ಶುಕ್ರವಾರ, ಸೆಪ್ಟೆಂಬರ್ 12, 2025

ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ : ಗೋವುಗಳನ್ನು ರಕ್ಷಿಸಲು ಆಗ್ರಹ

ಭದ್ರಾವತಿ ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ ನಡೆಯುತ್ತಿದೆ. ಕಳೆದ ಕೇವಲ ೨೦ ದಿನಗಳಲ್ಲಿ ೯ ಗೋವುಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಹಲವಾರು ವರ್ಷಗಳಿಂದ ಗೋ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಿಂದೂ ಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
     ಭದ್ರಾವತಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಜಾರಿಯಲ್ಲಿದ್ದರೂ ಸಹ ಒಂದೆಡೆ ನಗರದಲ್ಲಿ ಗೋವುಗಳ ಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮತ್ತೊಂದೆಡೆ ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ ನಡೆಯುತ್ತಿದೆ. ಕಳೆದ ಕೇವಲ ೨೦ ದಿನಗಳಲ್ಲಿ ೯ ಗೋವುಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಹಲವಾರು ವರ್ಷಗಳಿಂದ ಗೋ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಿಂದೂ ಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
     ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೧ರ ಜಿಂಕ್‌ಲೈನ್‌ನಲ್ಲಿ ಕಳೆದ ೨೦ ದಿನಗಳಲ್ಲಿ ೩ ರೈತ ಕುಟುಂಬಗಳ ೯ ಗೋವುಗಳನ್ನು ಕಳ್ಳತನ ಮಾಡಲಾಗಿದ್ದು, ಇದರಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ವಿಶೇಷ ಎಂದರೆ ಗೋವುಗಳು ಮೇಯಲು ಹೋದಾಗ ಕಳ್ಳತನವಾಗುತ್ತವೆ. ಆದರೆ ಇಲ್ಲಿ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಕಳ್ಳರ ಬಗ್ಗೆ ಸುಳಿವಿಲ್ಲ. 
     ಗೋವುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿರುವ ರೈತ ಕುಟುಂಬಗಳ ಪರ ಹೋರಾಟಕ್ಕೆ ಮುಂದಾಗಿರುವ ದೇವರಾಜ್‌ರವರು ಪೊಲೀಸರಿಗೆ ದೂರು ನೀಡಿದ್ದರೂ ಸಹ ಇದುವರೆಗೂ ಕಳ್ಳರನ್ನು ಪತ್ತೆ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಲ್ಲಿನ ನಿವಾಸಿಗಳು ಹಗಲಿರುಳು ಗೋವುಗಳನ್ನು ಕಾಯುವ ಪರಿಸ್ಥಿತಿ ಉಂಟಾಗಿದೆ. ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  
     ದೇವರಾಜ್ ಅರಳಿಹಳ್ಳಿಯವರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಸುಧೀಂದ್ರ ಸಾಗರ. ಫೋಕಸ್ ಮಂಜುನಾಥ್,  ರಕ್ಷಿತ್ ಸೇರಿದಂತೆ ಇನ್ನಿತರರು ಗೋವುಗಳನ್ನು ಕಳೆದುಕೊಂಡ ರೈತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.  
 

ಕಣ್ಮನ ಸೆಳೆಯುತ್ತಿದೆ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ

ಭದ್ರಾವತಿ ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಒಂದೇ ಮಾತರಂ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೨೧ನೇ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ಭದ್ರಾವತಿ : ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಒಂದೇ ಮಾತರಂ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೨೧ನೇ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ವೈಭವಯುತ ಅಲಂಕಾರದೊಂದಿಗೆ ೨೧ ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಲಾಗಿದ್ದು,  ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಶನಿವಾರ ಹೋಮ, ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮಂಗಳವಾರ ವಿವಿಧ ಕಲಾತಂಡಗಳ ಮೆರವಣಿಯೊಂದಿಗೆ ವಿಸರ್ಜನೆ ನಡೆಯಲಿದೆ.
 

ಅನಧಿಕೃತ ಅಂಗಡಿಗಳ ತೆರವುಗೊಳಿಸಲು ದೂರು ಸಲ್ಲಿಸಲು ಮುಂದಾದ ಅಂಗಡಿ ಮುಂಗಟ್ಟುಗಳ ಮಾಲೀಕರು

ನಗರಸಭೆ ಆಡಳಿತ ನಿರ್ಲಕ್ಷ್ಯತದ ವಿರುದ್ಧ ಉಪ ಲೋಕಾಯುಕ್ತರಿಗೆ ದೂರು

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು. 
    ಭದ್ರಾವತಿ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ನಗರಸಭೆ ಆಡಳಿತ ನಿರ್ಲಕ್ಷ್ಯತನ ವಹಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. 
    ೨೦೦೮-೨೦೦೯ರಲ್ಲಿ ಬಿ.ಎಚ್ ರಸ್ತೆ ಅಗಲೀಕರಣ ಸಮಯದಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು ಬಿಟ್ಟುಕೊಟ್ಟಿದ್ದ ಜಾಗದಲ್ಲಿಯೇ ಇದೀಗ ಅನಧಿಕೃತ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು ತಲೆ ಎತ್ತಿವೆ. ವಾಹನ ನಿಲುಗಡೆ ನಿಷೇಧಿತ ಸ್ಥಳದಲ್ಲಿಯೇ ನಿರ್ಮಿಸಿಕೊಂಡಿದ್ದರೂ ಸಹ ಪೊಲೀಸರಾಗಲಿ ಅಥವಾ ನಗರಸಭೆ ಆಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
    ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಲ್ಲದೆ ಇಲ್ಲಿ ಸದಾ ಜನಸಂದಣಿಯಿಂದ ಕೂಡಿರುತ್ತದೆ. ಇದರಿಂದಾಗಿ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿದೆ. ಈ ಸಂಬಂಧ ಕಳೆದ ಸುಮಾರು ೧೫ ತಿಂಗಳ ಹಿಂದೆ ನ್ಯೂಟೌನ್ ಪೊಲೀಸ್ ಠಾಣೆಗೂ ಸಹ ದೂರು ನೀಡಲಾಗಿದೆ. ಅಲ್ಲದೆ ಸುಮಾರು ೧ ವರ್ಷದ ಹಿಂದೆ ೨ ಬಾರಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೂ ದೂರು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 
ಈ ನಡುವೆ ಇತ್ತೀಚೆಗೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ನೂತನ ಪೌರಾಯುಕ್ತರನ್ನು ಅಂಗಡಿ ಮುಂಗಟ್ಟುಗಳ ಮಾಲೀಕರು ಭೇಟಿಯಾಗಿ ಚರ್ಚಿಸಿದ್ದು, ಆದರೆ ಪೌರಾಯುಕ್ತರು ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ. ಈ ನಡುವೆ ತಾಲೂಕು ಆಡಳಿತ ಹಾಗು ಜಿಲ್ಲಾಡಳಿತಕ್ಕೂ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. 
ಅಂಗಡಿ ಮುಂಗಟ್ಟುಗಳ ಮಾಲೀಕರಾದ ಶ್ರೀ ಮಾರುತಿ ಸ್ವೀಟ್ ಸ್ಟಾಲ್ & ಬೇಕರಿ ಪುಟ್ಟಸ್ವಾಮಿ, ಜೈ ಹಿಂದೂ ಟ್ರಾನ್ಸ್ ಪೋರ್ಟ್ ಅಬ್ದುಲ್ ನವೀದ್, ಶ್ರೀ ಮಂಜುನಾಥ ಕಾಂಡಿಮೆಂಟ್ಸ್  ಎಚ್.ಆರ್ ಶಿವಕುಮಾರ್, ಜೆ.ಪಿ ರೋಡ್ ಲೈನ್ಸ್ ಮೋಹನ್ ಸಿಂಗ್, ನಿರಾಲ ರೋಡ್‌ವೇಸ್ ಅಂಜನಾಮೂರ್ತಿ, ಹೋಟೆಲ್ ಮಿಲನ್, ವಿಜಯಶ್ರೀ ಕ್ಯಾಂಟೀನ್ ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳ ಮಾಲೀಕರು ದೂರು ಸಲ್ಲಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.