Monday, November 13, 2023

ವಿಮಾ ಚಿಕಿತ್ಸಾಯಕ್ಕೆ ಕಟ್ಟಡ, ವಸತಿ ಗೃಹ ನಿರ್ಮಾಣಕ್ಕೆ ೧೦ ಕೋ ರು. ಅನುದಾನ ಬಿಡುಗಡೆಗೊಳಿಸಿ

ಕಾರ್ಮಿಕ ಸಚಿವರಿಗೆ ಶಾಸಕ ಸಂಗಮೇಶ್ವರ್ ಮನವಿ

ಬಿ.ಕೆ ಸಂಗಮೇಶ್ವರ್
    ಭದ್ರಾವತಿ: ಕಾರ್ಮಿಕರ ವಿಮಾ ಚಿಕಿತ್ಸಾಯಕ್ಕೆ ಸರ್ಕಾರಿ ಕಟ್ಟಡ ಮತ್ತು ವಸತಿ ಗೃಹ ನಿರ್ಮಿಸಿಕೊಡಲು ರು. ೧೦ ಕೋ. ಅನುದಾನ ಬಿಡುಗಡೆಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಮಿಕ ಸಚಿವ ಸಂತೋಷ್ ಲಾಡ್‌ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
    ಕ್ಷೇತ್ರದಲ್ಲಿ ಸುಮಾರು ೨೫ ವರ್ಷಗಳಿಂದ ಕಾರ್ಮಿಕರ ವಿಮಾ ಚಿಕಿತ್ಸಾಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಕ್ಷೇತ್ರದಲ್ಲಿ ಸುಮಾರು ೨೦ ಸಾವಿರ ಎಂ.ಆರ್.ಇ ಕಾರ್ಡ್‌ಗಳು ಇದ್ದು, ವಿಮಾದಾರರು ಹಾಗು ಅವರ ಅವಲಂಬಿತರು ಸೇರಿದಂತೆ ಸುಮಾರು ೬೦ ಸಾವಿರ ವಿಮಾರೋಗಿಗಳು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಿಶಾಲವಾದ ಸರ್ಕಾರಿ ಕಟ್ಟಡ ಹಾಗು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಿಸಿಕೊಡುವುದು ಅವಶ್ಯಕವಾಗಿದೆ.
    ಈ ಹಿನ್ನಲೆಯಲ್ಲಿ ಅಗತ್ಯವಿರುವ ಸುಮಾರು ರು. ೧೦ ಕೋ. ಅನುದಾನ ಬಿಡುಗಡೆಗೊಳಿಸುವ ಮೂಲಕ ಕಾರ್ಮಿಕರ ಹಿತ ಕಾಪಾಡುವಂತೆ ಮನವಿಯಲ್ಲಿ ಕೋರಿದ್ದಾರೆ.

ನಗರಸಭೆಯಿಂದ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಜಾಗೃತಿ ಕಾರ್ಯಕ್ರಮ

ಭದ್ರಾವತಿ ನಗರಸಭೆ ವತಿಯಿಂದ ಸ್ವಚ್ಛ ಭಾರತ ಯೋಜನೆ ೨.೦ ಅಡಿಯಲ್ಲಿ ಸ್ವಚ್ಛ ದೀಪಾವಳಿ, ಶುಭ ದೀಪಾವಳ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ನಗರಸಭೆ ವತಿಯಿಂದ ಸ್ವಚ್ಛ ಭಾರತ ಯೋಜನೆ ೨.೦ ಅಡಿಯಲ್ಲಿ ಸ್ವಚ್ಛ ದೀಪಾವಳಿ, ಶುಭ ದೀಪಾವಳ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ನಗರಸಭೆ ವ್ಯಾಪ್ತಿಯ ವಿವಿಧೆಡೆ ಜನನಿಬಿಡ ಸಂತೆ ಮೈದಾನ, ಮಾರುಕಟ್ಟೆ, ವಾಣಿಜ್ಯ ರಸ್ತೆಗಳಲ್ಲಿ, ಅಂಗಡಿ ಮುಂಗಟ್ಟುಗಳ ಬಳಿ ನಗರಸಭೆ ಆರೋಗ್ಯ ಶಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಂದ ಪರಿಸರ ಸ್ನೇಹಿ ಪಟಾಕಿ ಹಾಗು ದೀಪ ಬಳಸುವ ಮೂಲಕ ವಾಯು ಮಾಲಿನ್ಯ ರಹಿತ ದೀಪಾವಳಿ ಆಚರಿಸುವಂತೆ ಕರೆ ನೀಡಲಾಯಿತು.
    ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಕಿರಿಯ ಆರೋಗ್ಯ ನಿರೀಕ್ಷಕರಾದ ಶೃತಿ, ಎಂ. ನಿತೀಶ್ ಸೇರಿದಂತೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮನುಷ್ಯರಿಗೆ ಆಸ್ತಿ, ಹಣಕ್ಕಿಂತ ಆರೋಗ್ಯವೇ ಮುಖ್ಯ : ಪಾದರ್ ಕ್ಲಿಪರ್ಡ್ ರೋಷನ್ ಪಿಂಟೊ

ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ೩೫ನೇ ವಾರ್ಷಿಕೋತ್ಸವ ಹಾಗೂ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದಶಮಾನೋತ್ಸವದ ಅಂಗವಾಗಿ ಭದ್ರಾವತಿ ತಾಲೂಕಿನ ಕಾರೇಹಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಪಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಉದ್ಘಾಟಿಸಿದರು.
    ಭದ್ರಾವತಿ: ಮನುಷ್ಯರಿಗೆ ಆಸ್ತಿ, ಹಣಕ್ಕಿಂತ ಆರೋಗ್ಯವೇ ಮುಖ್ಯ. ಈ ಹಿನ್ನಲೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ನಿರ್ದೇಶಕರಾದ ವಂದನಿಯ ಪಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಹೇಳಿದರು.
    ಅವರು ಸೊಸೈಟಿ ೩೫ನೇ ವಾರ್ಷಿಕೋತ್ಸವ ಹಾಗೂ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದಶಮಾನೋತ್ಸವದ ಅಂಗವಾಗಿ ತಾಲೂಕಿನ ಕಾರೇಹಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  
    ಮನುಷ್ಯರ ಬಳಿ ಎಷ್ಟೇ ಹಣ, ಚಿನ್ನ, ಆಸ್ತಿ ಇದ್ದರೂ, ಆಗರ್ಭ ಶ್ರೀಮಂತರಾಗಿದ್ದರೂ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಆರೋಗ್ಯವಂತನಾಗಿದ್ದರೇ ಮಾತ್ರ ಎಲ್ಲಾ ಶ್ರೀಮಂತಿಕೆ ಅಳಿಸಿಹಾಕಬಹುದು ಎಂದರು.
     ಕಾರೇಹಳ್ಳಿ ಧರ್ಮಕೇಂದ್ರದ ವಂದನಿಯ ಪಾದರ್ ಸಂತೋಷ್ ಮಾತನಾಡಿ, ನಗುವಿನಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
    ಶಿವಮೊಗ್ಗ ನಂಜಪ್ಪ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ನಮ್ರತಾ ಉಡುಪ, ಸ್ತನ ಕ್ಯಾನ್ಸರ್, ಗರ್ಭಕೋಶ ಮತ್ತು ಕರುಳು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು.
    ಶಿಬಿರದಲ್ಲಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ಜನರಲ್ ಪಿಜಿಷಿಯನ್ ಹಾಗು ಮೂಳೆ, ಕೀಳು ಮತ್ತು ಮಕ್ಕಳ ತಜ್ಞರು ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಿದರು. ಶಿವಮೊಗ್ಗ ಐದೃಷ್ಟಿ ಆಸ್ಪತ್ರೆಯಿಂದ ಉಚಿತ ತಪಾಸಣೆ ನಡೆಸಲಾಯಿತು. ಕಾರೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು ೧೪೨ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.

ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್‌ನಿಂದ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ನೆರವು

ಭದ್ರಾವತಿ ಹುತ್ತಾ ಕಾಲೋನಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಹೊಸ ಸಿದ್ದಾಪುರ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವಿಗೆ ಮುಂದಾಗಿದೆ.
    ಭದ್ರಾವತಿ: ನಗರದ ಹುತ್ತಾ ಕಾಲೋನಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಹೊಸ ಸಿದ್ದಾಪುರ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವಿಗೆ ಮುಂದಾಗಿದೆ.
   ಕಳೆದ ೨ ವರ್ಷಗಳಿಂದ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ವತಿಯಿಂದ ನೆರವು ನೀಡುತ್ತಿದ್ದು, ಈ ಬಾರಿ ಸಹ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಈ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ.
ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
    ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಲಿಮಿಟೆಡ್ ಲೆಕ್ಕ ಪರಿಶೋಧನೆ ವಿಭಾಗದ ವ್ಯವಸ್ಥಾಪಕ ಶಾಬಾಸ್ ಖಾನ್, ಮಾರುಕಟ್ಟೆ ವ್ಯವಸ್ಥಾಪಕ ವಸಂತ ವಿಭಾಗೀಯ ವ್ಯವಸ್ಥಾಪಕ ಸುಂದರೇಶ್, ಸಿಬ್ಬಂದಿಗಳಾದ ಅಫ್ಜಲ್ ಬೇಗ್, ಅಕ್ಷಿತಾ, ಕಾವ್ಯ ಮತ್ತು ಭಾಗ್ಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.