ಕೋಟ್ಯಾಂತರ ರು. ಸಾಲದ ಬಾಕಿ : ಹೊಸ ಸಾಲ ಎದುರು ನೋಡುತ್ತಿರುವ ರೈತರು
ಪಿಎಲ್‌ಡಿ ಬ್ಯಾಂಕ್
* ಅನಂತಕುಮಾರ್
ಭದ್ರಾವತಿ : ಮುಂಗಾರು ಆರಂಭಗೊಂಡು ಸುಮಾರು ಒಂದು ತಿಂಗಳು ಕಳೆದಿದ್ದು, ಈ ನಡುವೆ ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಕೈಚೆಲ್ಲಿ ಕುಳಿತ್ತಿದೆ.
ಒಂದು ಕಾಲದಲ್ಲಿ ರೈತರ ಜೀವನಾಡಿಯಾಗಿದ್ದ ಪಿಎಲ್‌ಡಿ ಬ್ಯಾಂಕ್ ಪ್ರಸ್ತುತ ಸಾಲದ ಸುಳಿಯಲ್ಲಿದ್ದು, ರೈತರು ಈ ಬ್ಯಾಂಕ್ ನಂಬಿ ಯಾವುದೇ ಚಟುವಟಿಕೆಗಳನ್ನು ಆರಂಭಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿರುವ ಬಹುತೇಕ ಬ್ಯಾಂಕ್‌ಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ಇಲ್ಲಿನ ಬ್ಯಾಂಕ್ ಮಾತ್ರ ಹಲವಾರು ವರ್ಷಗಳಿಂದ ಸಾಲದಲ್ಲಿ ಮುನ್ನಡೆಯುತ್ತಿದ್ದು, ಬ್ಯಾಂಕ್ ಮೂಲಕ ದೀರ್ಘಾವಧಿ ಸಾಲ ಪಡೆದಿರುವವರು ಸುಮಾರು ೧೫-೨೦ ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಹೊಸದಾಗಿ ಸಾಲ ಪಡೆಯಲು ತೊಡಕಾಗಿದೆ.
ನಗರದ ಚನ್ನಗಿರಿ ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಖಾತೆದಾರರಿದ್ದು, ಬ್ಯಾಂಕ್ ಆಡಳಿತ ಮಂಡಳಿಗೆ ತಾಲೂಕಿನ ರೈತರ ವಿವಿಧ ಕ್ಷೇತ್ರಗಳಿಂದ ೧೩ ನಿರ್ದೇಶಕರು ಚುನಾಯಿತರಾಗುತ್ತಿದ್ದಾರೆ. ಓರ್ವ ನಾಮನಿರ್ದೇಶಿತ ಸೇರಿದಂತೆ ಒಟ್ಟು ೧೪ ನಿರ್ದೇಶಕರು ಬ್ಯಾಂಕ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾಂಕ್‌ನಲ್ಲಿ ಯಾವುದೇ ಉಳಿತಾಯ ಖಾತೆ ಹೊಂದಿರುವವರು ಅಥವಾ ಠೇವಣಿ ಖಾತೆ ಹೊಂದಿರುವವರು ಇಲ್ಲ. ಈ ಹಿನ್ನಲೆಯಲ್ಲಿ ಬ್ಯಾಂಕ್ ಸ್ವಂತ ಆದಾಯ ನಿರೀಕ್ಷಿಸುವಂತಿಲ್ಲ. ನಬಾರ್ಡ್ ಮೂಲಕ ನೀಡುವ ಸಾಲ ನಂಬಿ ಮುನ್ನಡೆಯಬೇಕಾಗಿದೆ. ಕೃಷಿ ಧೀರ್ಘಾವಧಿ ಸಾಲ ಶೇ.೮.೫ ರಿಂದ ಶೇ.೯ರ ಬಡ್ಡಿ ನೀಡಲಾಗುತ್ತಿದೆ. ಉಳಿದಂತೆ ಗೃಹ ಸಾಲ ಶೇ.೧೧ ರಿಂದ ಶೇ.೧೨ರ ಬಡ್ಡಿ ದರಲ್ಲಿ ನೀಡಲಾಗುತ್ತಿದೆ. ಆದರೆ ಬ್ಯಾಂಕ್‌ನಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡುತ್ತಿಲ್ಲ.
೨೦೨೨-೨೪ರ ಅವಧಿಯಲ್ಲಿ ಬ್ಯಾಂಕ್ ಸುಮಾರು ೧೩.೫ ಕೋ.ರು. ಸಾಲ ಹೊಂದಿದ್ದು, ಈ ಅವಧಿಯಲ್ಲಿ ಸರ್ಕಾರ ರೈತರ ಸಾಲಕ್ಕೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಿದ ಹಿನ್ನಲೆಯಲ್ಲಿ ಬಹುತೇಕ ರೈತರು ಸಾಲ ಮರುಪಾವತಿ ಮಾಡಿದ್ದು, ಆದರೂ ಪ್ರಸ್ತುತ ಸುಮಾರು ೩.೫ ಕೋ. ರು. ಸಾಲ ಬಾಕಿ ಉಳಿದುಕೊಂಡಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಸಾಲ ಪಡೆಯಲು ಕಸಕತ್ತು ನಡೆಸಬೇಕಾಗಿದೆ.
ಸಾಲ ವಸೂಲಾತಿಗೆ ಇದೀಗ ಕಠಿಣ ಕ್ರಮ ಅನುಸರಿಸುವುದು ಅನಿವಾರ್ಯವಾಗಿದ್ದು, ಧೀರ್ಘಾವಧಿ ಸಾಲ ಪಡೆದುಕೊಂಡು ಸುಮಾರು ೧೫-೨೦ ವರ್ಷಗಳಿಂದ ಬಾಕಿ ಉಳಿಸಿಕೊಂಡ ಹಾಗು ಗೃಹ ಸಾಲ ಬಾಕಿ ಉಳಿಸಿಕೊಂಡ ಒಟ್ಟು ೮೯ ಜನರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಸೂಲಾತಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಇದು ಯಶಸ್ವಿಯಾದಲ್ಲಿ ಸಾಲ ಮರುಪಾವತಿಯಾಗಲಿದೆ. ನಂತರ ಹೊಸದಾಗಿ ಸಾಲ ಮಂಜೂರಾತಿಯಾಗಲಿದೆ.
ಪ್ರಸ್ತುತ ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಹೊಸದಾಗಿ ಸಾಲ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್ ಬ್ಯಾಂಕ್ ಅಧ್ಯಕ್ಷರಾಗಿ ಹಾಗು ಮೀರಾಬಾಯಿ ಉಪಾಧ್ಯಕ್ಷರಾಗಿ ಸುಮಾರು ೬ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದು, ರೈತರಿಗೆ ಹೊಸದಾಗಿ ಸಾಲ ನೀಡುವುದು ಸವಾಲಾಗಿ ಪರಿಣಮಿಸಿದೆ.
ಕಾನೂನು ಕ್ರಮದ ಮೂಲಕ ಸಾಲ ವಸೂಲಿ ಮಾಡಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಿದೆ. ಪ್ರಸ್ತುತ ತುರ್ತಾಗಿ ಹೊಸದಾಗಿ ಸಾಲ ಮಂಜೂರಾತಿ ಮಾಡಬೇಕಾದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಬ್ಯಾಂಕಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟು ನೆರವಿಗೆ ಬರುವಂತೆ ಕೋರಬೇಕಾಗಿದೆ. ಒಟ್ಟಾರೆ ಬ್ಯಾಂಕಿನ ಆಡಳಿತ ಮಂಡಳಿ ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ರೈತರ ಭವಿಷ್ಯ ಅಡಗಿದೆ.
ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
ಬ್ಯಾಂಕ್ ಪ್ರಸ್ತುತ ಸಾಲದಲ್ಲಿ ಮುನ್ನಡೆಯುತ್ತಿದ್ದು, ನಬಾರ್ಡ್ ಮೂಲಕ ಬ್ಯಾಂಕ್ ಪಡೆದುಕೊಂಡಿರುವ ಸಾಲ ಬಾಕಿ ಉಳಿದಿದೆ. ಹೊಸದಾಗಿ ಸಾಲ ಪಡೆಯಲು ಬಾಕಿ ಪಾವತಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸಾಲ ಮರುಪಾವತಿ ಮಾಡದ ರೈತರಿಂದ ಕಠಿಣ ಕ್ರಮದ ಮೂಲಕ ಬಾಕಿ ವಸೂಲಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.- ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
------------------------------------------------------------------------
ರಾಜ್ಯದಲ್ಲಿರುವ ಬಹುತೇಕ ಪಿಎಲ್‌ಡಿ ಬ್ಯಾಂಕ್‌ಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ಈ ಬ್ಯಾಂಕ್ ಮಾತ್ರ ಹಲವಾರು ವರ್ಷಗಳಿಂದ ಸಾಲದಲ್ಲಿ ಮುನ್ನಡೆಯುತ್ತಿದ್ದು, ಸರ್ಕಾರ ಹಲವಾರು ಬಾರಿ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ರಿಯಾಯಿತಿಗಳನ್ನು ನೀಡಿದೆ. ಆದರೂ ಸಹ ಬಹಳಷ್ಟು ರೈತರು ಸದ್ಬಳಕೆ ಮಾಡಿಕೊಂಡು ಸಾಲ ಮರುಪಾವತಿ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಬ್ಯಾಂಕ್ ಮುನ್ನಡೆಸುವುದು ಬಹಳ ಕಷ್ಟಕರವಾಗಿದೆ.- ವಿರೂಪಾಕ್ಷಪ್ಪ, ಮಾಜಿ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
No comments:
Post a Comment