
ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ ರಂದು ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ ರಂದು ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಪ್ರತಿ ವರ್ಷ ಗ್ರಾಮದ ಸರ್ವ ಧರ್ಮದವರು ಒಟ್ಟಾಗಿ ಈ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಮಹೋತ್ಸವದ ಮೊದಲು ೩ ದಿನಗಳ ಕಾಲ ಆಧ್ಯಾತ್ಮಿಕ ಭಕ್ತಿ ಕಾರ್ಯಗಳು ಪ್ರಾರಂಭಗೊಂಡಿದ್ದು, ಮಂಗಳವಾರ ಸಂಜೆ ಶಿವಮೊಗ್ಗ ಸೆಕ್ರೆಟ್ ಆರ್ಟ್ ಪ್ರಧಾನಾಲಯದ ಧರ್ಮಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜರವರಿಂದ ದ್ವಜಾರೋಹಣ, ಪೂಜಾ ವಿಧಿವಿಧಾನದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬುಧವಾರ ಸಂಜೆ ಸೊರಬ ಧರ್ಮಕೇಂದ್ರದ ಧರ್ಮಗುರುಗಳಾದ ಫಾದರ್ ರಾಬರ್ಟ್ ಡಿಮೆಲ್ಲೊ ರವರಿಂದ ದಿವ್ಯ ಬಲಿ ಪೂಜೆ ಜರುಗಿತು.
ಜೂ.೧೨ರ ಗುರುವಾರ ಸಂಜೆ ಶಿವಮೊಗ್ಗ ಧರ್ಮ ಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್ ಡಿಸೋಜಾರವರಿಂದ ಪೂಜಾ ವಿಧಿ ವಿಧಾನಗಳು ನೆರವೇರಲಿದ್ದು, ನಂತರ ಗ್ರಾಮದ ರಸ್ತೆಗಳಲ್ಲಿ ಭವ್ಯ ತೇರಿನ ಮೆರವಣಿಗೆ ನಡೆಯಲಿದೆ.
ಜೂ.೧೩ರ ಶುಕ್ರವಾರ ಸಂತ ಅಂತೋಣಿಯವರು ಮೃತಪಟ್ಟ ದಿನವಾಗಿದ್ದು, ಅವರ ಸ್ಮರಣೆಗಾಗಿ ವಾರ್ಷಿಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರಿಂದ ಭಕ್ತಿಭಾವದ ವಿಶೇಷ ಪೂಜಾ ವಿಧಿ-ವಿಧಾನಗಳು, ಪ್ರಾರ್ಥನೆಗಳು, ಪ್ರಭೋದನೆಗಳು, ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ.
ಮಹೋತ್ಸವಕ್ಕೆ ತಾಲೂಕಿನ ಹಳೇನಗರ, ನ್ಯೂಟೌನ್, ಮಾವಿನಕೆರೆ, ಕಾಗದನಗರ, ಹಿರಿಯೂರು ಧರ್ಮ ಕೇಂದ್ರಗಳ ಹಾಗು ಜಿಲ್ಲೆಯ ಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ ಸೇರಿದಂತೆ ತಾಲೂಕು ಹಾಗು ಜಿಲ್ಲಾ ಧರ್ಮಕೇಂದ್ರಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ
ಧರ್ಮಗುರು ಫಾದರ್ ಸಂತೋಷ ಅಲ್ಮೇಡ
ಪ್ರತಿವರ್ಷದ ಜಾತ್ರಾಮಹೋತ್ಸವಕ್ಕೆ ಎಲ್ಲೆಡೆಯಿಂದ ಸಾವಿರಾರು ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಅವರಿಗೆ ಬೇಕಾದ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲು ಅಕ್ಕ-ಪಕ್ಕದ ಧರ್ಮ ಕೇಂದ್ರದ ಗುರುಗಳ, ಧರ್ಮ ಭಗಿನಿಯರ ಸಹಾಯ ಪಡೆಯಲಾಗಿದೆ. ಸ್ಥಳೀಯ ಧರ್ಮ ಕೇಂದ್ರದ ಭಕ್ತಾದಿಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿ ವಿಂಗಡಿಸಿ, ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ ಅಲ್ಮೇಡ ತಿಳಿಸಿದ್ದಾರೆ.
ಪುಣ್ಯಕ್ಷೇತ್ರ ವಿಶೇಷತೆ :
ಈ ಪುಣ್ಯಕ್ಷೇತ್ರದಲ್ಲಿ ಬೇಡಿದ್ದನ್ನು ಪಡೆದಿರುವ ನಂಬಿಕೆ ಭಕ್ತರಲ್ಲಿ ಹಾಳವಾಗಿ ಬೇರೂರಿದೆ. ಅನೇಕ ಪವಾಡಗಳು ನಡೆದಿರುವುದು ಭಕ್ತರಿಂದ ತಿಳಿದು ಬಂದಿದೆ. ಈ ಹಿಂದೆ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಮೃತರಾದ ದಿವಂಗತ ಫಾದರ್ ಅಂತೋಣಿ ಪೀಟರ್ ರವರ ಸೇವಾ ಅವಧಿಯಲ್ಲಿ `ದೇವರ ಸುವಾರ್ತೆಯನ್ನು ಪ್ರಬೋಧಿಸಿದ ಸಂತ ಅಂತೋಣಿಯವರ ನಾಲಿಗೆಯ ಅವಶೇಷವನ್ನು' ಇಟಲಿಯ ಪಾದುವ ದೇಶದಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಪ್ರತಿ ತಿಂಗಳ ಮೂರನೇ ಭಾನುವಾರ ಪ್ರತಿಷ್ಠಾಪಿಸಿರುವ ಅವಶೇಷ ಹೊರಗೆ ತೆಗೆದು ಭಕ್ತಾದಿಗಳ ದರ್ಶನಕ್ಕೆ ಇಡಲಾಗುತ್ತದೆ. ಅಂದು ತಿಂಗಳ ಹಬ್ಬ ಎಂದು ವಿಶೇಷ ಪೂಜಾ ವಿಧಿ-ವಿಧಾನ, ಆರಾಧನೆ, ರೋಗಿಗಳಿಗೆ ತೈಲಾಭಿಷೇಕದ ಪ್ರಾರ್ಥನೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ನಡೆಯುತ್ತವೆ.
ಅವಶೇಷದ ಬಳಿ ಬಂದು ಪ್ರಾರ್ಥಿಸುವವರ ಪ್ರಾರ್ಥನೆಗಳು ನೆರವೇರುತ್ತಿದ್ದು, ಭಕ್ತಾಧಿಗಳಲ್ಲಿ ಹೆಚ್ಚು ವಿಶ್ವಾಸ, ನಂಬಿಕೆ, ಭಕ್ತಿ ಬೆಳೆಯುವಂತೆ ಮಾಡಿದೆ. ಇದರಿಂದ ಪುಣ್ಯಕ್ಷೇತ್ರವು ಪ್ರಸಿದ್ದಿ ಮತ್ತು ಪ್ರಖ್ಯಾತಿ ಪಡೆದಿದೆ ಎಂದು ಸೈಂಟ್ ಡೊಮಿನಿಕ್ ಸಿಸ್ಟರ್ ಲಾಲಾಮ್ಮ ತಿಳಿಸಿದ್ದಾರೆ.
ವಾರ್ಷಿಕ ಮಹೋತ್ಸವಕ್ಕೆ ಆಗಮಿಸಲಿರುವ ಭಕ್ತರಿಗಾಗಿ ಚರ್ಚ್ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಂದಂತಹ ಭಕ್ತರಿಗೆ ಊಟದ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಡಿಕೊಂಡ ಬೇಡಿಕೆಗಳು ಫಲಿಸಿರುವ ಕಾರಣ ಹರಕೆ ತೀರಿಸಲು ಅಂದು ದೂರದ ಊರುಗಳಿಂದ ಅನೇಕ ಭಕ್ತಾಧಿಗಳು ಕಾಲ್ನಡಿಗೆಯಲ್ಲೇ ಬರುವುದು ವಿಶೇಷ ಎಂದು ಧರ್ಮ ಕೇಂದ್ರದ ಕಾರ್ಯದರ್ಶಿ ಬೆರ್ನಡೆಟ್ ಮೇರಿ ತಿಳಿಸಿದ್ದಾರೆ.