ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ
ಭದ್ರಾವತಿ ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಭ್ರಷ್ಟ ಅಧಿಕಾರಿಯನ್ನು ಅಮಾನತ್ತು ಮಾಡಲು ಆಗ್ರಹಿಸಿ ಸೋಮವಾರ ತಾಲೂಕು ಪಂಚಾಯತಿ ಮುಂಭಾಗ ಹಿರಿಯೂರು ಗ್ರಾಮಾಭವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಮಾ. ೨೭: ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಭ್ರಷ್ಟ ಅಧಿಕಾರಿಯನ್ನು ಅಮಾನತ್ತು ಮಾಡಲು ಆಗ್ರಹಿಸಿ ಸೋಮವಾರ ತಾಲೂಕು ಪಂಚಾಯತಿ ಮುಂಭಾಗ ಹಿರಿಯೂರು ಗ್ರಾಮಾಭವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಿರಿಯೂರು ಗ್ರಾಮಠಾಣಾ ವಿಸ್ತೀರ್ಣ ೧೭.೦೮ ಎಕರೆ ಜಾಗದಲ್ಲಿ ಸರ್ಕಾರದ ವತಿಯಿಂದ ೧೯೯೨ರ ಅವಧಿಯಲ್ಲಿ ೧೩೯ ಕುಟುಂಬಕ್ಕೆ ನಿವೇಶನ ಪತ್ರವನ್ನು ಹಂಚಿಕೆ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಇನ್ನೂ ನೂರಾರು ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವಷ್ಟು ಜಾಗವಿದ್ದರೂ ೩೦ ವರ್ಷಗಳಿಂದ ನಿವೇಶನ ರಹಿತ ದಲಿತ, ಹಿಂದುಳಿದ ವರ್ಗದ ಬಡಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡದೆ ಹಾಲಿ ಗ್ರಾಮಪಂಚಾಯತಿ ಸದಸ್ಯರುಗಳ ಕುಟುಂಬದವರು ಹಾಗೂ ಹಣವಂತರು ಎಕರೆಗಟ್ಟಲೇ ಜಾಗವನ್ನು ಆಕ್ರಮಿಸಿಕೊಂಡಿದ್ದು, ಇದರ ಬಗ್ಗೆ ನಮ್ಮ ಸಂಘಟನೆವತಿಯಿಂದ ೩ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಹೋರಾಟದ ಫಲವಾಗಿ ದಿನಾಂಕ ೨೦-೦೮-೨೦೨೨ರಂದು ಜಿಲ್ಲಾಧಿಕಾರಿಯವರು ತಾಲೂಕು ಪಂಚಾಯಿತಿ ಅಧಿಕಾರಿಯವರಿಗೆ ಮಾಡಿದ ಆದೇಶದ ಅನ್ವಯ, ತಾಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಅಧಿಕಾರಿಗಳು ಭೂಮಾಪನ ಇಲಾಖೆವತಿಯಿಂದ ಸರ್ವೆ ಕಾರ್ಯ ನಡೆಸಿ, ಗಡಿ ಗುರುತಿಸಿಕೊಟ್ಟ ನಂತರ ಗ್ರಾಮಠಾಣಾ ತೆರುವು ಕಾರ್ಯಚರಣೆ ಮಾಡಲು ದಿನಾಂಕ ೨೬-೦೯-೨೦೨೨ರಂದು ಪೋಲಿಸ್ ಬಂದೋಬಸ್ತ್ ನೊಂದಿಗೆ ಮುಂದಾದ ಸಂದರ್ಭದಲ್ಲಿ ರಾಜಕೀಯ ಒತ್ತಡದಿಂದ ಅಧಿಕಾರಿಗಳು ನಡೆಯಬೇಕಿದ್ದ ತೆರುವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ, ಹೋರಾಟಗಾರರ ಮೇಲೆ ಉದ್ದೇಶ ಪೂರ್ವಕವಾಗಿ ಗ್ರಾಮಪಂಚಾಯತಿ ಪಿಡಿಓ ಹಾಗೂ ಸದಸ್ಯರುಗಳಿಂದ ಜಾತಿ ನಿಂದನೆ, ಮಹಿಳಾ ಸದಸ್ಯರ ಮೇಲೆ ದೌರ್ಜನ್ಯ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೇಪರ್ ಟೌನ್ ಪೋಲಿಸ್ ಠಾಣೆಯಲ್ಲಿ ದಿನಾಂಕ ೨೮-೦೯-೨೦೨೨ರಂದು ೨ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಹೋರಾಟಗಾರರ ಬಲವನ್ನು ಕುಗ್ಗಿಸುವ ವ್ಯರ್ಥ ಪ್ರಯತ್ನವನ್ನು ಮಾಡಿರುತ್ತಾರೆ. ಇದಕ್ಕೆ ನಮ್ಮ ಸಂಘಟನೆ ಯಾವ ಬೆದರಿಕೆಗಳಿಗೆ ಕುಗ್ಗದೆ ಕಾನೂನಿನ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ವರಪ್ಪ ಪಂಚಾಯಿತಿಯಲ್ಲಿ ನಡೆಸಿರುವ ಹಲವಾರು ಭ್ರಷ್ಟಾಚಾರದ ಬಗ್ಗೆ ಸಂಘಟನೆ ವತಿಯಿಂದ ದಾಖಲೆ ಸಮೇತ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದರೂ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಇದುವರೆವಿಗೂ ಯಾವುದೇ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳದೆ, ಅಮಾನತುಗೊಳಿಸದೇ ರಕ್ಷಿಸುತ್ತಿರುವುದರಿಂದ ಹಾಗೂ ಹಳೇ ಹಿರಿಯೂರು ಗ್ರಾಮಾಠಾಣಾ ಜಾಗವನ್ನು ತೆರುವು ಗೊಳಿಸದೇ ಒತ್ತುವರಿ ಮಾಡಿಕೊಂಡಿರುವವರನ್ನು ರಕ್ಷಿಸುತ್ತಿರುವ ಅಧಿಕಾರಿಗಳ ವಿರುದ್ಧ, ಗ್ರಾಮದ ನಿವೇಶನ ರಹಿತ ಬಡ ಕುಟುಂಬಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ನ್ಯಾಯ ಸಮ್ಮತ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸಲಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್, ಸತ್ಯನಾರಾಯಣ್ ರಾವ್, ರವಿ ಬಿ., ಕುಮಾರ್ ಹೆಚ್.ವೈ ಮತ್ತು ಕೆ.ಟಿ. ಪ್ರಸನ್ನ ಗ್ರಾಮದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು