Friday, December 24, 2021

೫೦ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ : ಡಿ.೨೫ರಂದು ಸಾಮೂಹಿಕ ಅನ್ನದಾನ

ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೦ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಧ್ವಜಾರೋಹಣ ನೆರವೇರಿಸಲಾಯಿತು.
    ಭದ್ರಾವತಿ, ಡಿ. ೨೪: ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೦ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
    ಗುರುವಾರ ಬೆಳಿಗ್ಗೆ ನಿರ್ಮಾಲ್ಯ ದರ್ಶನಂ, ಉಷೆ ಪೂಜಾ, ಸಾಮೂಹಿಕ ಅಷ್ಟದ್ರವ್ಯ ಗಣಪತಿ ಹೋಮ, ಪರಿಸಾರ ಶುದ್ಧಿ, ಬಿಂಬ ಶುದ್ಧಿ, ಧ್ವಜಾರೋಹಣ ಹಾಗು ಸಂಜೆ ಉತ್ಸವ ಮೂರ್ತಿ ಮೆರವಣಿಗೆ, ದೀಪಾರಾಧನೆ, ಅತ್ತಾಳ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
    ಶುಕ್ರವಾರ ಬೆಳಿಗ್ಗೆ ನಿರ್ಮಾಲ್ಯ ದರ್ಶನಂ, ಉಷೆ ಪೂಜಾ, ಸಾಮೂಹಿಕ ಅಷ್ಟದ್ರವ್ಯ ಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ಧ್ವಜಸ್ತಂಭ ಪೂಜೆ ಹಾಗು ಸಂಜೆ ಸಾಮೂಹಿಕ ಭಗವತಿ ಸೇವೆ, ಅತ್ತಾಳ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
    ಶನಿವಾರ ಬೆಳಿಗ್ಗೆ ನಿರ್ಮಾಲ್ಯ ದರ್ಶನಂ, ಸಾಮೂಹಿಕ ಅಷ್ಟದ್ರವ್ಯ ಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿಗೆ ಅಷ್ಟಾಭಿಷೇಕಂ, ಚಂಡೇವಾದ್ಯ, ಧ್ವಜಸ್ತಂಭ ಪೂಜೆ, ಸಾಮೂಹಿಕ ಸುದರ್ಶನಹೋಮ ನಂತರ ಸಾಮೂಹಿಕ ಅನ್ನದಾನ ಹಾಗು ಸಂಜೆ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸ್ವಾಮಿಯ ಆಗಮನ. ಅತ್ತಾಳ ಪೂಜೆ, ಧ್ವಜ ಇಳಿಸುವುದು ಹಾಗು ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾಧಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಎಂಪಿಎಂ ಸಹಕಾರ ಸಂಘದ ೭೦ನೇ ಸರ್ವ ಸದಸ್ಯರ ಸಭೆ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಸಹಕಾರ ಸಂಘದ ೭೦ನೇ ಸರ್ವ ಸದಸ್ಯರ ಸಭೆ ಕಾಗದನಗರದ ವನಿತಾ ಸಮಾಜದಲ್ಲಿ ಯಶಸ್ವಿಯಾಗಿ ನಡೆಯಿತು.
    ಭದ್ರಾವತಿ, ಡಿ. ೨೪: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಹಕಾರ ಸಂಘದ ೭೦ನೇ ಸರ್ವ ಸದಸ್ಯರ ಸಭೆ ಕಾಗದನಗರದ ವನಿತಾ ಸಮಾಜದಲ್ಲಿ ಯಶಸ್ವಿಯಾಗಿ ನಡೆಯಿತು.
    ಕಳೆದ ಸುಮಾರು ೬ ವರ್ಷಗಳಿಂದ ಕಾರ್ಖಾನೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಉಳಿದುಕೊಂಡಿರುವ ಅಲ್ಪ ಪ್ರಮಾಣದ ಕಾರ್ಮಿಕರು ಸಂಘವನ್ನು ಸಂಕಷ್ಟದಲ್ಲಿಯೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಸರ್ವಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಿನೇಶ್ ವಹಿಸಿದ್ದರು. ಕೃಷ್ಣಸ್ವಾಮಿ ಸಂಘದ ನಡಾವಳಿ ನಡೆಸಿಕೊಟ್ಟರು. ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಸುಗ್ರಾಮ ಅಧ್ಯಕ್ಷೆಯಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆ

ಭದ್ರಾವತಿ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಚುನಾವಣೆ ನಡೆದು ನೂತನ ಪದಾಧಿಕಾರಿಗಳು ಆಯ್ಕೆಯಾದರು.
    ಭದ್ರಾವತಿ, ಡಿ. ೨೪: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆಯಾಗಿದ್ದಾರೆ.
    ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೧೩ ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ ಗೌರಮ್ಮ-೫೬, ಪಲ್ಲವಿ-೪೬, ಗೀತಾ-೪೧, ಕವಿತಾ-೪೧, ಮಾಲತಿ-೩೯, ನಜೀಮಾ ಸುಲ್ತಾನ-೨೮ ಮತ್ತು ಶಾಂತಿಬಾಯಿ-೨೪ ಮತಗಳನ್ನು ಪಡೆದುಕೊಂಡು ಕ್ರಮವಾಗಿ ಅಧ್ಯಕ್ಷರಾಗಿ ಗೌರಮ್ಮ, ಉಪಾಧ್ಯಕ್ಷರಾಗಿ ಪಲ್ಲವಿ, ಕಾರ್ಯದರ್ಶಿಯಾಗಿ ಗೀತಾ, ಖಜಾಂಚಿಯಾಗಿ ಕವಿತಾ ಮತ್ತು ನಿರ್ದೇಶಕರಾಗಿ ಮಾಲತಿ, ನಜೀಮಾ ಸುಲ್ತಾನ ಮತ್ತು ಶಾಂತಿಬಾಯಿ ಆಯ್ಕೆಯಾಗಿದರು.
    ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕದ ಪದ್ಮಿನಿ ಅನಂತ್,  ಬೆಳಗಾವಿ      ಸ್ಪಂದನ ಸಂಸ್ಥೆಯ ಉಮಾ ಮತ್ತು ಶಂಕರ್ ವಿಕಸನ ಸಂಸ್ಥೆ ಯ ಶಾಲಿನಿ, ತರೀಕೆರೆ ವಿಕಸನ ಸಂಸ್ಥೆಯ ಶಬಾನ ಬೇಗಂ, ರೂಪ ಮತ್ತು ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಒಕ್ಕಲಿಗರ ಸಂಘದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್‌ಗೆ ಅಭಿನಂದನೆ

ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ


ಭದ್ರಾವತಿ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಅವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೨೪: ಒಕ್ಕಲಿಗ ಸಮುದಾಯದವರ ಏಳಿಗೆಗೆ ಬದ್ಧವಿದ್ದು, ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಹೇಳಿದರು.
    ಅವರು ಶುಕ್ರವಾರ ನಗರದ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿ ಒಕ್ಕಲಿಗ ಸಮುದಾಯದವರಿಗೆ ಹೆಚ್ಚಿನ ಗೌರವವಿದ್ದು, ಸಮುದಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಚುನಾವಣೆಯನ್ನು ಯಾರು ಸಹ ರಾಜಕೀಯವಾಗಿ ನೋಡಬಾರದು. ಸಮುದಾಯದ ಅಭಿವೃದ್ಧಿ ಮಾತ್ರ ಚುನಾವಣೆಯ ಹಿಂದಿನ ಉದ್ದೇಶ ಎಂಬುದನ್ನು ಅರಿತುಕೊಳ್ಳಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ತಾಲೂಕಿನ ಒಕ್ಕಲಿಗ ಸಮುದಾಯದವರ ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ಅವರ ಸಹಕಾರದೊಂದಿಗೆ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯದ ಪ್ರಮುಖರು ಮಾತನಾಡಿ, ಒಕ್ಕಲಿಗರ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಆಶಯದೊಂದಿಗೆ ಈ ಬಾರಿ ಧರ್ಮೇಶ್ ಅವರನ್ನು ಬೆಂಬಲಿಸಲಾಗಿದೆ. ಮುಂದಿನ ದಿನಗಳಲ್ಲಿ ಧರ್ಮೇಶ್ ಅವರು ಯಾವುದೇ ಸಂದರ್ಭದಲ್ಲೂ ಸಮುದಾಯದವರ ಪರವಾಗಿ ನಿಲ್ಲುವಂತಾಗಬೇಕು. ಚುನಾವಣೆ ಮುಗಿದ ನಂತರ ಸೋಲು-ಗೆಲುವು ಸಹಜ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ  ಮನೋಭಾವ ಬಹಳ ಮುಖ್ಯವಾಗಿದೆ. ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರ ಧ್ವನಿಯಾಗಬೇಕೆಂದರು.
    ವೇದಿಕೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಸಹಕಾರ ಧುರೀಣ ಗೊಂದಿ ಜಯರಾಮ್, ಲೋಹಿತಾ ನಂಜಪ್ಪ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ದೇವರಾಜ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮಾಜಿ ನಗರಸಭಾ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.