Saturday, August 20, 2022

ದೇವರಾಜ ಅರಸು ನುಡಿದಂತೆ ನಡೆದ ಆದರ್ಶ ಆಡಳಿತಗಾರ : ಆರ್. ಪ್ರದೀಪ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಿಂದು ವರ್ಗಗಳ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅವರು ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
    ಭದ್ರಾವತಿ, ಆ. ೨೦ : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ನುಡಿದಂತೆ ನಡೆದ ಆದರ್ಶ ಆಡಳಿತಗಾರನಾಗಿದ್ದು, ಎಂದಿಗೂ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದ್ದಾರೆಂದು ತಹಸೀಲ್ದಾರ್ ಆರ್. ಪ್ರದೀಪ್ ಬಣ್ಣಿಸಿದರು.
    ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಿಂದು ವರ್ಗಗಳ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅವರು ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಮ್ಮ ಆಡಳಿತ ಇನ್ನೊಬ್ಬರಿಗೆ ಮಾದರಿಯಾಗಬೇಕು. ಹಿಂದುಳಿದ ವರ್ಗಗಳ ಧ್ವನಿಯಾಗಿ ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿದವರು ಡಿ. ದೇವರಾಜ ಅರಸು. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಮಹತ್ವದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅದರಂತೆ ತಾವು ಸಹ ನಡೆದುಕೊಂಡರು. ಇಂತಹ ಆದರ್ಶ ವ್ಯಕ್ತಿ ಇಂದು ಆಡಳಿತ ನಡೆಸುವವರಿಗೆ ಮಾದರಿಯಾಗಿದ್ದಾರೆ ಎಂದರು.



    ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ದೇವರಾಜ ಅರಸು ಅವರ ಕುರಿತು ಹೆಚ್ಚಿಗೆ ತಿಳಿಸಿಕೊಡುವ ಅಗತ್ಯವಿಲ್ಲ. ಅವರ ವಿಚಾರ ಎಲ್ಲರಿಗೂ ತಿಳಿದಿದೆ. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಮಾಡಿದಂತಹ ಸಾಮಾಜಿಕ ಕ್ರಾಂತಿಯನ್ನು ದೇವರಾಜ ಅರಸು ಅವರು ೪ ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಮಾಡಿ ತೋರಿಸಿದ್ದಾರೆ. ಇಂತಹ ವ್ಯಕ್ತಿಯ ಆದರ್ಶತನಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದರು.
    ಹಿಂದುಳಿದ ವರ್ಗಗಳ ಸಮಾಜದ ಮುಖಂಡ ಟಿ. ವೆಂಕಟೇಶ್ ಮಾತನಾಡಿ, ದೇವರಾಜ ಅರಸು ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ  ಪ್ರೇರಣೆಗೊಂಡು ಅವುಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾದರು ಎಂದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ರಾಜೇಶ್ವರಿ, ಉಪ ತಹಸೀಲ್ದಾರ್ ಮಂಜಾನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಹಿಂದುಳಿದ ವರ್ಗಗಳ ಇಲಾಖೆಯ ರಮೇಶ್ ಸ್ವಾಗತಿಸಿದರು.


No comments:

Post a Comment