Friday, November 10, 2023

ದೀಪಾವಳಿ ಹಬ್ಬದ ಅಂಗವಾಗಿ ಜೆಟಿಎಸ್ ಶಾಲೆ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ

ಭದ್ರಾವತಿ ನ್ಯೂಟೌನ್ ಕಿರಿಯ ತಾಂತ್ರಿಕ ಶಾಲೆ(ಜೆಟಿಎಸ್ ಸ್ಕೂಲ್) ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ನಗರದ ನ್ಯೂಟೌನ್ ಕಿರಿಯ ತಾಂತ್ರಿಕ ಶಾಲೆ(ಜೆಟಿಎಸ್ ಸ್ಕೂಲ್) ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲರವರು ಮಾತನಾಡಿ, ವಿದ್ಯಾರ್ಥಿಗಳು ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಹೊಂದಬೇಕು. ಪೋಕ್ಸೋ ಮತ್ತು ಸೈಬರ್ ಅಪರಾಧಗಳ ಕುರಿತು ತಿಳಿದುಕೊಳ್ಳಬೇಕು. ಹಸಿರು ಪಟಾಕಿ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಿಸಬೇಕೆಂದು ಜಾಗೃತಿ ಮೂಡಿಸಿದರು.
    ಶಾಲೆಯ ಶಿಕ್ಷಕರು ಹಾಗು ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಕಳೆದ ಸುಮಾರು ೧ ವರ್ಷದಿಂದ ಶಾಲಾ ಮಕ್ಕಳಿಗೆ ಜಾಗೃತಿ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ನೀರಿನ ಸದ್ಬಳಕೆಗೆ ಹೆಚ್ಚಿನ ಗಮನ ನೀಡಿ, ಇತರರಿಗೂ ಜಾಗೃತಿ ಮೂಡಿಸಿ : ಶೃತಿ ಸಿ. ವಸಂತಕುಮಾರ್ ಕೆ.ಸಿ

ಭದ್ರಾವತಿ ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ : ಮಹಿಳೆಯರು ನೀರಿನ ಸದ್ಬಳಕೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ಇತರರಿಗೂ ಜಾಗೃತಿ ಮೂಡಿಸಬೇಕೆಂದು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಕರೆ ನೀಡಿದರು.
    ಅವರು ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕುಟುಂಬದಲ್ಲಿ ಪ್ರಮುಖ ಪಾತ್ರವಹಿಸುವ ಮಹಿಳೆಯರು ನೀರಿನ ಸದ್ಬಳಕೆ ಕುರಿತು ಅರಿವು ಹೊಂದಬೇಕು. ನೀರನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು. ಶುದ್ಧ ಮತ್ತು ಸುರಕ್ಷಿತವಾದ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅನುಸರಿಸುವ ಕ್ರಮ ಮತ್ತು ಶ್ರಮ ಹಾಗು ನೀರಿನ ಮಹತ್ವ ಅರಿತುಕೊಂಡಾಗ ನೀರಿನ ಮಿತವ್ಯಯ ಸಾಧ್ಯ ಎಂಬ ಆಲೋಚನೆಯೊಂದಿಗೆ ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ತಮ್ಮ ಸುತ್ತಮುತ್ತಲಿನವರಿಗೂ ಈ ಕುರಿತು ಮಾಹಿತಿ ನೀಡುವ ಮೂಲಕ ಜಾಗೃತಿಗೊಳಿಸಬೇಕೆಂದರು.
    ನಗರಸಭೆ ಸದಸ್ಯ ಚನ್ನಪ್ಪ ಮಾತನಾಡಿ, ನೀರು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಎಲ್ಲರಿಗೂ ನೀರು ಲಭಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಚಿಂತಿಸಬೇಕು. ವ್ಯರ್ಥಮಾಡುವ ಬದಲು ಉಳಿಸಿಕೊಂಡಲ್ಲಿ ಇತರರಿಗೂ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಮೊದಲು ಮಹಿಳೆಯರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದರು.
    ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ ಸುರೇಶ್ ಮತ್ತು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಲತಾ ಚಂದ್ರಶೇಖರ್, ಜಯಶೀಲ ಸುರೇಶ್, ಸವಿತಾ ಉಮೇಶ್, ನಾಗರತ್ನ ಅನಿಲ್‌ಕುಮಾರ್, ಅನಿತಾ ಮಲ್ಲೇಶ್, ಮಾಜಿ ಸದಸ್ಯೆ ಲಕ್ಷ್ಮೀದೇವಿ, ಜಿಲ್ಲಾ ಸಮನ್ವಯಾಧಿಕಾರಿ ಕಾಶಿ, ಇಂಜಿನಿಯರ್‌ಗಳಾದ ಎಸ್.ಆರ್ ಸತೀಶ್, ಸಂತೋಷ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭೆ ವ್ಯಾಪ್ತಿಯ ೩೦ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ ಹಾಗು ಮಾಲೀಕತ್ವದ ಭಾವನೆ ಕುರಿತು ಅರಿವು ಮೂಡಿಸಲಾಯಿತು.  ಮಹಮದ್ ಗೌಸ್ ಕಾರ್ಯಕ್ರಮ ನಿರೂಪಿಸಿದರು.

ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಿಸಿ : ಮನವಿ

ಭದ್ರಾವತಿ : ನಗರದ ಜನ್ನಾಪುರ ಬಂಟರ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ : ನಗರದ ಜನ್ನಾಪುರ ಬಂಟರ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
    ಚಿಕಿತ್ಸಾಲಯದ ಮುಂಭಾಗ ಮಣ್ಣಿನ ರಸ್ತೆ ಇದ್ದು, ಮಲಗಾಲದಲ್ಲಿ ಮಣ್ಣಿನ ರಸ್ತೆಯಿಂದಾಗಿ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಿಗೆ ಮತ್ತು ಕಾರ್ಮಿಕರಿಗೆ ಓಡಾಡಲು ಹಾಗು ವಾಹನಗಳನ್ನು ನಿಲುಗಡೆ ಮಾಡಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಕೋರಲಾಗಿದೆ.
    ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ನಗರಸಭೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಪೌರಾಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.
    ಚಿಕಿತ್ಸಾಯದ ವೈದ್ಯರಾದ ಡಾ. ದಿವ್ಯ, ಡಾ. ಈಶ್ವರಪ್ಪ, ಡಾ. ಸುಹಾಸ್, ಎಂ.ಎಚ್ ವಿಶಾಲ್, ಕೀರ್ಯಾ ನಾಯ್ಕ, ಜಿ.ಎನ್ ಲವ ಹಾಗು ಮಂಜುನಾಥ್ ಮತ್ತು ಸಿಬ್ಬಂದಿ ವರ್ಗದವರು ಪೌರಾಯುಕ್ತ ಎಚ್.ಎಂ ಮನುಕುಮಾರ್‌ರವರಿಗೆ ಮನವಿ ಸಲ್ಲಿಸಿದರು.

ಬಿಳಿಕಿ ಹಿರೇಮಠದಲ್ಲಿ ನ.೧೧ ಇಷ್ಟಲಿಂಗ ಮಹಾಪೂಜೆ, ಧರ್ಮ ಸಮಾರಂಭ

    ಭದ್ರಾವತಿ : ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ನ.೧೧ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಲಿಂಗೈಕ್ಯ ಶ್ರೀ ಗುರು ಸಿದ್ಧಶಿವಾಚಾರ್ಯ ಸ್ವಾಮಿಗಳ ಹಾಗು ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳ ೫೬ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗು ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೬ ಗಂಟೆಗೆ ಗಂಗೆ ಪೂಜೆಯೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ವೀರಭದ್ರಸ್ವಾಮಿಗೆ ಮತ್ತು ಶ್ರೀ ಶಕ್ತಿ ಮಾತೆ ಚೌಡೇಶ್ವರಿ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಅಷ್ಟೋತ್ತರ ಪೂಜೆ ನೆರವೇರಲಿದೆ. ೮ ಗಂಟೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ, ೧೧.೩೦ಕ್ಕೆ ಧರ್ಮ ಸಮಾರಂಭ ನಡೆಯಲಿದೆ.
    ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.
    ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.  ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ನೇತೃತ್ವ ವಹಿಸಲಿದ್ದಾರೆ.
    ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಶಾಸಕರಾದ ಬಿ.ವೈ ವಿಜಯೇಂದ್ರ, ಎಸ್.ಎನ್ ಚನ್ನಬಸಪ್ಪ, ಶಾರದ ಪೂರ್‍ಯಾನಾಯ್ಕ, ಎಸ್. ರುದ್ರೇಗೌಡ, ಡಿ.ಎಸ್ ಅರುಣ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.