ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ
ಭದ್ರಾವತಿ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಅವರನ್ನು ಅಭಿನಂದಿಸಲಾಯಿತು.
ಭದ್ರಾವತಿ, ಡಿ. ೨೪: ಒಕ್ಕಲಿಗ ಸಮುದಾಯದವರ ಏಳಿಗೆಗೆ ಬದ್ಧವಿದ್ದು, ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಹೇಳಿದರು.
ಅವರು ಶುಕ್ರವಾರ ನಗರದ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಒಕ್ಕಲಿಗ ಸಮುದಾಯದವರಿಗೆ ಹೆಚ್ಚಿನ ಗೌರವವಿದ್ದು, ಸಮುದಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಚುನಾವಣೆಯನ್ನು ಯಾರು ಸಹ ರಾಜಕೀಯವಾಗಿ ನೋಡಬಾರದು. ಸಮುದಾಯದ ಅಭಿವೃದ್ಧಿ ಮಾತ್ರ ಚುನಾವಣೆಯ ಹಿಂದಿನ ಉದ್ದೇಶ ಎಂಬುದನ್ನು ಅರಿತುಕೊಳ್ಳಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ತಾಲೂಕಿನ ಒಕ್ಕಲಿಗ ಸಮುದಾಯದವರ ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ಅವರ ಸಹಕಾರದೊಂದಿಗೆ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯದ ಪ್ರಮುಖರು ಮಾತನಾಡಿ, ಒಕ್ಕಲಿಗರ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಆಶಯದೊಂದಿಗೆ ಈ ಬಾರಿ ಧರ್ಮೇಶ್ ಅವರನ್ನು ಬೆಂಬಲಿಸಲಾಗಿದೆ. ಮುಂದಿನ ದಿನಗಳಲ್ಲಿ ಧರ್ಮೇಶ್ ಅವರು ಯಾವುದೇ ಸಂದರ್ಭದಲ್ಲೂ ಸಮುದಾಯದವರ ಪರವಾಗಿ ನಿಲ್ಲುವಂತಾಗಬೇಕು. ಚುನಾವಣೆ ಮುಗಿದ ನಂತರ ಸೋಲು-ಗೆಲುವು ಸಹಜ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ಮನೋಭಾವ ಬಹಳ ಮುಖ್ಯವಾಗಿದೆ. ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರ ಧ್ವನಿಯಾಗಬೇಕೆಂದರು.
ವೇದಿಕೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಸಹಕಾರ ಧುರೀಣ ಗೊಂದಿ ಜಯರಾಮ್, ಲೋಹಿತಾ ನಂಜಪ್ಪ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ದೇವರಾಜ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಾಜಿ ನಗರಸಭಾ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment