ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸೋಲು
ಎಸ್. ಕುಮಾರ್
ಭದ್ರಾವತಿ, ಡಿ. ೧೫: ತಾಲೂಕು ಒಕ್ಕಲಿಗರ ಸಂಘದಲ್ಲಿ ಹಿಡಿತ ಸಾಧಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ಗೆ ಹಿನ್ನಡೆ ಎದುರಾಗಿದೆ. ಡಿ.೧೨ರಂದು ನಡೆದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಎಸ್. ಕುಮಾರ್ ಸೋಲುಂಡಿದ್ದಾರೆ.
ಈ ಬಾರಿ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನ ತಮ್ಮದಾಗಿಸಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ತಾಲೂಕು ಒಕ್ಕಲಿಗರ ಸಂಘ ತೀವ್ರ ಪೈಪೋಟಿಗೆ ಮುಂದಾಗಿತ್ತು. ಈ ನಡುವೆ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖರು ಸ್ಪರ್ಧೆಗೆ ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಎಸ್. ಕುಮಾರ್ ಅವರನ್ನು ಕಣಕ್ಕಿಳಿಸಲು ಸಂಘ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಆರಂಭದಲ್ಲಿಯೇ ಕೆಲವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಆದರೂ ಸಹ ಈ ನಡುವೆ ಎಸ್. ಕುಮಾರ್ ಯಾವುದನ್ನು ಸಹ ಗಂಭೀರವಾಗಿ ಪರಿಗಣಿಸದೆ ಚುನಾವಣೆಗೆ ಸ್ಪರ್ಧಿಸಿ ತೀವ್ರ ಪೈಪೋಟಿ ನಡೆಸಿದ್ದರು.
ಅಸಮಧಾನಗೊಂಡಿದ್ದ ಸಮುದಾಯದ ಕೆಲವರು ಇಲ್ಲಿಯೇ ಸಭೆ ನಡೆಸಿ ತೀರ್ಥಹಳ್ಳಿ ತಾಲೂಕಿನ ಧರ್ಮೇಶ್ ಸಿರಿಬೈಲು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು. ತಾಲೂಕಿನಲ್ಲಿ ಒಟ್ಟು ೪೦೫೪ ಮತದಾರರಿದ್ದು, ಈ ಪೈಕಿ ಬಹುತೇಕ ಮಂದಿ ಚಲಾಯಿಸಿದ್ದರು. ಚಲಾವಣೆಗೊಂಡ ಮತಗಳಲ್ಲಿ ಎಸ್. ಕುಮಾರ್ ೨೧೮೪ ಮತಗಳನ್ನು ಪಡೆದುಕೊಂಡಿದ್ದು, ಧರ್ಮೇಶ್ ಸಿರಿಬೈಲು ೧೦೧೬ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರ್ ಹಿನ್ನಡೆ ಅನುಭವಿಸುವಂತಾಯಿತು. ಒಟ್ಟಾರೆ ಎಸ್. ಕುಮಾರ್ ೩೪೮೬ ಮತ್ತು ಧರ್ಮೇಶ್ ಸಿರಿಬೈಲ್‌ರವರು ೫೮೦೮ ಮತಗಳನ್ನು ಪಡೆದುಕೊಂಡಿದ್ದು, ೨೩೨೨ ಮತಗಳ ಅಂತರದಿಂದ ಧರ್ಮೇಶ್ ಸಿರಿಬೈಲು ಗೆಲುವು ಸಾಧಿಸಿದ್ದಾರೆ.
No comments:
Post a Comment