ಭದ್ರಾವತಿ ತಾಲೂಕಿನ ಕುಮರಿನಾರಾಯಣಪುರದಲ್ಲಿ ಭಾನುವಾರ ಸಂಜೆ ಏಕಾಏಕಿ ನಾಪತ್ತೆಯಾಗಿದ್ದ ೫ ಮಕ್ಕಳು.
ಭದ್ರಾವತಿ : ತಾಲೂಕಿನ ಕುಮರಿನಾರಾಯಣಪುರದ ೫ ಮಕ್ಕಳು ಭಾನುವಾರ ಸಂಜೆ ಏಕಾಏಕಿ ಕಾಣೆಯಾಗಿದ್ದರು. ಇಡೀ ರಾತ್ರಿ ಪೊಲೀಸರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಈ ನಡುವೆ ಸೋಮವಾರ ಬೆಳಿಗ್ಗೆ ಸಮೀಪದ ತಳ್ಳಿಕಟ್ಟೆ ಗ್ರಾಮದ ಅಡಕೆ ತೋಟವೊಂದರಲ್ಲಿ ಕಾಣೆಯಾಗಿದ್ದ ಮಕ್ಕಳು ಪತ್ತೆಯಾಗಿದ್ದಾರೆ.
ಗ್ರಾಮದ ಧನಂಜಯ(೧೪), ಲೋಹಿತ್(೧೨), ಲಕ್ಷ್ಮೀಶ್(೧೦), ಚರಣ್‌ರಾಜ್(೯) ಮತ್ತು ಭುವನ್(೮) ಸಂಜೆ ಗ್ರಾಮದ ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಇದು ಗ್ರಾಮಸ್ಥರಿಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯಲ್ಲಿ ಬಯ್ಯುತ್ತಾರೆಂಬ ಹೆದರಿಕೆಯಿಂದ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಹಾಗು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.
ಮಕ್ಕಳು ನೀರಿನಲ್ಲಿ ಮುಳುಗಿರಬಹುದು ಅಥವಾ ಮಕ್ಕಳನ್ನು ಯಾರಾದರೂ ಅಪಹರಿಸಿರಬಹುದು ಎಂಬ ಭಯ ಕುಟುಂಬಸ್ಥರು ಹಾಗು ಗ್ರಾಮಸ್ಥರಲ್ಲಿ ಉಂಟು ಮಾಡಿತ್ತು. ಈ ನಡುವೆ ಪೊಲೀಸರ ನೆರವಿನೊಂದಿಗೆ ಗ್ರಾಮಸ್ಥರು ಇಡೀ ರೀತಿ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಕಂಡು ಬಂದಿರಲಿಲ್ಲ. ಮಧ್ಯರಾತ್ರಿ ೧.೩೦ರ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕುಮರಿನಾರಾಯಣಪುರದಿಂದ ಸ್ವಲ್ಪ ದೂರದಲ್ಲಿರುವ ತಳ್ಳಿಕಟ್ಟೆ ಗ್ರಾಮದ ದಿನೇಶ್ ಎಂಬುವರ ಅಡಕೆ ತೋಟದಲ್ಲಿ ಮಕ್ಕಳು ಕಂಡು ಬಂದಿದ್ದಾರೆ. ಬೆಳಿಗ್ಗೆ ನೀರು ಬಿಡಲು ತೋಟಕ್ಕೆ ಬಂದಾಗ ಮಕ್ಕಳು ತೋಟದಲ್ಲಿರುವುದು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ತಿಳಿದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.