ಸಿ.ಎಂ ಖಾದರ್
ಭದ್ರಾವತಿ, ಡಿ. ೧೫: ನಗರದ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿರುವ ಅಹಿತಕರ ಬೆಳವಣಿಗೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಸಂಸ್ಥೆಯ ಅಧಿಕೃತ ಅಧ್ಯಕ್ಷರು ಯಾರು ಎಂಬ ಗೊಂದಲಗಳ ನಡುವೆ ಇದೀಗ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಮುಖಂಡ ಸಿ.ಎಂ ಖಾದರ್ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗಲೂ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆ ಅಧಿಕೃತ ಅಧ್ಯಕ್ಷನಾಗಿದ್ದು, ಕಾನೂನು ಬದ್ಧವಾಗಿ ಮಾನ್ಯತೆ ಹೊಂದಿದ್ದೇನೆ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಿ.ಎಂ ಖಾದರ್ ತಿಳಿಸಿದ್ದರು. ಮತ್ತೊಂದೆಡೆ ಸಂಸ್ಥೆಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಪದಾಧಿಕಾರಿಗಳು ಸಹ ಸುದ್ದಿಗೋಷ್ಠಿಯಲ್ಲಿ ಮುಶಿರಾನ ಕಮಿಟಿ ಸದಸ್ಯರ ನೇತೃತ್ವದಲ್ಲಿ ಚುನಾವಣೆ ನಡೆಸಲಾಗಿದ್ದು, ನಾವು ಅಧಿಕೃತ ಎಂದು ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು.
ಈ ನಡುವೆ ಸಿ.ಎಂ ಖಾದರ್‌ರವರು ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುವ ಜೊತೆಗೆ ಧ್ವನಿ ಸುರಳಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುವಂತೆ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ನೂತನ ಕಾರ್ಯಾಧ್ಯಕ್ಷ ಅಮೀರ್‌ಜಾನ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನಲೆ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಸಿ.ಎಂ ಖಾದರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
No comments:
Post a Comment