿ ದನಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಶನಿವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆಯಲಾಯಿತು.
    ಭದ್ರಾವತಿ, ಆ. ೨೦: ಬಿಡಾಡಿ ದನಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಶನಿವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆಯಲಾಯಿತು.
    ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಪಾದಚಾರಿ ಹಾಗು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಗರಸಭೆಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಈ ನಡುವೆ ನಗರಸಭೆ ಆಡಳಿತ ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಹಲವು ಬಾರಿ ಮಾಲೀಕರಿಗೆ ಸೂಚಿಸಿದೆ. ಆದರೂ ಸಹ ನಿರ್ಲಕ್ಷ್ಯತನವಹಿಸಿರುವ ಹಿನ್ನಲೆಯಲ್ಲಿ ಬಿ.ಎಚ್ ರಸ್ತೆ, ತಾಲೂಕು ಕಛೇರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ೯ ಬಿಡಾಡಿ ದನಗಳನ್ನು ವಶಕ್ಕೆ ಪಡೆದು ತರೀಕೆರೆ ರಸ್ತೆಯಲ್ಲಿರುವ ನಗರಸಭೆ ನೀರು ಸರಬರಾಜು ಕೇಂದ್ರದ ಆವರಣದಲ್ಲಿರಿಸಲಾಗಿತ್ತು. ಸಂಜೆ ವೇಳೆಗೆ ಸಂಬಂಧಪಟ್ಟ ಮಾಲೀಕರು ದಂಡ ಪಾವತಿಸಿ ಬಿಡಿಸಿಕೊಂಡು ಹೋಗಿದ್ದಾರೆ.
    ಪತ್ರಿಕೆಗೆ ಮಾಹಿತಿ ನೀಡಿದ ಪೌರಾಯುಕ್ತ ಮನುಕುಮಾರ್, ನಗರಸಭೆ ಸಿಬ್ಬಂದಿಗಳು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಡಾಡಿ ದನಗಳ ಮಾಲೀಕರು ಎಚ್ಚೆತ್ತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಡಾಡಿ ದನಗಳನ್ನು ರಸ್ತೆಗೆ ಬಿಡಬಾರದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
    

    ಪೌರಾಯುಕ್ತ ಮನುಕುಮಾರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ನಾಯಕರಿಂದ ಅಭಿವೃದ್ಧಿ ಆಡಳಿತ, ಬಿಜೆಪಿ ನಾಯಕರಿಂದ ಭಷ್ಟ್ರ, ಕೋಮುವಾದಿ ಆಡಳಿತ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಶಾಸಕರ ಗೃಹ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ನಗರ ಮತ್ತು ಗ್ರಾಮಾಂತರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ, ಆ. ೨೦: ಕಾಂಗ್ರೆಸ್ ಪಕ್ಷದ ನಾಯಕರು ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಇಂದಿಗೂ ಮಾದರಿಯಾಗಿ ಉಳಿದುಕೊಂಡಿದ್ದಾರೆ. ಆದರೆ ಇಂದಿನ ಬಿಜೆಪಿ ನಾಯಕರು ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ ದೇಶವನ್ನು ಛಿದ್ರ ಛಿದ್ರವಾಗಿಸುವ ಮೂಲಕ ಅಭದ್ರತೆ ಉಂಟು ಮಾಡುತ್ತಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
    ಅವರು ಶನಿವಾರ ಶಾಸಕರ ಗೃಹ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ನಗರ ಮತ್ತು ಗ್ರಾಮಾಂತರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದ ಆಡಳಿತ ವ್ಯವಸ್ಥೆಯಲ್ಲೂ ಎಲ್ಲರಿಗೂ ಸಮಾನವಾದ ಹಕ್ಕು ನೀಡಬೇಕೆಂಬ ಉದ್ದೇಶದೊಂದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದವರು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಎಂಬುದನ್ನು ಯಾರು ಮರೆಯಬಾರದು. ರಾಜೀವ್ ಗಾಂಧಿ ಆಧುನಿಕ ಯುಗಕ್ಕೆ ಮುನ್ನುಡಿ ಬರೆದವರು. ಇಂತಹ ಮಹಾನ್ ನಾಯಕನನ್ನು ಈ ದೇಶದಲ್ಲಿ ಇದುವರೆಗೂ ಕಾಣಲು ಸಾಧ್ಯವಾಗಿಲ್ಲ. ಇಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಕೋಮುವಾದಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಮಾಜಿ ಸಚಿವ ಈಶ್ವರಪ್ಪ ಗಡಿಪಾರು ಮಾಡಿ:
    ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಾಚರಣೆ ಸಮಯದಲ್ಲಿ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ವಿನಾಕಾರಣ ಕೋಮು-ಗಲಭೆ ಉಂಟು ಮಾಡಲು ಯತ್ನಿಸಿದ್ದಾರೆ. ಆದರೆ ಕ್ಷೇತ್ರದ ಜನರು ಯಾವುದಕ್ಕೂ ಕಿವಿಗೊಡದೆ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಕ್ಷೇತ್ರಕ್ಕೆ ಆಗಮಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ.  ಇವರನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.


    ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಮಾತನಾಡಿ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳಿಗೆ ಧ್ವನಿಯಾದವರು. ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲಾ ವರ್ಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸಲು ಶ್ರಮಿಸಿದ್ದರು. ದೇಶದ ಇಂದಿನ ಬೆಳವಣಿಗೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾರಣರಾಗಿದ್ದು, ಅವರ ಭವಿಷ್ಯದ ಆಲೋಚನೆಗಳು, ಇದಕ್ಕೆ ಪೂರಕವಾಗಿ ಕೈಗೊಂಡ ಯೋಜನೆಗಳು ಇಂದಿಗೂ ಜೀವಂತವಾಗಿ ಉಳಿದುಕೊಂಡಿವೆ ಎಂದರು.  
    ಹಿಂದುಳಿದ ವರ್ಗಗಳ ವಿಭಾಗದ ತಾಲೂಕು ಅಧ್ಯಕ್ಷ ಬಿ. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪ್ರಮುಖರಾದ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಡಿ.ಟಿ ಶಶಿಕುಮಾರ್, ಶಿವಮಾಧು, ಅಮೀರ್‌ಜಾನ್, ಕೃಷ್ಣಾನಾಯ್ಕ, ಗೌರಪುರ ಶಿವರಾಮ್, ಅಭಿಲಾಷ್, ಗೋಪಿ, ನಾಗರಾಜ್, ಐಸಾಕ್ ಲಿಂಕನ್, ಅಮೋಸ್, ಸತೀಶ್, ಪೀಟರ್, ಶಿವಕುಮಾರ್, ಕಾಂತರಾಜ್, ರೂಪನಾರಾಯಣ್, ಸುಮಿತ್ರಬಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.