Sunday, September 17, 2023

ಸೇವಾ ಪಾಕ್ಷಿಕ : ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ವರ್ಷದ ಜನ್ಮದಿನ ಸೇವಾ ಪಾಕ್ಷಿಕ ಪ್ರಯುಕ್ತ ಭದ್ರಾವತಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಭದ್ರಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ವರ್ಷದ ಜನ್ಮದಿನ ಸೇವಾ ಪಾಕ್ಷಿಕ ಪ್ರಯುಕ್ತ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಬಿರ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಕ್ತದಾನ ಮಹಾದಾನವಾಗಿದ್ದು, ರಕ್ತದಾನ ದಾನ ಮಾಡುವ ಮೂಲಕ ಸೇವಾಕಾರ್ಯ ನಡೆಸಿದ ದಾನಿಗಳಿಗೆ ಅಭಿನಂದಿಸಿದರು.

    ಯುವ ಮೋರ್ಚಾ ಪ್ರಮುಖರಾದ ಗೋಕುಲ ಕೃಷ್ಣ, ಧನುಷ್ ಬೋಸ್ಲೆ, ಹೇಮಂತ್, ಪ್ರದೀಪ್ ಗೌಂಡರ್ ಹಾಗು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಗೌರಿ-ಗಣೇಶ ಹಬ್ಬದ ಆಚರಣೆಗೆ ಭರದ ಸಿದ್ಧತೆ

 ಕಲಾವಿದರಿಂದ ಮೂರ್ತಿಗಳಿಗೆ ಅಂತಿಮ ಸ್ಪರ್ಶ

ಭದ್ರಾವತಿ ಹಳೇನಗರದ ಹಿರಿಯ ಕಲಾವಿದ ಜಯರಾಂ ಅವರು ಈ ಬಾರಿ ಹಾಲಪ್ಪ ವೃತ್ತದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವುದು.

ಭದ್ರಾವತಿ: ನಗರದೆಲ್ಲೆಡೆ ಗೌರಿ-ಗಣೇಶ ಹಬ್ಬ ಆಚರಣೆಗೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಸಹ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ನಡುವೆ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಈಗಾಗಲೇ ಆಕರ್ಷಕವಾದ ವಿಭಿನ್ನ ಮೂರ್ತಿಗಳು ಪ್ರತಿಷ್ಠಾಪನೆಗೆ ಸಿದ್ದಗೊಂಡಿವೆ.

ಹಳೇನಗರದ ಕುಂಬಾರಬೀದಿ ಗಣೇಶಮೂರ್ತಿ ತಯಾರಿಕೆಯ ಪ್ರಮುಖ ಸ್ಥಳವಾಗಿದ್ದು, ಈ ಬೀದಿಯಲ್ಲಿ ನೂರಾರು ಗಣೇಶಮೂರ್ತಿಗಳು ಪ್ರತಿಷ್ಠಾಪನೆಗಾಗಿ ತಯಾರುಗೊಂಡು ಕಂಗೊಳಿಸುತ್ತಿವೆ.



ಭದ್ರಾವತಿ ಹೊಸಸೇತುವೆ ರಸ್ತೆ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಕಲಾವಿದ ಸೋಮಶೇಖರ್ ಶ್ರೀನಿಧಿ ಕಲಾಕೇಂದ್ರದ ಹೆಸರಿನಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ ಹಿರಿಯ ಕಲಾವಿದ ಜಯರಾಂ ತಯಾರಿಸಿದ್ದು, ಮೂರ್ತಿ 9 ಅಡಿ ಎತ್ತರವಿದ್ದು, ಆಕರ್ಷಕವಾಗಿದೆ. ಈ ಬಾರಿ ಜಯರಾಂ ಅವರು ಆಕರ್ಷಕವಾದ ಸುಮಾರು 20 ಮೂರ್ತಿಗಳನ್ನು ತಯಾರಿಸಿದ್ದಾರೆ. ಇವರು ಸುಮಾರು 30 ವರ್ಷಗಳಿಗೂ ಅಧಿಕ ಕಾಲದಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕಲ್ಲಿನ ಮೂರ್ತಿ ಹಾಗು ಸಿಮೆಂಟ್ ಮೂರ್ತಿಗಳ ತಯಾರಿಕೆಯಲ್ಲೂ ಪರಿಣಿತರಾಗಿದ್ದಾರೆ.

    ಹೊಸಸೇತುವೆ ರಸ್ತೆ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಕಲಾವಿದ ಸೋಮಶೇಖರ್ ಶ್ರೀನಿಧಿ ಕಲಾಕೇಂದ್ರದ ಹೆಸರಿನಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇವರ ಕೈಚಳಕದಲ್ಲಿ ಈ ಬಾರಿ 16 ಮೂರ್ತಿಗಳು ತಯಾರುಗೊಂಡಿವೆ. ಇವುಗಳಲ್ಲಿ ಕೃಷ್ಣ-ರಾಧೆ ಗಣಪ, ಈಶ್ವರ ಗಣಪ, ಆಂಜನೇಯ ಗಣಪ ವಿಶೇಷವಾಗಿ ಗಮನಸೆಳೆದಿವೆ.


ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಆಚರಣೆ ಹಿನ್ನಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

    ಮಹಾದ್ವಾರಗಳ ನಿರ್ಮಾಣ :

    ನಗರದ ಪ್ರಮುಖ ವಿನಾಯಕ ಸೇವಾ ಸಮಿತಿಗಳಲ್ಲಿ ಒಂದಾಗಿರುವ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಆಚರಣೆಗೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಸೆ.26ರಂದು ಬೃಹತ್ ರಾಜಬೀದಿ ಉತ್ಸವ ನಡೆಯಲಿದೆ.