Sunday, September 3, 2023

ಆದಿತ್ಯ-ಎಲ್1 ಉಪಗ್ರಹಕ್ಕೆ 10 ರು. ನೋಟು ಮೂಲಕ ಶುಭ ಹಾರೈಕೆ

ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಯಶಸ್ವಿಯಾಗಲೆಂದು ನೋಟು ಮೂಲಕ ಶುಭ ಹಾರೈಸಿದ್ದಾರೆ.
    ಭದ್ರಾವತಿ: ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಯಶಸ್ವಿಯಾಗಲೆಂದು ನೋಟು ಮೂಲಕ ಶುಭ ಹಾರೈಸಿದ್ದಾರೆ.
    ಆದಿತ್ಯ-ಎಲ್1 ಉಪಗ್ರಹದ ಮೂಲಕ ಮೊಟ್ಟಮೊದಲ ಬಾರಿಗೆ ಇಸ್ರೋ ಸೂರ್ಯನ ಕುರಿತು ಅಧ್ಯಾಯನ ನಡೆಸಲು ಮುಂದಾಗಿದ್ದು, ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಸೆ.2ರಂದು ಆದಿತ್ಯ-ಎಲ್1 ಭೂಮಿಯಿಂದ ಹೊರಡಿದ್ದು, ಇಸ್ರೋ ಕೈಗೊಂಡಿರುವ ಈ ಕಾರ್ಯ ಯಶಸ್ವಿಯಾಗಲೆಂದು ಗಣೇಶ್ ರವರು ಐತಿಹಾಸಿಕ ಸಾಧನೆಯ ದಿನಾಂಕ ಹೊಂದಿರುವ10 ರು. ಮುಖ ಬೆಲೆಯ ನೋಟು ಮೂಲಕ ಶುಭ ಹಾರೈಸಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.


ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌
    ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಯರ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಗುರು ಸಾರ್ವಭೌಮರ ರಥೋತ್ಸವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಮಠದವರೆಗೂ ನಡೆಯಿತು.
    ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ 3 ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಮಹೋತ್ಸವ ಮತ್ತು ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಭಕ್ತರ ಮನೆಗಳಲ್ಲಿ 2 ದಿನಗಳ ಕಾಲ ಹಾಗು ಕೊನೆಯ ದಿನ ಮಠದಲ್ಲಿ ಗುರು ಸಾರ್ವಭೌಮರ ಪಾದಪೂಜೆ ನೆರವೇರಿತು. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ಸುಪ್ರಭಾತ, ೭ಕ್ಕೆ ಪಂಚಾಮೃತ ಅಭಿಷೇಕ ಹಾಗು ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು.
    ಆರಾಧನಾ ಮಹೋತ್ಸವದ ಕೊನೆಯ ದಿನ ಶನಿವಾರ ಗುರು ಸಾರ್ವಭೌಮರ ರಥೋತ್ಸವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಮಠದವರೆಗೂ ನಡೆಯಿತು. ಗುರು ಸಾರ್ವಭೌಮರ ಬೃಂದಾವನಕ್ಕೆ ಫಲಪುಷ್ಪಗಳಿಂದ ವಿಶೇಷವಾಗಿ ಆಲಂಕಾರ ಕೈಗೊಳ್ಳಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.
    ಪ್ರಮುಖರಾದ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸ ಆಚಾರ್, ಮಾಧುರಾವ್, ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ಖಜಾಂಚಿ ನಿರಂಜನ ಆಚಾರ್, ಶುಭ ಗುರುರಾಜ್, ಸುಪ್ರಿತಾ ತಂತ್ರಿ, ವಂದನ ಲಕ್ಷ್ಮಿ, ರವೀಂದ್ರ, ಶ್ರೀನಿವಾಸ್, ಪ್ರಮೋದ್ ಕುಮಾರ್, ಪವನ್ ಕುಮಾರ್ ಉಡುಪ, ಜಯತೀರ್ಥ, ಸುಧೀಂದ್ರ, ಬಾಳೆ ಎಲೆ ಗೋಪಾಲಕೃಷ್ಣ ಹಾಗು ವಿವಿಧ ಭಜರ ಮಂಡಳಿಗಳ ಪ್ರಮುಖರು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ಗಾಣಿಗ ಸಮಾಜದ ಬೆಳವಣಿಗೆಗೆ ಸಂಘಟಿತರಾಗಿ : ಬಿ.ಕೆ.ಮೋಹನ್

ಭದ್ರಾವತಿಯಲ್ಲಿ ತಾಲೂಕು ಗಾಣಿಗರ ಸಂಘದ ವತಿಯಿಂದ ಹೊಸ ಬುಳ್ಳಾಪುರದಲ್ಲಿನ ಗಾಣಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಎಸ್. ಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಪೂಜೆಯ ವೇಳೆ ದೀಪ ಬೆಳಗುವಲ್ಲಿ ಗಾಣಿಗ ಸಮಾಜದ ಕೊಡುಗೆ ಅಪಾರವಾಗಿದ್ದು, ಈ ಸಮಾಜ ಎಲ್ಲಾ ರೀತಿಯಿಂದಲೂ ಶಕ್ತಿಯುತವಾಗಿ ಬೆಳೆಯಬೇಕಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಹೇಳಿದರು.
ತಾಲೂಕು ಗಾಣಿಗರ ಸಂಘದ ವತಿಯಿಂದ ಹೊಸ ಬುಳ್ಳಾಪುರದಲ್ಲಿನ ಗಾಣಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗಾಣಿಗ ಸಮಾಜದ ಕಸುಬು ಪವಿತ್ರವಾದದ್ದು. ಈ ಸಮಾಜದಲ್ಲಿ ಶ್ರೀಮಂತರಿಲ್ಲದಿದ್ದರೂ, ಜನರ ನಡುವೆ ಪ್ರೀತಿ-ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿಯೂ ಈ ಸಮಾಜ ಶಕ್ತಿಯುತವಾಗಬೇಕಿದೆ ಎಂದರು.
    ರಾಜಕೀಯ ಬೇರೆ, ಸಮಾಜದ ಕಾರ್ಯಕ್ರಮ ಬೇರೆ. ಸಮಾಜ ಬಾಂಧವರು ಸಮಾಜದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜವನ್ನು ಬಲಪಡಿಸಬೇಕೆಂದರು.
    ಶ್ರೀ ಅನಂತಾನಂದ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗಾಣಿಗ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನಯ್ ಕುಮಾರ್, ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ವರದರಾಜ್, ಉಪಾಧ್ಯಕ್ಷರಾದ ರಾಮಶೆಟ್ಟರು, ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್, ಸಹ ಕಾರ್ಯದರ್ಶಿ ಕೆ. ಶಾಂತಕುಮಾರ್, ಖಜಾಂಚಿ ಚಂದ್ರು, ತ್ಯಾಗರಾಜ್, ಕಾರ್ಯಾಧ್ಯಕ್ಷರಾದ ಆರ್. ಬಸವರಾಜ್, ಶಿವಕುಮಾರ್, ಮೋಹನ್ ಕುಮಾರ್, ರಾಜು, ಕಂಚಯ್ಯ, ಸಂಘಟನಾ ಕಾರ್ಯದರ್ಶಿ ವರದರಾಜು, ಯೋಗೇಶ್ ಕೆಂಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ದ್ವಿಚಕ್ರ ವಾಹನ ಕಳುವು : ದೂರು ದಾಖಲು

    ಭದ್ರಾವತಿ: ನಗರದ ಬಿ.ಎಎಚ್ ರಸ್ತೆ ಮೀನುಗಾರರ ಬೀದಿ ಬಳಿ ಅಂಗಡಿಯೊಂದರ ಸಮೀಪ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳುವಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ದೂರು ದಾಖಲಾಗಿದೆ.
    ಬಸವರಾಜ್‌ ಎಂಬುವರು ಆ.15ರಂದು ಮೀನುಗಾರರ ಬೀದಿ ಬಳಿ ಇರುವ ಮೆಡ್ ಪ್ಲಸ್ ಅಂಗಡಿ ಹತ್ತಿರ ಸಂಜೆ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಹೊಗಿದ್ದು, ಪುನಃ ಹಿಂದಿರುಗಿ ಬಂದು ನೋಡಿದಾಗ ವಾಹನ ಕಳುವಾಗಿರುವುದು ಕಂಡು ಬಂದಿದೆ.
    ಈ ಸಂಬಂಧ ಸೆ.1ರಂದು ತಡವಾಗಿ ನ್ಯೂಟೌನ್ ಪೊಲೀಸ್ ಠಾಣೆಗೆ ಬಸವರಾಜ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.