Wednesday, April 26, 2023

ಆರೋಗ್ಯ ಸ್ವಾಮಿ ನಿಧನ

ಆರೋಗ್ಯ ಸ್ವಾಮಿ
    ಭದ್ರಾವತಿ, ಏ. ೨೬: ನ್ಯೂಟೌನ್ ನಿವಾಸಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಆರೋಗ್ಯ ಸ್ವಾಮಿ(೭೬) ಬುಧವಾರ ಮಧ್ಯಾಹ್ನ ನಿಧನ ಹೊಂದಿದರು.
    ಪತ್ನಿ ಹಾಗು ಭದ್ರಾವತಿ ಪೀಪಲ್ ಲಿಬರೇಷನ್(ಬಿಪಿಎಲ್) ಸಂಘದ ಉಪಾಧ್ಯಕ್ಷ ವಿಲಿಯಂ ಸಂಪತ್‌ಕುಮಾರ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ನಡೆಯಲಿದ್ದು, ಇವರ ನಿಧನಕ್ಕೆ ಬಿಪಿಎಲ್ ಸಂಘ ಸಂತಾಪ ಸೂಚಿಸಿದೆ.

ಚುನಾವಣೆಯಲ್ಲಿ ಶಾಸಕ ಸಂಗಮೇಶ್ವರ್‌ಗೆ ಬೆಂಬಲವಿಲ್ಲ : ಸುರೇಶ್

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿದರು. 
    ಭದ್ರಾವತಿ, ಏ. ೨೬ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಬೆಂಬಲ ನೀಡಲಾಗಿತ್ತು. ಆದರೆ ನನ್ನ ನಿರೀಕ್ಷೆಯಂತೆ ಅವರು ನಡೆದುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಸಮಾಜ ಸೇವಕ, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಗಮೇಶ್ವರ್‌ರವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಹಿನ್ನಲೆಯಲ್ಲಿ ಅವರಿಗೆ ಬೆಂಬಲ ಸೂಚಿಸಲಾಯಿತು. ಸುಮಾರು ೪ ಚುನಾವಣೆಯಲ್ಲಿ ಅವರಿಗೆ ನೀಡಿದರೂ ಸಹ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಕ್ಷೇತ್ರದಲ್ಲಿ ಇಂದಿಗೂ  ರೌಡಿಗಳ ಹಾವಳಿ ಇದ್ದು, ಇಸ್ಪೀಟ್, ಮಟ್ಕಾ ಸೇರಿದಂತೆ ಜೂಜಾಟ ದಂಧೆ ಮಿತಿ ಮೀರಿದೆ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿ ದಾರಿ ಹಿಡಿದಿವೆ. ಕ್ಷೇತ್ರದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ಲಭ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ನಾನು ನಿರೀಕ್ಷಿಸಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸಂಗಮೇಶ್ವರ್ ಅವರಿಗೆ ನೀಡಿರುವ ಬೆಂಬಲ ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದರು.
    ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವ ಅಭ್ಯರ್ಥಿಗೆ ಈ ಬಾರಿ ನನ್ನ ಬೆಂಬಲವಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಆಯ್ಕೆಮಾಡಿದ್ದಲ್ಲಿ ನಾನೇ ಮುಖ್ಯಮಂತ್ರಿ : ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು

ಭದ್ರಾವತಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ, ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು ಮಾತನಾಡಿದರು.
    ಭದ್ರಾವತಿ, ಏ. ೨೬ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮತದಾರರು ನನ್ನನ್ನು ಆಯ್ಕೆಮಾಡಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಗುರುತು ಕ್ರಮ ಸಂ. ೧೦ ಟಿ.ವಿ(ದೂರದರ್ಶನ) ಆಗಿದ್ದು, ಕಳೆದ ಸುಮಾರು ೩೦ ವರ್ಷಗಳಿಂದ ದೀನದಲಿತರ, ರೈತರ, ಕಾರ್ಮಿಕರ, ಬಡವರ ಬೆನ್ನೆಲುಬಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಹೋರಾಟ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ರಾಜೀರಹಿತ ಹೋರಾಟ ನನ್ನದಾಗಿದೆ ಎಂದರು.  
    ೨೦೧೩ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಹಾಗು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಾದಯಾತ್ರೆ ನಡೆಸಲಾಗಿದ್ದು, ಡಿ.೧೦, ೨೦೨೨ರಿಂದ ಮಾನವಹಕ್ಕುಗಳ ದಿನಾಚರಣೆ ಅಂಗವಾಗಿ ಉಪ್ಪಿನ ರುಣಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದೇನೆ. ಕ್ಷೇತ್ರದ ನೂರಾರು ಹಳ್ಳಿಗಳಲ್ಲಿ ಹಾಗೂ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಉಪ್ಪನ್ನು ಸಂಗ್ರಹಿಸಿ ಸುಮಾರು ೪೭ ದಿನಗಳ ಕಾಲ ೫೧೦ಕಿ.ಮೀ. ಪಾದಯಾತ್ರೆ  ಮೂಲಕ ಹೋರಾಟ ನಡೆಸಿದ್ದೇನೆ ಎಂದರು.
    ನಗರದ ಬಿ.ಹೆಚ್ ರಸ್ತೆ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲ ಸಮ ಖಂಡಿಸಿ ೨೦೦೯ರಲ್ಲಿ ಸುಮಾರು ೫೨೩ ದಿನಗಳು ಹಗಲು-ರಾತ್ರಿ ಸತ್ಯಾಗ್ರಹ ನಡೆಸಿದ್ದೇನೆ. ಡಾ. ಬಿ.ಆರ್ ಅಂಬೇಡ್ಕರ್ ಭವನ ನಗರದ ಕೇಂದ್ರ ಭಾಗವಾದ ಕನಕ ಮಂಟಪ ಸಮೀಪ ನಿರ್ಮಾಣಗೊಳ್ಳಲು ಪ್ರಮುಖ ಕಾರಣಕರ್ತನಾಗಿದ್ದೇನೆ. ೧೦೦ ದಿನ ಉದ್ಯೋಗ ಖಾತ್ರಿ ಕೆಲಸ ನೀಡದ ಎಲ್ಲಾ ಪಂಚಾಯಿತಿಗಳ ವಿರುದ್ಧ, ನಿವೇಶನ ರಹಿತರ ಬಡ ಜನರ ಬಗ್ಗೆ ಪಡಿತರ ಚೀಟಿ ಇತರೆ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ನಡೆಸಿದ್ದೇನೆ. ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗಾಗಿ ನಿರಂತರ ಹೋರಾಟ ಹಾಗು ಮಾನವ ಹಕ್ಕುಗಳ ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ೨೦೧೮ರಲ್ಲಿ ವಿಧಾನಸಭೆ ಚುನಾವಣಿಯಲ್ಲಿ ಸ್ಪರ್ಧಿಸಿದ್ದು, ಇದೀಗ ೨ನೇ ಬಾರಿಗೆ ಚುನಾವಣಿಗೆ ಸ್ಪರ್ಧಿಸಿದ್ದೇನೆ ಎಂದರು.
    ಕ್ಷೇತ್ರದಲ್ಲಿ ಅನೇಕ ಮಹನೀಯರು ಶಾಸಕರಾಗಿ ಸೇವೆ ಸಲ್ಲಿಸಿದ್ದು, ಇದುವರೆಗೂ ಯಾರು ಸಹ ಮಂತ್ರಿಯಾಗದೆ ಅವಮಾನಗೊಂಡಿರುವುದು ದುರ್ದೈವದ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಕಂಡು ಬರುತ್ತಿದ್ದು, ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯಲು ಸಾಧ್ಯವಿಲ್ಲದಿರುವ ಕಾರಣದಿಂದ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಆಯ್ಕೆಯಾದರೆ ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಸಾಧ್ಯವಾದರೆ ರಾಜ್ಯದ ಮುಖ್ಯ ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು. ಇದು ಆಶ್ಚರ್ಯಪಡುವ ಸಂಗತಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಪ್ರಧಾನ ಸಂಚಾಲಕ ಶ್ರೀನಿವಾಸ್, ಸಂಚಾಲಕ ವೀರೇಶ್, ಕಾರ್ಯದರ್ಶಿ ಅಜಿತ್, ಅಜಯ್ ಉಪಸ್ಥಿತರಿದ್ದರು.