ಪದೋನ್ನತಿ ಹೊಂದಿದ ೧೦ ನೌಕರರಿಗೆ ಅಭಿನಂದನೆ
ಭದ್ರಾವತಿ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಗೋವಿಂದಸ್ವಾಮಿ ಮತ್ತು ಆಂಜನೇಯಸ್ವಾಮಿ ಹಾಗು ಹೊರ ಗುತ್ತಿಗೆ ಆಧಾರದಡಿ ನೀರು ಸರಬರಾಜು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಪದೋನ್ನತಿ ಹೊಂದಿರುವ ೧೦ ಮಂದಿ ನೌಕರರನ್ನು ಅಭಿನಂದಿಸಲಾಯಿತು.
ಭದ್ರಾವತಿ : ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಗೋವಿಂದಸ್ವಾಮಿ ಮತ್ತು ಆಂಜನೇಯಸ್ವಾಮಿ ಹಾಗು ಹೊರ ಗುತ್ತಿಗೆ ಆಧಾರದಡಿ ನೀರು ಸರಬರಾಜು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಪದೋನ್ನತಿ ಹೊಂದಿರುವ ೧೦ ಮಂದಿ ನೌಕರರನ್ನು ಅಭಿನಂದಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಗೋವಿಂದಸ್ವಾಮಿ, ನಗರಸಭೆಯಲ್ಲಿ ಸುಮಾರು ೧೦ ವರ್ಷಗಳು ದಿನಗೂಲಿ ನೌಕರನಾಗಿ ಹಾಗು ೩೦ ವರ್ಷ, ೩ ತಿಂಗಳು ಕಾಲ ಕಾಯಂ ನೌಕರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಈ ಪೈಕಿ ಭದ್ರಾವತಿ ನಗರಸಭೆಯಲ್ಲಿ ೩೬ ವರ್ಷಗಳ ಸುಧೀರ್ಘ ಕರ್ತವ್ಯ ನಿರ್ವಹಿಸಿರುವುದು ಆತ್ಮತೃಪ್ತಿ ನೀಡಿದೆ. ಕರ್ತವ್ಯ ನಿರ್ವಹಣೆಯಲ್ಲಿ ಸಹಕರಿಸಿದ ಶಾಸಕರು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಸುಧೀರ್ಘವಾಗಿ ಕರ್ತವ್ಯ ನಿರ್ವಹಿಸುವುದು ಸುಲಭವಲ್ಲ. ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ವಯೋ ನಿವೃತ್ತಿ ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ. ನಿವೃತ್ತಿಯಾದ ಎಲ್ಲರ ಜೀವನ ಸುಖಕರವಾಗಿರಲಿ. ಹೆಚ್ಚಿನ ಅನುಭವ ಹೊಂದಿರುವ ನಿವೃತ್ತ ನೌಕರರು ತಮ್ಮ ಬಿಡುವಿನ ವೇಳೆ ಕಚೇರಿಗೆ ಬಂದು ಸಲಹೆ ಸೂಚನೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ ಮಾತನಾಡಿ, ನಿವೃತ್ತಿ ಸಹಜವಾದರೂ ಆರೋಗ್ಯ ಮುಖ್ಯವಾಗಿರಬೇಕು. ಕುಟುಂಬ ಸದಸ್ಯರೊಂದಿಗೆ ಜೀವನ ಸುಖವಾಗಿರಬೇಕು. ನಿವೃತ್ತಿ ನಂತರ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಲಭಿಸಬೇಕು. ಇತ್ತೀಚೆಗೆ ಸರ್ಕಾರ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡಿದ್ದು, ಇದರಿಂದಾಗಿ ನಿವೃತ್ತರು ನೆಮ್ಮೆದಿಯಿಂದ ಜೀವನ ಸಾಗಿಸುವಂತಾಗಿದೆ. ಪದೋನ್ನತಿ ಪಡೆದವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಎಂದರು.
ನಿವೃತ್ತ ಅಧಿಕಾರಿ ಈಶ್ವರಪ್ಪ ಮಾತನಾಡಿ, ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳು ಸ್ವಾತಂತ್ರ ಪೂರ್ವದಲ್ಲಿ ರಚನೆಯಾದ ನೈರ್ಮಲ್ಯ ಕಾಪಾಡುವ ಸ್ಥಳೀಯ ಸಂಸ್ಥೆಗಳ ನೌಕರರಿಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಷಾಧಿಸಿದರು.
ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ಟಿಪ್ಪುಸುಲ್ತಾನ್, ಕಚೇರಿ ವ್ಯಪಸ್ಥಾಪಕಿ ಎಂ. ಸುನಿತಾಕುಮಾರಿ, ಕಾರ್ಯಪಾಲಕ ಅಭಿಯಂತರ ಬಿ.ಬಿ ಶಿವಪ್ರಸಾದ್, ಪರಿಸರ ಅಭಿಯಂತರ ಪ್ರಭಾಕರ್, ಮಹಮ್ಮದ್‌ಗೌಸ್, ಹೇಮಂತ್‌ಕುಮಾರ್, ಚೇತನ್‌ಕುಮಾರ್, ದಲಿತ ಸಂಘಟನೆಗಳ ಪ್ರಮುಖರಾದ ಸತ್ಯ, ಚಿನ್ನಯ್ಯ, ಸಿ.ಜಯಪ್ಪ, ಉಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment