Thursday, June 26, 2025

ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಆರೋಪ : ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಪ್ರತಿಭಟನೆ

ಕರ್ನಾಟಕ ನೀರಾವರಿ ನಿಗಮ ಇಲಾಖೆ ವತಿಯಿಂದ ಸಮುದಾಯ ಭವನಗಳಿಗೆ ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಭದ್ರಾವತಿ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ಕರ್ನಾಟಕ ನೀರಾವರಿ ನಿಗಮ ಇಲಾಖೆ ವತಿಯಿಂದ ಸಮುದಾಯ ಭವನಗಳಿಗೆ ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ನಗರದ ಜನ್ನಾಪುರ ಶ್ರೀ ಅಂತರ ಘಟ್ಟಮ್ಮ ಸಾರ್ವಜನಿಕ ಸಮುದಾಯ ಭವನದ ಕಾಮಗಾರಿಗೆ  ೨೦೧೯-೨೦೨೦ರಲ್ಲಿ ೧೫ ಲಕ್ಷ ರು. ಅನುದಾನ ಬಿಡುಗಡೆಯಾಗಿರುತ್ತದೆ. ಟ್ರಸ್ಟ್ ಅಧಿಕೃತವಾಗಿ ನೋಂದಣಿಯಾಗಿರುವುದಿಲ್ಲ. ಅಲ್ಲದೆ ಸರ್ಮಪಕ ದಾಖಲೆಗಳಿರುವುದಿಲ್ಲ. ಆದರೂ ಸಹ ಅನುದಾನ ಬಿಡುಗಡೆ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
    ಸಮುದಾಯ ಭವನದ ಟ್ರಸ್ಟ್ ನೋಂದಣಿಯಾಗಿರುವುದು ೨೦೨೨-೨೩ರಲ್ಲಿ ಭವನಕ್ಕೆ ನಗರಸಭೆಯವರು ವಿಐಎಸ್‌ಎಲ್‌ಗೆ ಸೇರಿದ ಜಾಗಕ್ಕೆ ಆಕ್ರಮವಾಗಿ ಸರ್ಕಾರಿ ಜಾಗವೆಂದು ಖಾತೆ ಮಾಡಿ ಕೊಟ್ಟಿರುವುದು ದುರಂತ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿವಾಗಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳುವಂತೆ ಆಗ್ರಹಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
    ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಿವ್ಯಶ್ರೀ, ಇಂದ್ರಮ್ಮ, ಮಾಲಮ್ಮ, ಮುನಿಯಮ್ಮ, ಮಾದೇವಿ, ಸುರೇಶ್, ಪರಮೇಶ್ವರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಪ್ರಧಾನಿ ಮೋದಿ ಆಡಳಿತದಲ್ಲಿ ಬಡವ, ರೈತ, ಮಹಿಳೆ, ಯುವಕರ ಅಭಿವೃದ್ಧಿ

ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್

ಬಿಜೆಪಿ ಪಕ್ಷದ ಭದ್ರಾವತಿ ಗ್ರಾಮಾಂತರ ಮಂಡಲ ವತಿಯಿಂದ ಹಿರಿಯೂರು ಮಹಾಶಕ್ತಿ ಕೇಂದ್ರದ ಬಾರಂದೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಇರುವುದು ಕೇವಲ ನಾಲ್ಕು ಜಾತಿ. ಮೊದಲು ಬಡವ, ಎರಡನೇಯದು ರೈತ, ಮೂರನೇಯದು ಮಹಿಳೆ ಮತ್ತು ನಾಲ್ಕನೇಯದು ಯುವಕರು. ಇವರ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಹೇಳಿದರು. 
    ಅವರು ಗುರುವಾರ ಪಕ್ಷದ ಗ್ರಾಮಾಂತರ ಮಂಡಲ ವತಿಯಿಂದ ಹಿರಿಯೂರು ಮಹಾಶಕ್ತಿ ಕೇಂದ್ರದ ಬಾರಂದೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.  ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷದ ಯಶಸ್ವಿ ಆಡಳಿತದ ಅವಧಿಯಲ್ಲಿ ಅವರು ಕೈಗೊಂಡ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯಗಳು ದೊರಕುವಂತಾಗಬೇಕು. ಭಾರತ ಜಗತ್ತಿನಲ್ಲಿಯೇ ರ್ವಶಕ್ತ ರಾಷ್ಟ್ರವಾಗಬೇಕು ಎಂಬುದಾಗಿ ಸಂಕಲ್ಪ ಮಾಡಿದ್ದಾರೆ. ಅವರೊಂದಿಗೆ ನಾವೆಲ್ಲ ಕೈಜೋಡಿಸೋಣ ಎಂದು ಕರೆ ನೀಡಿದರು. 
    ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ಕಾರ್ಯದರ್ಶಿ ಭರತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಹರಿಕೃಷ್ಣ,  ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಖಜಾಂಚಿ ಸತೀಶ್, ಮಂಡಲ ಪ್ರಧಾನ ಕಾರ್ಯದರ್ಶಿ ಮೊಸರಳ್ಳಿ ಅಣ್ಣಪ್ಪ,  ಶಾಂತಣ್ಣ, ತೀರ್ಥಪ್ಪ, ಹನುಮಂತ ನಾಯ್ಕ, ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಕಾರ್ಯಕರ್ತರು, ಉಪಸ್ಥಿತರಿದ್ದರು..

ಮೆಸ್ಕಾಂ ದೂರುಗಳಿಗೆ ೨೪*೭ ಸೇವಾ ಕೇಂದ್ರ

    ಭದ್ರಾವತಿ : ಮೆಸ್ಕಾಂ ವತಿಯಿಂದ ನಗರ ವ್ಯಾಪ್ತಿಯ ಗ್ರಾಹಕರು ವಿದ್ಯುತ್ ಅಡಚಣೆಗೆ ಸಂಬಂಧಿಸಿದ ದೂರುಗಳನ್ನು ನೀಡಲು ೨೪*೭ ಸೇವಾ ಕೇಂದ್ರ ತೆರೆಯಲಾಗಿದೆ. 
    ದೂರು ಸಲ್ಲಿಸುವವರು ೦೮೨೮೨-೨೬೬೭೮೬ ಅಥವಾ ೦೮೨೮೨-೨೬೨೬೩೯ ಅಥವಾ ಟೋಲ್ ಫ್ರೀ ಸಂಖ್ಯೆ-೧೯೧೨ ಸಂಖ್ಯೆಗೆ ಕರೆ ಮಾಡಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ತುಳುನಾಡಿಗರು ಮಾತೃಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಿ : ತಾರನಾಥ್ ಗಟ್ಟಿ ಕಾಪಿಕಾಡ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಭದ್ರಾವತಿ ನಗರದ ತುಳುಕೂಟ ವತಿಯಿಂದ ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ತುಳು ಉತ್ಸವ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು. 
    ಭದ್ರಾವತಿ: ತುಳು ಭಾಷೆಗೆ ತನ್ನದೇ ಆದ ವಿಶಿಷ್ಟತೆ, ಪರಂಪರೆ ಇದೆ. ತುಳುನಾಡಿಗರು ತಮ್ಮ ಮಾತೃಭಾಷೆ ಮೇಲೆ ಅಭಿಮಾನ ಬೆಳೆಸಿಕೊಂಡು ತಮ್ಮ ಮಕ್ಕಳಿಗೆ ಭಾಷೆ ಕಲಿಸಿಕೊಡಬೇಕೆಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು. 
    ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ನಗರದ ತುಳುಕೂಟ ವತಿಯಿಂದ ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ತುಳು ಉತ್ಸವ ಉದ್ಘಾಟಿಸಿ ಮಾತನಾಡಿದರು. 
    ತುಳು ಭಾಷೆಗೆ ಎಲ್ಲೆಡೆ ಹೆಚ್ಚಿನ ಮಾನ್ಯತೆ ಲಭಿಸುತ್ತಿದ್ದು, ಭಾಷೆ ಜೊತೆಗೆ ತುಳು ಸಂಸ್ಕೃತಿ, ಆಚಾರ-ವಿಚಾರಗಳು ಸಹ ನಾವೆಲ್ಲರೂ ರೂಢಿಸಿಕೊಂಡು ಮುಂದಿನ  ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ಇಲ್ಲಿನ ತುಳುಕೂಟ ವಿಶಿಷ್ಟ ಕಾರ್ಯ ಚಟುವಟಿಕೆಗಳೊಂದಿಗೆ ಮುನ್ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. 
    ತುಳುಕೂಟದ ಅಧ್ಯಕ್ಷ ಪಿ. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಾ. ವೈ. ಆನಂದ್, ಉಪಾಧ್ಯಕ್ಷ ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ಹರೀಶ್ ದೇಲಂತಬೆಟ್ಟು ಮತ್ತು ಕಾರ್ಯದರ್ಶಿ ಬಿ. ಸುಬ್ಬಣ್ಣ ರೈ, ಉದ್ಯಮಿ ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಬಿ. ದಿವಾಕರ ಶೆಟ್ಟಿ ಸ್ವಾಗತಿಸಿದರು. ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 
 

ರಾಜ್ಯದಲ್ಲಿ ಅಹಿಂದ ಒಗ್ಗೂಡಿದಾಗ ಹೆಚ್ಚಿನ ಬಲ : ಮಹಮದ್ ಸನಾವುಲ್ಲಾ

ಭದ್ರಾವತಿ ಹಳೇನಗರದ ಜಾಮೀಯಾ ಶಾದಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ಹುಟ್ಟಹಬ್ಬದಲ್ಲಿ ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರಿಂದ ಹುಟ್ಟುಹಬ್ಬದ ಅಭಿಮಾನದ ಮಾತುಗಳನ್ನು ಆಲಿಸಿ ಎಂದು ಅಹಿಂದ ರಾಜ್ಯ ಸಂಚಾಲಕ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ ಮಾತನಾಡಿದರು. 
    ಭದ್ರಾವತಿ : ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗು ದಲಿತರು ಒಗ್ಗೂಡಿದಾಗ ಹೆಚ್ಚಿನ ಬಲ ಬರಲಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಅಹಿಂದ ರಾಜ್ಯ ಸಂಚಾಲಕ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ ಹೇಳಿದರು. 
    ಅವರು ಹಳೇನಗರದ ಜಾಮೀಯಾ ಶಾದಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ತಮ್ಮ ಹುಟ್ಟಹಬ್ಬದಲ್ಲಿ ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರಿಂದ ಹುಟ್ಟುಹಬ್ಬದ ಅಭಿಮಾನದ ಮಾತುಗಳನ್ನು ಆಲಿಸಿ ಮಾತನಾಡಿದರು. 
    ರಾಜ್ಯದಲ್ಲಿ ಅಹಿಂದ ಸಂಘಟಿಸುವ ಉದ್ದೇಶದಿಂದ ಅಹಿಂದ ನಾಯಕರು ಒಗ್ಗಟ್ಟಾಗಿ, ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಹುಟ್ಟುಹಬ್ಬದಲ್ಲಿ ಅಭಿಮಾನದಿಂದ ಪಾಲ್ಗೊಂಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಅಮೀರ್ ಜಾನ್, ಬಾಬಾಜಾನ್, ಕರಿಯಪ್ಪ, ಡಿ.ಟಿ ಶ್ರೀಧರ್ ಸೇರಿದಂತೆ ಇನ್ನಿತರರು ಮಹಮದ್ ಸನಾವುಲ್ಲಾ ಅವರನ್ನು ಅಭಿನಂದಿಸಿ ಮಾತನಾಡಿ, ಎಲ್ಲಾ ಧರ್ಮ, ಜಾತಿ ಜನಾಂಗದವರೊಂದಿಗೆ ಉತ್ತಮ ಸೌಹರ್ದತೆ ಕಾಯ್ದುಕೊಂಡು ಬಂದಿರುವ ಮಹಮದ್ ಸನಾವುಲ್ಲಾರವರು ಹೃದಯ ಶ್ರೀಮಂತಿಕೆ ವ್ಯಕ್ತಿಯಾಗಿದ್ದಾರೆ.  ಸಮಾಜದಲ್ಲಿ ಇಂತಹವರು ಅಪರೂಪವಾಗಿದ್ದು, ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದರು. 
    ಪ್ರಮುಖರಾದ ಭಾಸ್ಕರ್ ಬಾಬು, ಚೌಡಪ್ಪ, ತರುಣ್‌ಕುಮಾರ್, ರಮೇಶ್, ಶಂಕರ್ ರಾವ್, ಇಬ್ರಾಹಿಂ ಖಾನ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

ಜೂ.೨೭ರಂದು ಶ್ರೀ ಕೆಂಪೇಗೌಡ ಜಯಂತಿ


ನಾಡಪ್ರಭು ಶ್ರೀ ಕೆಂಪೇಗೌಡ 
    ಭದ್ರಾವತಿ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡ  ಜಯಂತಿ ಜೂ.೨೭ರ ಶುಕ್ರವಾರ ಅಪ್ಪರ್‌ಹುತ್ತಾ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಸಂಜೆ ೫ ಗಂಟೆಗೆ ಆಯೋಜಿಸಲಾಗಿದೆ. 
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಲಿದ್ದು, ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿಯವರು ಉಪಸ್ಥಿತರಿವರು. ಸಂಘದ ಅಧ್ಯಕ್ಷ ಎಸ್. ಆನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷೆ ಶಾರದಾ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
    ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಶ್ರೀಪಾಲ ಉಪನ್ಯಾಸ ನೀಡಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲು, ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗ್ಡೆ, ತಾಲೂಕು ಒಕ್ಕಲಿಗರ ಸಂಘದ ಮಹಾ ಪೋಷಕ ಎಲ್.ಜಿ ನಾಗರಾಜ್, ಎಚ್.ಎಸ್ ಶಶಾಂಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.