Friday, March 14, 2025

ಆರ್. ಗೌರಮ್ಮ ನಿಧನ


ಆರ್. ಗೌರಮ್ಮ 
ಭದ್ರಾವತಿ: ನಗರದ ಡಾ. ರಾಜ್‌ಕುಮಾರ್ ರಸ್ತೆ, ಹಾಲಪ್ಪ ವೃತ್ತ ಸಮೀಪದ ನಿವಾಸಿ ಆರ್. ಗೌರಮ್ಮ(೮೨) ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಮಾ.೧೨ರಂದು ತಾಲೂಕಿನ ಗೌರಪುರ ಗ್ರಾಮದ ತೋಟದಲ್ಲಿ ನೆರವೇರಿತು. 
ಗೌರಮ್ಮ ವಯೋಸಹಜವಾಗಿ ನಿಧನ ಹೊಂದಿದ್ದು, ಇವರಿಗೆ ಪತಿ, ಉದ್ಯಮಿ ಟಿ.ಎಂ ನಾಗರಾಜ್, ಮೂವರು ಪುತ್ರರರು, ಓರ್ವ ಪುತ್ರಿ ಇದ್ದಾರೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಪುಣ್ಯಸ್ಮರಣೆ ಮಾ.೧೯ರಂದು ಹಾಲಪ್ಪ ವೃತ್ತ ಸಮೀಪದ ಭದ್ರಾ ಪ್ರೌಢಶಾಲೆ ಮುಂಭಾಗದಲ್ಲಿರುವ ಇವರ ನಿವಾಸದಲ್ಲಿ ನೆರವೇರಲಿದೆ. 



ಮಾ.೧೫ರಂದು ಮಹಿಳಾ ದಿನಾಚರಣೆ : ಒಡಲಾಳ ನಾಟಕ ಪ್ರದರ್ಶನ


    ಭದ್ರಾವತಿ: ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ ಸುಗ್ರಾಮ ವತಿಯಿಂದ ಮಾ.೧೫ರಂದು ಹಮ್ಮಿಕೊಳ್ಳಲಾಗಿರುವ ಮಹಿಳಾ ದಿನಾಚರಣೆ ಅಂಗವಾಗಿ ಒಡಲಾಳ ನಾಟಕ ಪ್ರದರ್ಶನಗೊಳ್ಳಲಿದೆ. 
    ನಗರದ ಡಾ. ರಾಜ್‌ಕುಮಾರ್ ರಸ್ತೆ (ಬಿ.ಎಚ್ ರಸ್ತೆ), ಕಾಂಚನ ಹೋಟೆಲ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಒಡಲಾಳ ನಾಟಕ ಪ್ರದರ್ಶನಗೊಳ್ಳಲಿದ್ದು, ನಗರದ ರಂಗ ಕಲಾವಿದೆ ಇಂದು ಡಿ. ನೀನಾಸಂ ಸಾಕವ್ವನ ಪಾತ್ರ ಅಭಿನಯಿಸಲಿದ್ದಾರೆ. ರಂಗ ಕಲಾವಿದರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

೮೮ನೇ ವರ್ಷದ ಹೋಳಿ ಹಬ್ಬ ಆಚರಣೆ : ಮಾ.೧೫ರಂದು ಸಂಪನ್ನ

ಭದ್ರಾವತಿ ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ೮೮ನೇ ವರ್ಷದ ಹೋಳಿ ಹಬ್ಬದ ಆಚರಣೆ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಮನ್ಮಥ ದೇವರು. 
    ಭದ್ರಾವತಿ : ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ೮೮ನೇ ವರ್ಷದ ಹೋಳಿ ಹಬ್ಬದ ಆಚರಣೆ ಮಾ.೧೫ರ ಶನಿವಾರ ಸಂಪನ್ನಗೊಳ್ಳಲಿದೆ. 
    ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಬಳಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯ ಮಂಟಪದಲ್ಲಿ ಕಳೆದ ೪ ದಿನಗಳಿಂದ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ವಿಶೇಷ ಪೂಜೆ ಹಾಗು ಮನಂಜನಾ ಕಾರ್ಯಕ್ರಮಗಳು ಜರುಗುತ್ತಿವೆ. ಶುಕ್ರವಾರ ಸಂಜೆ ಕೊಬ್ಬರಿ ತುಪ್ಪ ಗುಗ್ಗಳದ ಪೂಜೆ ನೆರವೇರಿತು. 
    ಮಾ.೧೫ರ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಓಕುಳಿ ಆಟ(ಬಣ್ಣ ಹಚ್ಚುವ ಆಟ)ನಡೆಯಲಿದೆ. ನಂತರ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಯಲಿದ್ದು, ಅಂತಿಮವಾಗಿ ಮನ್ಮಥ ದೇವರ ದಹನದೊಂದಿಗೆ ಸಂಪನ್ನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಮಾ.೧೬ರಂದು ವಿದ್ಯುತ್ ವ್ಯತ್ಯಯ

 

    ಭದ್ರಾವತಿ: ಮೆಸ್ಕಾಂ ನಗರ ಹಾಗು ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.೧೬ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ  ಸಂಜೆ ೬.೦೦ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
  ಹಳೇನಗರ, ತಾಲೂಕು ಕಛೇರಿ ರಸ್ತೆ, ಅಂಬೇಡ್ಕರ್‌ನಗರ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ ಏರಿಯಾ, ಕಂಚಿನಬಾಗಿಲು, ಶ್ರೀ ಹಳದಮ್ಮ ದೇವಿ ದೇವಸ್ಥಾನದ  ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಸಸೇತುವೆ ರಸ್ತೆ, ಸಿದ್ದಾರೂಢನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಕ.ರಾ.ರ.ಸಾ.ನಿ. ಘಟಕ, ಹೊಳೆಹೊನ್ನೂರು ರಸ್ತೆ, ಖಲಂದರನಗರ, ಜಟ್‌ಪಟ್‌ನಗರ, ಅನ್ವರ್‌ಕಾಲೋನಿ, ಮೊಮಿನ್‌ಮೊಹಲ್ಲಾ, ಅಮೀರ್‌ಜಾನ್ ಕಾಲೋನಿ, ಹೊಸಮನೆ, ಎನ್.ಎಂ.ಸಿ ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯಸಾಯಿ ನಗರ, ಶಿವಾಜಿ ವೃತ್ತ, ಹನುಮಂತನಗರ, ತಮ್ಮಣ್ಣ ಕಾಲೋನಿ, ಸುಭಾಷ್ ನಗರ, ವಿಜಯನಗರ, ಕುವೆಂಪುನಗರ, ನೃಪತುಂಗ ನಗರ, ಸೈಯ್ಯದ್ ಕಾಲೋನಿ ಸೀಗೇಬಾಗಿ, ಹಳೇ ಸೀಗೇಬಾಗಿ, ಅಶ್ವತ್ಥನಗರ, ಕಬಳಿಕಟ್ಟೆ, ಭದ್ರಾಕಾಲೋನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ವೀರಾಪುರ, ಶ್ರೀರಾಮನಗರ, ಅತ್ತಿಗುಂದ, ಗುಡ್ಡದನೇರಲಕೆರೆ, ಕೋಮಾರನಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಹೊಸಹಳ್ಳಿ, ಸಿದ್ದರಮಟ್ಟಿ, ದೇವರಹಳ್ಳಿ. ಸಂಜೀವನಗರ, ಜಯನಗರ, ತಿಪ್ಲಾಪುರ, ಬಸಲೀಕಟ್ಟೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.  

ಕೈವಾರ ತಾತಯ್ಯನವರ ಆದರ್ಶತನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಪರುಸಪ್ಪ ಕುರುಬರ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರದ ವಿವಿಧ ಇಲಾಖೆಗಳು ಹಾಗು ಬಲಿಜ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಕಛೇರಿ ಸಭಾಂಗಣದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ(ಕೈವಾರ ತಾತಯ್ಯ) ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಕಾಲಜ್ಞಾನಿ ಕೈವಾರ ತಾತಯ್ಯನವರ ಆದರ್ಶತನಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮದಿನಾಚರಣೆ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ಹೇಳಿದರು. 
    ಅವರು ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರದ ವಿವಿಧ ಇಲಾಖೆಗಳು ಹಾಗು ಬಲಿಜ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ(ಕೈವಾರ ತಾತಯ್ಯ) ಜನ್ಮದಿನಾಚರಣೆ ಕಾರ್ಯಕ್ರಮದ ನೇತೃತ್ವದವಹಿಸಿ ಮಾತನಾಡಿದರು. 
    ಕೈವಾರ ತಾತಯ್ಯನವರು ಭಕ್ತಿ ಮಾರ್ಗದಲ್ಲಿ ಸಾಗುವ ಮೂಲಕ ಸಮಾಜಕ್ಕೆ ಭಕ್ತಿಗೀತೆ, ಕೀರ್ತನೆಗಳ ಮೂಲಕ ಉತ್ತಮ ಸಂದೇಶಗಳನ್ನು ಸಾರಿದರು. ಇಂದಿನ ಸಮಾಜಕ್ಕೆ ಅವರ ಆದರ್ಶತನಗಳು ಮಾದರಿಯಾಗಿವೆ ಎಂದರು.
    ಬಲಿಜ ಸಂಘದ ಅಧ್ಯಕ್ಷ ಬಲಜ ಸಂಘದ ಅಧ್ಯಕ್ಷ ಎಚ್.ಆರ್ ರಂಗನಾಥ್, ಗೌರವಾಧ್ಯಕ್ಷ ಸುಬ್ರಮಣ್ಯ(ತಾತಯ್ಯ), ಉಪಾಧ್ಯಕ್ಷ ಜಂಗಮಪ್ಪ, ಕಾರ್ಯದರ್ಶಿಗಳಾದ ಟಿ. ರಮೇಶ್, ಸತೀಶ್, ಹಿಂದುಳಿದ ವರ್ಗಗಳ ಮುಖಂಡ ಟಿ. ವೆಂಕಟೇಶ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರ್ ಕಛೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಮಾ.೧೫ರಂದು ಸೌಹಾರ್ದ ಇಫ್ತಾರ್ ಕೂಟ

   

ಭದ್ರಾವತಿ: ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ವತಿಯಿಂದ ಮಾ.೧೫ರ ಶನಿವಾರ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಗಿದೆ. 
    ನಗರದ ಡಾ. ರಾಜ್‌ಕುಮಾರ್ ರಸ್ತೆ (ಬಿ.ಎಚ್ ರಸ್ತೆ), ಆಯಿಷಾ ಮಸೀದಿ ಸಭಾಂಗಣದಲ್ಲಿ ಸಂಜೆ ೫.೩೦ರಿಂದ ಸೌಹಾರ್ದ ಇಫ್ತಾರ್ ಕೂಟ ಆರಂಭಗೊಳ್ಳಲಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಫ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.