Wednesday, December 15, 2021

ಸಿ.ಎಂ ಇಬ್ರಾಹಿಂ ಸಹೋದರ ಖಾದರ್ ವಿರುದ್ಧ ಪ್ರಕರಣ ದಾಖಲು


ಸಿ.ಎಂ ಖಾದರ್
    ಭದ್ರಾವತಿ, ಡಿ. ೧೫: ನಗರದ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿರುವ ಅಹಿತಕರ ಬೆಳವಣಿಗೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಸಂಸ್ಥೆಯ ಅಧಿಕೃತ ಅಧ್ಯಕ್ಷರು ಯಾರು ಎಂಬ ಗೊಂದಲಗಳ ನಡುವೆ ಇದೀಗ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಮುಖಂಡ ಸಿ.ಎಂ ಖಾದರ್ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಈಗಲೂ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆ ಅಧಿಕೃತ ಅಧ್ಯಕ್ಷನಾಗಿದ್ದು, ಕಾನೂನು ಬದ್ಧವಾಗಿ ಮಾನ್ಯತೆ ಹೊಂದಿದ್ದೇನೆ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಿ.ಎಂ ಖಾದರ್ ತಿಳಿಸಿದ್ದರು. ಮತ್ತೊಂದೆಡೆ ಸಂಸ್ಥೆಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಪದಾಧಿಕಾರಿಗಳು ಸಹ ಸುದ್ದಿಗೋಷ್ಠಿಯಲ್ಲಿ ಮುಶಿರಾನ ಕಮಿಟಿ ಸದಸ್ಯರ ನೇತೃತ್ವದಲ್ಲಿ ಚುನಾವಣೆ ನಡೆಸಲಾಗಿದ್ದು, ನಾವು ಅಧಿಕೃತ ಎಂದು ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು.
    ಈ ನಡುವೆ ಸಿ.ಎಂ ಖಾದರ್‌ರವರು ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುವ ಜೊತೆಗೆ ಧ್ವನಿ ಸುರಳಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುವಂತೆ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ನೂತನ ಕಾರ್ಯಾಧ್ಯಕ್ಷ ಅಮೀರ್‌ಜಾನ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನಲೆ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಸಿ.ಎಂ ಖಾದರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಎಪಿಎಂಸಿ ಪ್ರಭಾರ ಅಧ್ಯಕ್ಷರಾಗಿ ರಾಜನಾಯ್ಕ ಅಧಿಕಾರ ಸ್ವೀಕಾರ : ಶಾಸಕರಿಂದ ಅಭಿನಂದನೆ

ಭದ್ರಾವತಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಭಾರ ಅಧ್ಯಕ್ಷರಾಗಿ ರಾಜನಾಯ್ಕ ಬುಧವಾರ ಅಧಿಕಾರ ವಹಿಸಿಕೊಂಡಿದ್ದು,   ಶಾಸಕ ಬಿ.ಕೆ ಸಂಗಮೇಶ್ವರ್ ರಾಜನಾಯ್ಕರನ್ನು ಅಭಿನಂದಿಸಿದರು.
    ಭದ್ರಾವತಿ, ಡಿ. ೧೫: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಭಾರ ಅಧ್ಯಕ್ಷರಾಗಿ ರಾಜನಾಯ್ಕ ಬುಧವಾರ ಅಧಿಕಾರ ವಹಿಸಿಕೊಂಡರು.
    ಜೆಡಿಎಸ್ ಮತ್ತು ಬಿಜೆಪಿ ಪ್ರಾಬಲ್ಯ ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಪ್ಪಂದದ ಪ್ರಕಾರ ಲವೇಶ್‌ಗೌಡ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕಳೆದ ೧೫ ದಿನಗಳ ಹಿಂದೆ ರಾಜೀನಾಮೆ ಸಲ್ಲಿಸಿದ್ದರು. ಮಂಗಳವಾರ ರಾಜೀನಾಮೆ ಪತ್ರ ಅಂಗೀಕಾರಗೊಂಡಿದ್ದು, ಈ ಹಿನ್ನಲೆಯಲ್ಲಿ ಉಪಾಧ್ಯಕ್ಷರಾದ ರಾಜನಾಯ್ಕ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
    ಅಧ್ಯಕ್ಷರ ಚುನಾವಣೆ ದಿನಾಂಕ ನಿಗದಿಯಾಗುವವರೆಗೂ ಪ್ರಭಾರ ಅಧ್ಯಕ್ಷರಾಗಿ ರಾಜನಾಯ್ಕ ಮುಂದುವರೆಯಲಿದ್ದು,  ಶಾಸಕ ಬಿ.ಕೆ ಸಂಗಮೇಶ್ವರ್ ರಾಜನಾಯ್ಕರನ್ನು ಅಭಿನಂದಿಸಿದರು.

ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ವಿಧಿಸಿ

ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

ಬಂಜಾರ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೫: ಬಂಜಾರ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲೂಕಿನ ಹುಲ್ಲೂರ ತಾಂಡದ ಬಂಜಾರ ಸಮುದಾಯದ ಅಪ್ರಾಪ್ತ ಬಾಲಕಿ ರಂಜಿತಾ ರಾಥೋಡ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಮಾತನಾಡಿದ ಪ್ರಮುಖರು, ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಬಂಜಾರ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿಗಳಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸಬೇಕು. ಆ ಮೂಲಕ ಸಮಾಜದಲ್ಲಿ ಎಚ್ಚರಿಕೆ ಮೂಡಿಸುವಂತಾಗಬೇಕು. ರಂಜಿತಾ ರಾಥೋಡ್ ಮೇಲಿನ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವವರನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
    ಸರ್ಕಾರ ರಂಜಿತಾ ರಾಥೋಡ್ ಬಾಲಕಿಯ ಕುಟುಂಬಕ್ಕೆ ತಕ್ಷಣ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪ್ರಕರಣದ ತಪ್ಪಿತಸ್ಥರಿಗೆ ೨೦ ಲಕ್ಷ ರು. ದಂಡ ವಿಧಿಸಿ ಕುಟುಂಬಕ್ಕೆ ಸಂಪೂರ್ಣ ಆಶ್ರಯ ನೀಡುವ ಮೂಲಕ ಕಾನೂನಿನ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
    ಬಂಜಾರ ಸಮುದಾಯದ ಮಂಜು ಮಹಾರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಾನಾಯ್ಕ, ಪ್ರಮುಖರಾದ ಗಿರೀಶ್, ಚಂದ್ರನಾಯ್ಕ, ಸಂತೋಷ್, ಪ್ರವೀಣ್‌ಕುಮಾರ್, ಭೋಜ್ಯನಾಯ್ಕ, ವೇವೇಶ, ನಾಗನಾಯ್ಕ, ಮಂಜನಾಯ್ಕ, ರಮೇಶ್, ಕಾಂತ ದಿನೇಶ್, ಮಂಜುಳ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಒಕ್ಕಲಿಗರ ಸಂಘದಲ್ಲಿ ಹಿಡಿತ ಸಾಧಿಸಲು ಮುಂದಾದ ಎಸ್. ಕುಮಾರ್‌ಗೆ ಹಿನ್ನಡೆ

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸೋಲು

ಎಸ್. ಕುಮಾರ್
    ಭದ್ರಾವತಿ, ಡಿ. ೧೫: ತಾಲೂಕು ಒಕ್ಕಲಿಗರ ಸಂಘದಲ್ಲಿ ಹಿಡಿತ ಸಾಧಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ಗೆ ಹಿನ್ನಡೆ ಎದುರಾಗಿದೆ. ಡಿ.೧೨ರಂದು ನಡೆದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಎಸ್. ಕುಮಾರ್ ಸೋಲುಂಡಿದ್ದಾರೆ.
    ಈ ಬಾರಿ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನ ತಮ್ಮದಾಗಿಸಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ತಾಲೂಕು ಒಕ್ಕಲಿಗರ ಸಂಘ ತೀವ್ರ ಪೈಪೋಟಿಗೆ ಮುಂದಾಗಿತ್ತು. ಈ ನಡುವೆ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖರು ಸ್ಪರ್ಧೆಗೆ ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಎಸ್. ಕುಮಾರ್ ಅವರನ್ನು ಕಣಕ್ಕಿಳಿಸಲು ಸಂಘ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಆರಂಭದಲ್ಲಿಯೇ ಕೆಲವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಆದರೂ ಸಹ ಈ ನಡುವೆ ಎಸ್. ಕುಮಾರ್ ಯಾವುದನ್ನು ಸಹ ಗಂಭೀರವಾಗಿ ಪರಿಗಣಿಸದೆ ಚುನಾವಣೆಗೆ ಸ್ಪರ್ಧಿಸಿ ತೀವ್ರ ಪೈಪೋಟಿ ನಡೆಸಿದ್ದರು.
    ಅಸಮಧಾನಗೊಂಡಿದ್ದ ಸಮುದಾಯದ ಕೆಲವರು ಇಲ್ಲಿಯೇ ಸಭೆ ನಡೆಸಿ ತೀರ್ಥಹಳ್ಳಿ ತಾಲೂಕಿನ ಧರ್ಮೇಶ್ ಸಿರಿಬೈಲು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು. ತಾಲೂಕಿನಲ್ಲಿ ಒಟ್ಟು ೪೦೫೪ ಮತದಾರರಿದ್ದು, ಈ ಪೈಕಿ ಬಹುತೇಕ ಮಂದಿ ಚಲಾಯಿಸಿದ್ದರು. ಚಲಾವಣೆಗೊಂಡ ಮತಗಳಲ್ಲಿ ಎಸ್. ಕುಮಾರ್ ೨೧೮೪ ಮತಗಳನ್ನು ಪಡೆದುಕೊಂಡಿದ್ದು,  ಧರ್ಮೇಶ್ ಸಿರಿಬೈಲು ೧೦೧೬ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರ್ ಹಿನ್ನಡೆ ಅನುಭವಿಸುವಂತಾಯಿತು. ಒಟ್ಟಾರೆ ಎಸ್. ಕುಮಾರ್ ೩೪೮೬ ಮತ್ತು ಧರ್ಮೇಶ್ ಸಿರಿಬೈಲ್‌ರವರು ೫೮೦೮ ಮತಗಳನ್ನು ಪಡೆದುಕೊಂಡಿದ್ದು, ೨೩೨೨ ಮತಗಳ ಅಂತರದಿಂದ ಧರ್ಮೇಶ್ ಸಿರಿಬೈಲು ಗೆಲುವು ಸಾಧಿಸಿದ್ದಾರೆ.