ಸೋಮವಾರ, ಡಿಸೆಂಬರ್ 25, 2023

ಶಾಸಕರ ಆಪ್ತ ಸಹಾಯಕ ಈಶ್ವರ್ ಅಪಘಾತದಲ್ಲಿ ಮೃತ

ಈಶ್ವರ್
    ಭದ್ರಾವತಿ : ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಆಪ್ತ ಸಹಾಯಕ ಈಶ್ವರ್(೪೭) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
    ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಕೂಡ್ಲಿಗೆರೆ ಗ್ರಾಮಕ್ಕೆ ತೆರಳಿ ಪುನಃ ನಗರಕ್ಕೆ ಹಿಂದಿರುಗಿ ಬರುವಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
    ಈಶ್ವರ್ ಬಹಳ ವರ್ಷಗಳಿಂದ ಶಾಸಕರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕುಟುಂಬ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಮಾಜಿ ಸೈನಿಕರ ಸಂಘದಿಂದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ

ಹೋರಾಟ ಸ್ಥಳದಲ್ಲಿ ವಾರ್ಷಿಕ ದಿನದರ್ಶಿಕೆ ಬಿಡುಗಡೆ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಈ ಬಾರಿ ವಿಶೇಷವಾಗಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸೋಮವಾರ ವಾರ್ಷಿಕ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಈ ಬಾರಿ ವಿಶೇಷವಾಗಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸೋಮವಾರ ವಾರ್ಷಿಕ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು. ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಹಾಗು ಕಾರ್ಮಿಕರ ಹಿತಕಾಪಾಡಬೇಕೆಂದು ಆಗ್ರಹಿಸಿ ಕಳೆದ ೩೪೧ ದಿನಗಳಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಹೋರಾಟ ಆರಂಭದಿಂದಲೂ ಬೆಂಬಲಿಸಿಕೊಂಡು ಬಂದಿರುವ ಮಾಜಿ ಸೈನಿಕರ ಸಂಘ ಇದೀಗ ಹೋರಾಟ ಸ್ಥಳದಲ್ಲಿ ವಾರ್ಷಿಕ ದಿನದರ್ಶಿಕೆ ಬಿಡುಗಡೆಗೊಳಿಸುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಪುನಃ ಸದಾ ಕಾಲ ಸಂಪೂರ್ಣವಾಗಿ ಬೆಂಬಲವಿರುವುದಾಗಿ ಸ್ಪಷ್ಟಪಡಿಸಿದೆ.
    ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಸಹಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ಮಹೇಶ್, ಮಾಜಿ ಸೈನಿಕರಾದ ಬೋರೇಗೌಡ, ಉದಯ್, ದೇವರಾಜ್, ಸುರೇಶ್, ಶ್ರೀಧರ, ಶೇಷಾಚಲ, ಕುಮಾರ್, ಅಶೋಕ್, ರಮೇಶ್, ಪ್ರಸಾದ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್ ಸೇರಿದಂತೆ ಪದಾಧಿಕಾರಿಗಳು ಹಾಗು ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.

ಡಿ.೨೬ರಂದು ಜೆಡಿಎಸ್ ಪಕ್ಷದಿಂದ ಧರಣಿ ಸತ್ಯಾಗ್ರಹ

    ಭದ್ರಾವತಿ: ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಹಾಗು ಹೆಚ್ಚುತ್ತಿರುವ ದುರಾಡಳಿತದ ವಿರುದ್ಧ ಡಿ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಜಾತ್ಯಾತೀತ ಜನತಾದಳ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ಪಕ್ಷದ ಮುಖಂಡರಾದ ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.