ಪೊಲೀಸರೊಂದಿಗೆ ನಗರಸಭೆ ಅಧಿಕಾರಿಗಳಿಂದ ಅಂಗಡಿ, ಮುಂಗಟ್ಟುಗಳ ತೆರವು
ಭದ್ರಾವತಿ ನಗರಸಭೆ ಮುಂಭಾಗದಲ್ಲಿ ವಾಹನಗಳ ನಿಲುಗಡೆ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ ಅಧಿಕಾರಿಗಳು.
ಭದ್ರಾವತಿ : ನಗರಸಭೆ ವ್ಯಾಪ್ತಿಯ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಿರುವ ನಗರಸಭೆ ಆಡಳಿತ ಸಂಚಾರಿ ಪೊಲೀಸರೊಂದಿಗೆ ಕಾರ್ಯಾಚರಣೆ ಕೈಗೊಂಡು ಆರಂಭಿಕ ಹಂತದಲ್ಲಿ ಪಾದಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡಿರುವ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸುತ್ತಿದೆ.
ಶನಿವಾರ ನಗರಸಭೆ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡದಂತೆ ನಗರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ನಂತರ ನಗರಸಭೆ ಕಚೇರಿ ಅಕ್ಕಪಕ್ಕದಲ್ಲಿ ಅಂಗಡಿ ಮುಂಗಟ್ಟುಗಳು ಪಾದಚಾರಿ ರಸ್ತೆ ಅಕ್ರಮಿಸಿಕೊಂಡಿರುವುದ್ದನ್ನು ತೆರವುಗೊಳಿಸಿದರು.
ಈ ಕುರಿತು ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾಹಿತಿ ನೀಡಿ, ಕಳೆದ ತಿಂಗಳು ಜೂ. ೨೦ರಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟು ಅವ್ಯವಸ್ಥೆಯಿಂದ ಕೂಡಿರುವ ಸಂಬಂಧ ಸಾಕಷ್ಟು ಚರ್ಚೆಗಳು ನಡೆದವು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ನಗರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರಂಭಿಕ ಹಂತದಲ್ಲಿ ಪಾದಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡಿರುವ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಜು. ೭ ರಂದು ಬೆಳಗ್ಗೆ ೮ ಗಂಟೆಗೆ ಡಾ. ರಾಜಕುಮಾರ್ ರಸ್ತೆ (ಸಿ.ಎನ್ ರಸ್ತೆ), ೮ ರಂದು ಬೆಳಗ್ಗೆ ೮ ಗಂಟೆಗೆ ತಾಲೂಕು ಕಚೇರಿ ರಸ್ತೆ, ೯ ರಂದು ಬೆಳಗ್ಗೆ ೮ ಗಂಟೆಗೆ ಡಾ. ರಾಜಕುಮಾರ್ ರಸ್ತೆ (ಬಿ.ಎಚ್.ರಸ್ತೆ), ಜು. ೧೧ ರಂದು ಬೆಳಗ್ಗೆ ೮ ಗಂಟೆಗೆ ಹೊಸಸೇತುವೆ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದರು.
ಕಾರ್ಯಾಚರಣೆಯಲ್ಲಿ ನಗರಸಭೆ ಅಧಿಕಾರಿಗಳಾದ ಶಿವಪ್ರಸಾದ್, ಪ್ರಭಾಕರ್, ಪ್ರಸಾದ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment