Saturday, August 22, 2020

ನಿವೃತ್ತ ಪ್ರಾಂಶುಪಾಲ ಕೆ.ಎಂ ಮೇಘರಾಜ್ ನಿಧನ

ಕೆ.ಎಂ ಮೇಘರಾಜ್
ಭದ್ರಾವತಿ, ಆ. ೨೨: ಹಳೇನಗರ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಎಂ ಮೇಘರಾಜ್(೬೦) ನಿಧನ ಹೊಂದಿದರು.
      ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೇಘರಾಜ್‌ರವರು ಮೂಲತಃ ವಿದ್ಯಾರ್ಥಿ ಸಂಘಟನೆಯಿಂದ ಬೆಳೆದು ಬಂದಿದ್ದು, ಎಬಿವಿಪಿ ಸಂಘಟನೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿದ್ದರು. ನಗರದ ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಹಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಮಾರ್ಚ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ್ದರು. ಹಲವು ವರ್ಷಗಳಿಂದ ತಾಲೂಕು ಗೊಲ್ಲ ಯಾದವ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
      ಮೃತರ ನಿಧನಕ್ಕೆ ಗೊಲ್ಲ ಯಾದವ ಸಮಾಜ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿ ದಾಳಿ : ತೀವ್ರ ಗಾಯ

ಭದ್ರಾವತಿ ತಾಲೂಕಿನ ದೊಡ್ಡೇರಿ ಬಾಳೆಕಟ್ಟೆ ಗ್ರಾಮದ ನಿವಾಸಿ ಜಾನು ಎಂಬುವರು ಕರಡಿಯಿಂದ ತೀವ್ರವಾಗಿ ಗಾಯಗೊಂಡಿರುವುದು.
ಭದ್ರಾವತಿ, ಆ. ೨೨: ತಾಲೂಕಿನ ದೊಡ್ಡೇರಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಕರಡಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಶನಿವಾರ ನಡೆದಿದೆ.
ದೊಡ್ಡೇರಿ ಬಾಳೆಕಟ್ಟೆ ಗ್ರಾಮದಲ್ಲಿ ಬಯಲು ಬಹಿರ್ದೆಸೆಗೆ ತೆರಳಿದ್ದ ಜಾನು ಎಂಬುವರ ಮೇಲೆ ಕರಡಿ ದಾಳಿ ನಡೆಸಿದ್ದು, ಮುಖದ ಒಂದು ಭಾಗ ತೀವ್ರ ಗಾಯಗೊಂಡಿದೆ. ಅಲ್ಲದೆ ಇತರೆಡೆ ಸಹ ಗಾಯಗಳಾಗಿದ್ದು, ಇವರನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಭಾಗದಲ್ಲಿ ಕರಡಿಗಳು ಹೆಚ್ಚಾಗಿದ್ದು, ಹಲವು ಬಾರಿ ಸ್ಥಳೀಯರು ಕರಡಿ ದಾಳಿಗೆ ತುತ್ತಾಗಿದ್ದಾರೆ. ಅಲ್ಲದೆ ದಾಳಿಯಿಂದ ಮೃತಪಟ್ಟಿರುವ ಘಟನೆಗಳು ಸಹ ನಡೆದಿವೆ.  ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಆರೋಪಗಳು ಕೇಳಿ ಬರುತ್ತಿವೆ.