Friday, September 9, 2022

ನಿವೃತ್ತ ಶಿಕ್ಷಕಿ ಎನ್. ಶ್ಯಾಮಲ ನಿಧನ

ಎನ್. ಶ್ಯಾಮಲ
    ಭದ್ರಾವತಿ, ಸೆ. ೯: ನಿವೃತ್ತ ಶಿಕ್ಷಕಿ ಎನ್. ಶ್ಯಾಮಲ(೭೯) ನಿಧನ ಹೊಂದಿದ್ದು, ಶುಕ್ರವಾರ ಸಂಜೆ ಇವರ ಅಂತ್ಯಕ್ರಿಯೆ ನಡೆಯಿತು.
    ಪತಿ ಹಾಗು ನಾಲ್ವರು ಪುತ್ರಿಯರನ್ನು ಹೊಂದಿದ್ದರು. ಶ್ಯಾಮಲ ಅವರು ತಾಲೂಕಿನ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಡಿ.ಎಸ್ ಸಂಜನಾ ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ

ನೀಟ್ ೪೩೧ನೇ ರ‍್ಯಾಂಕ್, ಕೆವಿಪಿವೈ ೨೨೮ನೇ ರ‍್ಯಾಂಕ್, ಸಿಇಟಿ ೧೬೩ನೇ ರ‍್ಯಾಂಕ್

ಡಿ.ಎಸ್ ಸಂಜನಾ

    ಭದ್ರಾವತಿ, ಸೆ. ೯: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್ ಮತ್ತು ಡಿ.ಎಸ್ ಅಶ್ವಿನಿ ದಂಪತಿಯ ಪುತ್ರಿ ಡಿ.ಎಸ್ ಸಂಜನಾ ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಡೆಸುವ ರಾಷ್ಟ್ರಮಟ್ಟದ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ೬೮೬ ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ೪೩೧ನೇ ರ‍್ಯಾಂಕ್ ಹಾಗು ಸಾಮಾನ್ಯ ವರ್ಗದಲ್ಲಿ ೨೯೭ನೇ ರ‍್ಯಾಂಕ್ ಪಡೆದುಕೊಂಡು ತಮ್ಮ ಮುಂದಿನ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದಿದ್ದಾರೆ.
    ಸಂಜನಾ ಅವರು ಮೇ ತಿಂಗಳಿನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ನಡೆದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆ(ಕೆವಿಪಿವೈ) ಪರೀಕ್ಷೆಯಲ್ಲಿ ೨೨೮ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಮುಖ್ಯ ಪ್ರವೇಶ ಪರೀಕ್ಷೆ (ಜೆಇಇ ಪರೀಕ್ಷೆ)ಯಲ್ಲಿ ಶೇ.೯೯.೨೦ ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ ರಾಜ್ಯಕ್ಕೆ ೧೬೩ನೇ ರ‍್ಯಾಂಕ್ ಪಡೆದುಕೊಂಡಿದ್ದು, ಪಶು ವೈದ್ಯಕೀಯದಲ್ಲಿ ೧೫ನೇ ರ‍್ಯಾಂಕ್, ಬಿಎಸ್‌ಸಿ ಕೃಷಿಯಲ್ಲಿ ೪೬ನೇ ರ‍್ಯಾಂಕ್ ಮತ್ತು ಬಿ.ಫಾರ್ಮ ೧೯ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
    ಸಂಜನಾ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಪೂರೈಸಿದ್ದು, ಪ್ರಸ್ತುತ ಮಂಗಳೂರಿನ ಬಿಜೈ ಕಾಪಿಕಾಡ್ ಸಮೀಪದ ಸಿಎಫ್‌ಎಎಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸಂಜನಾ ಅವರ ಸಾಧನೆಗೆ ನಗರದ ಅನೇಕ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ಸಾಧನೆಗೆ ಶುಭ ಹಾರೈಸಿದ್ದಾರೆ.

ಕಾಗದನಗರ ವ್ಯಾಪ್ತಿಯಲ್ಲಿ ಪೋಷಣ್ ಅಭಿಮಾನ್ ಮಾಸಾಚರಣೆ

ಭದ್ರಾವತಿ ಕಾಗದನಗರದ ೪ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ ಕಾರ್ಯಕ್ರಮ ಜರುಗಿತು.  
    ಭದ್ರಾವತಿ, ಸೆ. ೯: ಕಾಗದನಗರದ ೪ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ್ ಮಾಸಾಚರಣೆ ಕಾರ್ಯಕ್ರಮ ಜರುಗಿತು.
    ಕಾಗದನಗರ ವ್ಯಾಪ್ತಿಯ ೮ ಅಂಗನವಾಡಿ ಕೇಂದ್ರಗಳು ಒಟ್ಟಾಗಿ ಸೇರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ
    ನಗರಸಭಾ ಸದಸ್ಯೆ ಜಯಶೀಲ, ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪೂಜಾ, ಹಿರಿಯ ಆರೋಗ್ಯ ಸಹಾಯಕ ಮನೋಹರ್, ಕಿರಿಯ ಆರೋಗ್ಯ ಸಹಾಯಕಿ ಮಾರ್ಗರೇಟ್ ಹಾಗು ೮ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪೋಷಣ್ ಅಭಿಯಾನ್ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.