ಶುಕ್ರವಾರ, ಸೆಪ್ಟೆಂಬರ್ 12, 2025

ಅನಧಿಕೃತ ಅಂಗಡಿಗಳ ತೆರವುಗೊಳಿಸಲು ದೂರು ಸಲ್ಲಿಸಲು ಮುಂದಾದ ಅಂಗಡಿ ಮುಂಗಟ್ಟುಗಳ ಮಾಲೀಕರು

ನಗರಸಭೆ ಆಡಳಿತ ನಿರ್ಲಕ್ಷ್ಯತದ ವಿರುದ್ಧ ಉಪ ಲೋಕಾಯುಕ್ತರಿಗೆ ದೂರು

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು. 
    ಭದ್ರಾವತಿ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ನಗರಸಭೆ ಆಡಳಿತ ನಿರ್ಲಕ್ಷ್ಯತನ ವಹಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. 
    ೨೦೦೮-೨೦೦೯ರಲ್ಲಿ ಬಿ.ಎಚ್ ರಸ್ತೆ ಅಗಲೀಕರಣ ಸಮಯದಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು ಬಿಟ್ಟುಕೊಟ್ಟಿದ್ದ ಜಾಗದಲ್ಲಿಯೇ ಇದೀಗ ಅನಧಿಕೃತ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು ತಲೆ ಎತ್ತಿವೆ. ವಾಹನ ನಿಲುಗಡೆ ನಿಷೇಧಿತ ಸ್ಥಳದಲ್ಲಿಯೇ ನಿರ್ಮಿಸಿಕೊಂಡಿದ್ದರೂ ಸಹ ಪೊಲೀಸರಾಗಲಿ ಅಥವಾ ನಗರಸಭೆ ಆಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
    ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಲ್ಲದೆ ಇಲ್ಲಿ ಸದಾ ಜನಸಂದಣಿಯಿಂದ ಕೂಡಿರುತ್ತದೆ. ಇದರಿಂದಾಗಿ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿದೆ. ಈ ಸಂಬಂಧ ಕಳೆದ ಸುಮಾರು ೧೫ ತಿಂಗಳ ಹಿಂದೆ ನ್ಯೂಟೌನ್ ಪೊಲೀಸ್ ಠಾಣೆಗೂ ಸಹ ದೂರು ನೀಡಲಾಗಿದೆ. ಅಲ್ಲದೆ ಸುಮಾರು ೧ ವರ್ಷದ ಹಿಂದೆ ೨ ಬಾರಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೂ ದೂರು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 
ಈ ನಡುವೆ ಇತ್ತೀಚೆಗೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ನೂತನ ಪೌರಾಯುಕ್ತರನ್ನು ಅಂಗಡಿ ಮುಂಗಟ್ಟುಗಳ ಮಾಲೀಕರು ಭೇಟಿಯಾಗಿ ಚರ್ಚಿಸಿದ್ದು, ಆದರೆ ಪೌರಾಯುಕ್ತರು ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ. ಈ ನಡುವೆ ತಾಲೂಕು ಆಡಳಿತ ಹಾಗು ಜಿಲ್ಲಾಡಳಿತಕ್ಕೂ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. 
ಅಂಗಡಿ ಮುಂಗಟ್ಟುಗಳ ಮಾಲೀಕರಾದ ಶ್ರೀ ಮಾರುತಿ ಸ್ವೀಟ್ ಸ್ಟಾಲ್ & ಬೇಕರಿ ಪುಟ್ಟಸ್ವಾಮಿ, ಜೈ ಹಿಂದೂ ಟ್ರಾನ್ಸ್ ಪೋರ್ಟ್ ಅಬ್ದುಲ್ ನವೀದ್, ಶ್ರೀ ಮಂಜುನಾಥ ಕಾಂಡಿಮೆಂಟ್ಸ್  ಎಚ್.ಆರ್ ಶಿವಕುಮಾರ್, ಜೆ.ಪಿ ರೋಡ್ ಲೈನ್ಸ್ ಮೋಹನ್ ಸಿಂಗ್, ನಿರಾಲ ರೋಡ್‌ವೇಸ್ ಅಂಜನಾಮೂರ್ತಿ, ಹೋಟೆಲ್ ಮಿಲನ್, ವಿಜಯಶ್ರೀ ಕ್ಯಾಂಟೀನ್ ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳ ಮಾಲೀಕರು ದೂರು ಸಲ್ಲಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ