ಮಂಗಳವಾರ, ಜೂನ್ 10, 2025

ಜೂ.೧೧ರಿಂದ ವಿದ್ಯುತ್ ವ್ಯತ್ಯಯ

    

ಭದ್ರಾವತಿ : ಮೆಸ್ಕಾಂ ಘಟಕ-೨ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಮಾಡುವ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಜೂ.೧೧ರ ಬುಧವಾರ, ೧೩ರ ಶುಕ್ರವಾರ ಮತ್ತು ೧೫ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಭೂತನಗುಡಿ, ಮಾಧವನಗರ, ಗಾಂಧಿನಗರ, ಎನ್‌ಎಂಸಿ ರೋಡ್, ಗಾಂಧಿ ವೃತ್ತ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ಜೂ.೧೨ರ ಗುರುವಾರ, ೧೪ರ ಶನಿವಾರ ಮತ್ತು ೧೬ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಸಾದತ್ ಕಾಲೋನಿ, ನೆಹರು ನಗರ, ಪಿಡಬ್ಲ್ಯೂಡಿ ಕಚೇರಿ ಮುಂಭಾಗ ಮತ್ತು ಎಂ.ಎಂ ಕಾಂಪೌಂಡ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ವಿಐಎಸ್‌ಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ : ಪೇಜಾವರ ಶ್ರೀ

ಶಿವಮೊಗ್ಗಕ್ಕೆ ಆಗಮಿಸಿದ್ದ ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಖಾನೆಯಲ್ಲಿನ ವಿದ್ಯಮಾನಗಳನ್ನು ವಿವರಿಸಿದರು.  
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆ ಮುಂಭಾಗ ಹೋರಾಟ ಬೆಂಬಲಿಸಿದ ಸಂದರ್ಭದಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಸಹ ಬಗೆಹರಿಯಲಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರು ಹೇಳಿದರು. 
    ಶ್ರೀಗಳು ಮಂಗಳವಾರ ಶಿವಮೊಗ್ಗದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳ ನಿಯೋಗಕ್ಕೆ ಆಶೀರ್ವದಿಸಿ, ಪ್ರಸ್ತುತ ಕಾರ್ಖಾನೆಯ ವಿದ್ಯಾಮಾನಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು. 
    ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದಿಂದ ಸ್ಥಾಪನೆಗೊಂಡ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರಸ್ತುತ ಆಶಾದಾಯಕ ಬೆಳವಣಿಗೆಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಎಲ್ಲಾ ಸಮಸ್ಯೆಗಳು ದೂರವಾಗಲಿದ್ದು, ಗುತ್ತಿಗೆ ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಉಕ್ಕು ಸಚಿವರು ಹಾಗು ಸಂಸದರೊಂದಿಗೆ ಚರ್ಚಿಸುವುದಾಗಿ ಶ್ರೀಗಳು ಭರವಸೆ ವ್ಯಕ್ತಪಡಿಸದರು.   
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಆನಂದ್, ನಿವೃತ್ತ ಕಾರ್ಮಿಕ ನರಸಿಂಹಾಚಾರ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು. 

ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಮನವಿ

ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ರಾಜ್ಯದಲ್ಲಿ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಕೈಗೊಳ್ಳುವಂತೆ ಭದ್ರಾವತಿ ಜನ್ನಾಪುರ, ಫಿಲ್ಟರ್ ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಗೃಹ ಸಚಿವರಿಗೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಭದ್ರಾವತಿ : ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ರಾಜ್ಯದಲ್ಲಿ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಗೃಹ ಸಚಿವರಿಗೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಕಂಪನಿಗಳಿಂದ ಸಾಲ ಪಡೆದ ಬಡ ಗ್ರಾಹಕರು ಸಂಪೂರ್ಣವಾಗಿ ಸಾಲ ಮರು ಪಾವತಿ ಮಾಡಿದರೂ ಸಹ ಗ್ರಾಹಕರ ಖಾತೆಗಳಿಂದ ಗೊತ್ತಿಲ್ಲದಂತೆ ಹಣ ಕಡಿತಗೊಳ್ಳುತ್ತಿದೆ. ಇದರಿಂದಾಗಿ ಬಡಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ. 
    ಈ ಹಿನ್ನಲೆಯಲ್ಲಿ ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ಸಾಲ ಪಡೆಯದಂತೆ ಜಾಗೃತಿ ಮೂಡಿಸಬೇಕೆಂದು ಶಶಿಕುಮಾರ್ ಗೌಡ ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್ ನಿಧನ

ನಿಟ್ಟೂರು ರಾಜಶೇಖರ್ 
    ಭದ್ರಾವತಿ : ನಗರದ ಲೋಯರ್ ಹುತ್ತಾ ನಿವಾಸಿ, ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್(೭೨) ಮಂಗಳವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಹಿರಿಯ ಪತ್ರಕರ್ತ ದಿವಂಗತ ನಿಟ್ಟೂರು ಶ್ರೀರಾಮ್‌ರವರ ಸಹೋದರರಾದ ರಾಜಶೇಖರ್‌ರವರು ಮಾಚೇನಹಳ್ಳಿ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ನಗರದ ಪೊಲೀಸ್ ಉಪಾಧೀಕ್ಷಕರ ಕಛೇರಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. 
    ರಾಜಶೇಖರ್ ಹಲವಾರು ವರ್ಷಗಳವರೆಗೆ ಪತ್ರಿಕಾ ವಿತರಕರಾಗಿ ಸಹ ಕಾರ್ಯ ನಿರ್ವಹಿಸಿದ್ದು,  ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.